ಆಗಸ್ಟ್ 1 ರಿಂದ 7 ರವರೆಗೆ ಎದೆ ಹಾಲುಣಿಸುವ ಸಪ್ತಾಹ, ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿಯೂ ಇದೆ ಎದೆ ಹಾಲಿನ ಬ್ಯಾಂಕ್

ವಿಶ್ವ ಆರೋಗ್ಯ ಸಂಸ್ಥೆ ಆಗಸ್ಟ್ 1 ರಿಂದ ಒಂದು ವಾರದವರೆಗೆ ಎದೆ ಹಾಲುಣಿಸುವ ಸಪ್ತಾಹವನ್ನು ಆಚರಿಸಲು ಕರೆ ನೀಡಿದೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಕೆಲವು ಕಡೆಗಳಲ್ಲಷ್ಟೇ ಈ ಎದೆ ಹಾಲಿನ ಬ್ಯಾಂಕ್​ಗಳಿವೆ. ಅವುಗಳ ಸಾಲಿಗೆ ಇದೀಗ ಹುಬ್ಬಳ್ಳಿ-ಧಾರವಾಡ ಅವಳಿ ನಗರವೂ ಸೇರಿದೆ.

ಆಗಸ್ಟ್ 1 ರಿಂದ 7 ರವರೆಗೆ ಎದೆ ಹಾಲುಣಿಸುವ ಸಪ್ತಾಹ, ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿಯೂ ಇದೆ ಎದೆ ಹಾಲಿನ ಬ್ಯಾಂಕ್
ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿಯೂ ಇದೆ ಎದೆ ಹಾಲಿನ ಬ್ಯಾಂಕ್
Follow us
| Updated By: ಆಯೇಷಾ ಬಾನು

Updated on: Aug 03, 2023 | 4:13 PM

ಧಾರವಾಡ, ಆ.03: ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ. ತಾಯಿಯಾದವಳು ತನ್ನ ರಕ್ತವನ್ನೇ ಬಸಿದು, ಎದೆ ಹಾಲು ಮಾಡಿ ಮಗುವಿಗೆ ಕುಡಿಸುತ್ತಾಳೆ(Breastfeeding) . ಹೀಗಾಗಿಯೇ ಶಿಶುವಿದ್ದಾಗ ಎದೆ ಹಾಲು ಬೇಕೆ ಬೇಕು. ವೈದ್ಯಕೀಯ ಶಾಸ್ತ್ರದಲ್ಲಿಯೂ ಇದಕ್ಕೆ ಮಹತ್ವ ನೀಡಲಾಗಿದೆ. ಆದರೆ ಅದೆಷ್ಟೋ ಮಕ್ಕಳು ಇಂದು ಎದೆ ಹಾಲಿನ(Breast Milk) ಕೊರೆತೆಯನ್ನು ಎದುರಿಸುತ್ತಿದ್ದು, ಅದನ್ನು ನೀಗಿಸುವ ಪ್ರಯತ್ನವಾಗಿ ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಆಗಸ್ಟ್ 1 ರಿಂದ 7 ರವರೆಗೆ ಎದೆ ಹಾಲುಣಿಸುವ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಅನೇಕ ಮಹಿಳೆಯರು ಮಕ್ಕಳಿಗೆ ಎದೆ ಹಾಲುಣಿಸುವುದನ್ನು ಕಡೆಗಣಿಸುತ್ತಿದ್ದಾರೆ. ನಗರ ಪ್ರದೇಶದ ಹಾಗೂ ಹೆಚ್ಚು ವಿದ್ಯಾವಂತ ಮಹಿಳೆಯರು ತಮ್ಮ ದೇಹ ಸೌಂದರ್ಯ ಹಾಳಾಗುತ್ತದೆ ಅನ್ನುವ ಕಾರಣಕ್ಕೆ ಹಾಲುಣಿಸುವುದನ್ನು ಬಿಟ್ಟರೆ, ಗ್ರಾಮೀಣ ಪ್ರದೇಶದಲ್ಲಿನ ಅನೇಕರಿಗೆ ಹಲವಾರು ಕಾರಣಗಳಿಂದಾಗಿ ಎದೆ ಹಾಲಿನ ಉತ್ಪಾದನೆಯೇ ಕಡಿಮೆ ಇರೋದ್ರಿಂದ ಅವರಿಗೆ ಹಾಲುಣಿಸುವುದು ಸಾಧ್ಯವಾಗುವುದಿಲ್ಲ. ಆದರೆ ಮಗು ಹುಟ್ಟಿದ ದಿನದಿಂದ ಆರು ತಿಂಗಳವರೆಗೆ ಎದೆ ಹಾಲುಣಿಸುವುದರಿಂದ ಮಕ್ಕಳು ಆರೋಗ್ಯವಂತರಾಗೋದಲ್ಲದೇ ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಆಗಸ್ಟ್ 1 ರಿಂದ ಒಂದು ವಾರದವರೆಗೆ ಎದೆ ಹಾಲುಣಿಸುವ ಸಪ್ತಾಹವನ್ನು ಆಚರಿಸಲು ಕರೆ ನೀಡಿದೆ.

ತಾಯಿಯು ಮಗುವಿಗೆ ಹಾಲುಣಿಸುವಾಗ ಒಂದು ಕಡೆ ಆಕೆ ಮಾತೃತ್ವದ ಸವಿಯನ್ನು ಅನುಭವಿಸುತ್ತಿದ್ದರೆ ಮತ್ತೊಂದು ಕಡೆ ಆಕೆ ತನ್ನ ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಕೂಡ ಕೊಡುತ್ತಿರುತ್ತಾಳೆ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಎದೆ ಹಾಲಿಗೆ ವಿಶಿಷ್ಠ ಸ್ಥಾನವನ್ನು ನೀಡಿದ್ದರು. ಕನಿಷ್ಟ ಆರು ತಿಂಗಳವರೆಗಾದರೂ ತಾಯಿ ತನ್ನ ಮಗುವಿಗೆ ಎದೆ ಹಾಲುಣಿಸಬೇಕು. ಎಷ್ಟೋ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಹಾಲಿನ ಉತ್ಪಾದನೆ ನಿಲ್ಲೋವರೆಗೂ ಮಗುವಿಗೆ ಹಾಲನ್ನು ಉಣ್ಣಿಸುತ್ತಲೇ ಇರುತ್ತಾರೆ. ಇಂಥ ಪ್ರಸಂಗಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಇದನ್ನೂ ಓದಿ: ಸ್ತನ್ಯಪಾನದ ಶಕ್ತಿ: ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಎಂಬುದರ ಬಗ್ಗೆ ತಿಳಿಯಿರಿ

ಮಗು ಜನಿಸಿದ ಅರ್ಧ ಗಂಟೆಯಲ್ಲಿಯೇ ಹಾಲುಣಿಸುವಂತೆ ತಾಯಂದಿರಿಗೆ ವೈದ್ಯರು ಸಲಹೆ ನೀಡುತ್ತಾರೆ. ಆರು ತಿಂಗಳು ನಂತರ ಬೇರೆ ಆಹಾರದ ಜೊತೆಗೆ ಎರಡು ವರ್ಷಗಳವರೆಗೆ ಮಗುವಿಗೆ ಹಾಲು ಕುಡಿಸಬೇಕು. ಮಕ್ಕಳು ಎದೆ ಹಾಲನ್ನು ಸೇವಿಸುವುದರಿಂದ ಮಧುಮೇಹ, ಸ್ಥೂಲಕಾಯತೆ, ಬಾಲ್ಯದ ಕ್ಯಾನ್ಸರ್, ಎದೆ ಸೋಂಕುಗಳಂಥ ರೋಗಗಳಿಗೆ ತುತ್ತಾಗುವುದಿಲ್ಲ. ಇನ್ನು ಮಕ್ಕಳು ಎದೆ ಹಾಲನ್ನು ಹೆಚ್ಚೆಚ್ಚು ಕುಡಿದಂತೆಲ್ಲ ಅದರ ಉತ್ಪಾದನೆಯ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಎದೆ ಹಾಲಿನ ಉತ್ಪಾದನೆ ಕಡಿಮೆಯಾದರೆ ಊಟದಲ್ಲಿ ಸೊಪ್ಪುಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಅದರಲ್ಲೂ ಸಬ್ಬಾಸಿಗೆ ಸೊಪ್ಪು ಬಳಕೆಯಿಂದಾಗಿ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಬಾಣಂತನದಲ್ಲಿ ಇಂಥ ಸೊಪ್ಪುಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಅಂತಾ ನಮ್ಮ ಪೂರ್ವಿಕರು ಹೇಳುತ್ತಿದ್ದುದು ಇದೇ ಕಾರಣಕ್ಕೆ.

ಎದೆ ಹಾಲನ್ನು ಸಂಗ್ರಹಿಯೂ ಇಡಬಹುದು

August 1st to 7th Breastfeeding Week celebration in dharwad breast milk bank in SDM hospital

ಆಗಸ್ಟ್ 1 ರಿಂದ 7 ರವರೆಗೆ ಎದೆ ಹಾಲುಣಿಸುವ ಸಪ್ತಾಹ

ಎಷ್ಟೋ ಸಂದರ್ಭಗಳಲ್ಲಿ ಮಗುವಿಗೆ ಎದೆ ಹಾಲನ್ನು ನೀಡಲು ಸಾಧ್ಯವಾಗೋದೇ ಇಲ್ಲ. ಇದಕ್ಕೆ ಕಾರಣಗಳು ಹಲವಾರು. ಆದರೆ ಎದೆಹಾಲನ್ನು ಸಂಗ್ರಹಿಸಿ ಇಟ್ಟು, ಬೇಕಾದಾಗ ನೀಡಲು ಕೂಡ ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಅನೇಕ ಪ್ರಯತ್ನಗಳು ನಡೆದಿವೆ. ಈ ಸಂಗ್ರಹ ಕಾರ್ಯಕ್ಕಾಗಿಯೇ ಎಲೆಕ್ಟ್ರಿಕ್ ಬ್ರೆಸ್ಟ್ ಪಂಪ್ಗಳು ಬಂದಿವೆ. ಉತ್ತಮ ಮಾದರಿಯ ಹಾಗೂ ಸುಲಭ ಬಳಕೆಯ ಎಲೆಕ್ಟಿಕ್ ಬ್ರೆಸ್ಟ್ ಪಂಪ್‌ಗಳ ಮೂಲಕ ಎದೆ ಹಾಲನ್ನು ಸಂಗ್ರಹಿಸಲು ಅವಕಾಶವಿದೆ. ಆದರೆ ಇದನ್ನು ವೈದ್ಯರ ಅಥವಾ ನುರಿತ ತಜ್ಞರ ಮಾರ್ಗದರ್ಶನದಲ್ಲಿ ಮಾಡುವುದು ಒಳ್ಳೆಯದು. ಸಂಗ್ರಹಿಸಿದ ಎದೆ ಹಾಲನ್ನು ಕೊಠಡಿಯ ತಾಪಮಾನದಲ್ಲಿ ಆರು ಗಂಟೆಗಳವರೆಗೆ ಕೆಡದಂತೆ ಇಡಬಹುದು. ಇದನ್ನು ಫ್ರಿಡ್ಜ್‌ನಲ್ಲಿಟ್ಟು ಘನೀಕರಿಸಿ, ಅಗತ್ಯವಾದಾಗ ಕರಗಿಸಿ, ಮಗುವಿಗೆ ಕೊಡಬಹುದು. ಈ ರೀತಿಯಾಗಿ ಸಂಗ್ರಹಿತ ಹಾಲನ್ನು ಎರಡು ದಿನಗಳವರೆಗೆ ಇಡಬಹುದು.

ಎದೆ ಹಾಲನ್ನು ದಾನ ಕೂಡ ಮಾಡಬಹುದು

ಸಾಮಾನ್ಯವಾಗಿ ನಮ್ಮಲ್ಲಿ ರಕ್ತದಾನ ಮಾಡೋದು ರೂಢಿಯಲ್ಲಿದೆ. ಹೀಗಾಗಿಯೇ ಇಂದು ಬಹುತೇಕ ನಗರಗಳಲ್ಲಿ ಬ್ಲಡ್ ಬ್ಯಾಂಕ್ ಇವೆ. ಆದರೆ ಆ ರಕ್ತದಷ್ಟೇ ಮುಖ್ಯವಾಗಿ ಮಗುವಿದ್ದಾಗ ಬೇಕಾಗುವ ಎದೆ ಹಾಲಿಗಾಗಿಯೇ ನಮ್ಮಲ್ಲಿ ವ್ಯವಸ್ಥೆ ಇರುವುದು ಅತೀ ಕಡಿಮೆ. ಇನ್ನು ಎದೆ ಹಾಲನ್ನು ದಾನ ಮಾಡೋದಂತೂ ನಮ್ಮಲ್ಲಿ ರೂಢಿಯಲ್ಲಿಯೇ ಇಲ್ಲ. ಆದರೆ ಇತ್ತೀಚೆಗೆ ಅದೆಷ್ಟೋ ಮಕ್ಕಳು ಎದೆ ಹಾಲಿನ ಕೊರತೆ ಎದುರಿಸುತ್ತಿದ್ದು, ಅದನ್ನು ನೀಗಿಸುವ ಉದ್ದೇಶಕ್ಕಾಗಿಯೇ ಎದೆ ಹಾಲಿನ ಬ್ಯಾಂಕ್ಗಳನ್ನು ಸ್ಥಾಪಿಸಲಾಗುತ್ತಿದೆ. ಇಂಥ ಬ್ಯಾಂಕ್ಗಳಿಗೆ ಹೋದರೆ ಅಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ಎದೆ ಹಾಲನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಲಾದ ಎದೆ ಹಾಲನ್ನು ಅವಶ್ಯಕವಿರೋ ಮಕ್ಕಳಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಹೆರಿಗೆಯಾದಾಗ ತಾಯಿ ಮರಣ ಹೊಂದಿದರೆ, ಅದೆಷ್ಟೋ ಶಿಶುಗಳಿಗೆ ಎದೆ ಹಾಲು ಸಿಗೋದೇ ಇಲ್ಲ. ಇದಕ್ಕೆ ಪರ್ಯಾಯವಾಗಿ ಬೇರೆ ಬಾಟಲಿ ಹಾಲು ಮಕ್ಕಳಿಗೆ ಕೊಟ್ಟರೂ ತಾಯಿ ಹಾಲಿನಷ್ಟು ಅದು ಪೌಷ್ಟಿಕಾಂಶ ಹೊಂದಿರುವುದಿಲ್ಲ. ಹೀಗಾಗಿಯೇ ಎದೆ ಹಾಲಿನ ಮಹತ್ವದ ಬಗ್ಗೆ ಹಾಗೂ ಅದನ್ನು ದಾನ ಮಾಡುವ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ.

ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿಯೂ ಎದೆ ಹಾಲಿನ ಬ್ಯಾಂಕ್

ಬೆಂಗಳೂರು, ಬೆಳಗಾವಿ ಸೇರಿದಂತೆ ಕೆಲವು ಕಡೆಗಳಲ್ಲಷ್ಟೇ ಈ ಎದೆ ಹಾಲಿನ ಬ್ಯಾಂಕ್​ಗಳಿವೆ. ಅವುಗಳ ಸಾಲಿಗೆ ಇದೀಗ ಹುಬ್ಬಳ್ಳಿ-ಧಾರವಾಡ ಅವಳಿ ನಗರವೂ ಸೇರಿದೆ. ಅವಳಿ ನಗರದಲ್ಲಿ ಇಂಥದ್ದೊಂದು ಬ್ಯಾಂಕ್ಗೆ ಸಾಕಷ್ಟು ಬೇಡಿಕೆ ಇತ್ತು. ಆದರೆ ಆರ್ಥಿಕ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಇಂಥ ಬ್ಯಾಂಕ್ ತೆರೆಯಲು ಯಾರು ಕೂಡ ಮುಂದೆ ಬಂದಿರಲಿಲ್ಲ. ಆದರೆ ಕಳೆದ ವರ್ಷ ಧಾರವಾಡದಲ್ಲಿಯೂ ಇಂಥ ಬ್ಯಾಂಕ್ ಆರಂಭವಾಗಿ, ಇದೀಗ ಸಾಕಷ್ಟು ಉತ್ತಮ ಹೆಸರು ಪಡೆದಿದೆ. ಈ ಬ್ಯಾಂಕ್ ಆರಂಭವಾಗಿರೋದ್ರಿಂದ ನವಜಾತ ಶಿಶುಗಳಿಗೆ ಸಾಕಷ್ಟು ಅನುಕೂಲವಾಗಿದೆ. ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಆರಂಭವಾದ ಈ ಬ್ಯಾಂಕ್ ರಾಜ್ಯದ ಅತಿದೊಡ್ಡ ಮಿಲ್ಕ್ ಬ್ಯಾಂಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ರೋಟರಿ ಕ್ಲಬ್ ಸೆವೆನ್ ಹಿಲ್ಸ್ನ ಅಧ್ಯಕ್ಷೆಯಾಗಿದ್ದ ಡಾ. ಪಲ್ಲವಿ ದೇಶಪಾಂಡೆ ಅವರು ರೋಟರಿ ಇಂಟರ್ ನ್ಯಾಷನಲ್ ಗ್ಲೋಬಲ್ ಗ್ರ್ಯಾಂಟ್ ಅಡಿಯಲ್ಲಿ ಈ ಯುನಿಟ್ನ್ನು ಎಸ್. ಡಿ. ಎಂ. ಆಸ್ಪತ್ರೆಯಲ್ಲಿ ಆರಂಭಿಸಿದರು. ಈ ಬ್ಯಾಂಕ್ ಈಗ ಸಾಕಷ್ಟು ಮಕ್ಕಳ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇದನ್ನೂ ಓದಿ: Health Tips: ಸಸ್ಯಾಹಾರಿ ತಾಯಂದಿರ ಎದೆ ಹಾಲು ಆರೋಗ್ಯಕರವೇ? ಅಧ್ಯಯನ ಹೇಳಿದ್ದೇನು? ಇಲ್ಲಿದೆ ಮಾಹಿತಿ

ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಡಾ. ಪಲ್ಲವಿ ದೇಶಪಾಂಡೆ, ಎದೆ ಹಾಲಿನ ಬಗ್ಗೆ ನಮ್ಮಲ್ಲಿ ಹೆಚ್ಚಿನ ಜಾಗೃತಿ ಇಲ್ಲ. ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಿಕರು ಇದರ ಮಹತ್ವ ಅರಿತಿದ್ದರು. ಆದರೆ ಆಧುನಿಕ ದಿನಗಳಲ್ಲಿ ಹೆಚ್ಚು ಓದಿಕೊಂಡಿರುವ ಮಹಿಳೆಯರೇ ಎದೆ ಹಾಲನ್ನು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಒಂದು ಕಡೆಯಾದರೆ, ಎಷ್ಟೋ ತಾಯಂದಿರಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣವೇ ಕಡಿಮೆ. ಹೀಗಾಗಿ ಅವರ ಮಗುವಿಗೆ ಎದೆ ಹಾಲು ಸಿಗೋದೇ ಇಲ್ಲ. ಇಂಥದ್ದನ್ನು ನೋಡಿಯೇ ನಾವು ಎದೆ ಹಾಲಿನ ಬ್ಯಾಂಕ್ ಆರಂಭಿಸಿದೆವು. ಅಚ್ಚರಿಯ ಸಂಗತಿ ಒಂದು ವರ್ಷದ ಅವಧಿಯಲ್ಲಿ 620 ಕ್ಕೂ ಹೆಚ್ಚು ತಾಯಂದಿರು ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ. 429 ಕ್ಕೂ ಮಕ್ಕಳು ಇದರ ಪ್ರಯೋಜನ ಪಡೆದಿವೆ. ನಿಜಕ್ಕೂ ನಮಗೆ ಇದೊಂದು ಸಂತಸದ ವಿಚಾರ. ಎದೆ ಹಾಲನ್ನು ಕುಡಿದ ಮಕ್ಕಳಲ್ಲಿ ಸಹಜವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎಲ್ಲರೂ ಇಂಥ ಬ್ಯಾಂಕ್​ನ ಸದುಪಯೋಗಪಡಿಸಿಕೊಳ್ಳಬೇಕು. ಈ ಬ್ಯಾಂಕ್ನಲ್ಲಿ ಎದೆ ಹಾಲನ್ನು ಉಚಿತವಾಗಿ ನೀಡಲಾಗುತ್ತದೆ ಅನ್ನೋದು ಇಲ್ಲಿ ಗಮನಿಸಲೇಬೇಕಾದ ಸಂಗತಿ. ಹೀಗಾಗಿ ಈ ಬ್ಯಾಂಕ್ ನಮ್ಮ ಹೆಮ್ಮೆಯ ಬ್ಯಾಂಕ್ ಅನ್ನುತ್ತಾರೆ.

ರಾಜ್ಯದಲ್ಲಿಯೇ ನಮ್ಮದು ಅತಿದೊಡ್ಡ ಬ್ಯಾಂಕ್  – ಡಾ. ವಿಜಯಕುಮಾರ್ ಕುಲಕರ್ಣಿ

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ಉಪ ಪ್ರಾಚಾರ್ಯ ಹಾಗೂ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್ ಕುಲಕರ್ಣಿ, ಮಗು ಜನಿಸಿ ಒಂದು ಗಂಟೆಯೊಳಗೆ ತಾಯಿಯ ಹಾಲನ್ನು ಕುಡಿಸಬೇಕು. ಏಕೆಂದರೆ ಈ ವೇಳೆಯಲ್ಲಿ ಹಾಲಿನಲ್ಲಿ ಕೊಲೆಸ್ಟ್ರಮ್ ಅನ್ನುವ ಅಂಶವೊಂದಿರುತ್ತದೆ. ಇದರಿಂದ ಮಗುವಿಗೆ ಸಾಕಷ್ಟು ಉಪಯೋಗವಾಗುತ್ತೆ ಅನ್ನುವುದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ. ತಾಯಿ ಹಾಲು ಕುಡಿದ ಮಕ್ಕಳಿಗೆ ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಬರೋ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ನಮ್ಮ ಆಸ್ಪತ್ರೆಯಲ್ಲಿ ಕಳೆದ ವರ್ಷ ಈ ಬ್ಯಾಂಕ್ ಆರಂಭಿಸಲು ಅವಕಾಶ ಕಲ್ಪಿಸಿದೆವು. ಅದರ ಜವಾಬ್ದಾರಿಯನ್ನೆಲ್ಲ ಇದೀಗ ಎಸ್.ಡಿ.ಎಂ. ನೋಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಇಂಥ ಬ್ಯಾಂಕ್ ಇವೆಯಾದರೂ, ನಮ್ಮಲ್ಲಿ ಈ ಬ್ಯಾಂಕ್ 1000 ಚದರ ಅಡಿಯಲ್ಲಿ ನಡೆಸಲಾಗುತ್ತಿದೆ. ರಾಜ್ಯದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?