FASTag: ಮೇ 1ರಿಂದ ಫಾಸ್ಟ್ಯಾಗ್ ಬದಲು ಸೆಟಿಲೈಟ್ ಟೋಲಿಂಗ್ ಸಿಸ್ಟಂ ಬರುತ್ತಾ? ಇಲ್ಲ ಎಂತಿದೆ ಸರ್ಕಾರ
ಇನ್ನು 15 ದಿನಗಳಲ್ಲಿ ಬೇರೆ ಟೋಲಿಂಗ್ ಸಿಸ್ಟಂ ಬರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಹೇಳಿಕೆ ಕೆಲ ಗೊಂದಲ ಸೃಷ್ಟಿಸಿದೆ. ಮೇ 1ರಿಂದ ಫಾಸ್ಟ್ಯಾಗ್ ಬದಲು ಜಿಪಿಎಸ್ ಆಧಾರಿತವಾದ ಟೋಲಿಂಗ್ ಸಿಸ್ಟಂ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ಹೆದ್ದಾರಿ ಸಚಿವಾಲಯ ಹೇಳಿದೆ. ಎಎನ್ಪಿಆರ್ ಮತ್ತು ಫಾಸ್ಟ್ಯಾಗ್ ಸಂಯೋಜನೆಯ ಹೈಬ್ರಿಡ್ ಸಿಸ್ಟಂ ಅನ್ನು ಪ್ರಾಯೋಗಿಕವಾಗಿ ಕೆಲವೆಡೆ ಜಾರಿ ಮಾಡುವ ಪ್ರಯತ್ನವಾಗುತ್ತಿದೆಯಷ್ಟೇ.

ಮುಂದಿನ ತಿಂಗಳಿಂದ ಫಾಸ್ಟ್ಯಾಗ್ ಸಿಸ್ಟಂ (FASTag) ಇರಲ್ಲ, ಸೆಟಿಲೈಟ್ ಆಧಾರಿತ ಟೋಲಿಂಗ್ ಸಿಸ್ಟಂ (Satellite based tolling system) ಅನ್ನು ಜಾರಿಗೆ ತರಲಾಗುತ್ತದೆ ಎನ್ನುವಂತಹ ಸುದ್ದಿ ಕೆಲವೆಡೆ ಹರಿದಾಡುತ್ತಿದೆ. ಇದೆಲ್ಲವೂ ಊಹಾಪೋಹವಾಗಿದ್ದು, ಸರ್ಕಾರ ಯಾವುದೇ ಸೆಟಿಲೈಟ್ ಟೋಲಿಂಗ್ ಸಿಸ್ಟಂ ಜಾರಿಗೆ ಅನುಮೋದನೆ ನೀಡಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (Road Transport and Highways ministry) ಸ್ಪಷ್ಟಪಡಿಸಿದೆ. ಆದರೆ, ಕೆಲ ಪ್ರಧಾನ ಮಾಧ್ಯಮಗಳಲ್ಲೇ ಈ ಸುದ್ದಿ ಪ್ರಕಟವಾಗಿದ್ದು ಬಹಳಷ್ಟು ಜನರಿಗೆ ಗೊಂದಲ ತಂದಿದೆ.
ಫಾಸ್ಟ್ಯಾಗ್ ಸಿಸ್ಟಂ ಬದಲು ಬೇರೆ ಸಿಸ್ಟಂ ತರಲಾಗುತ್ತದೆ ಎನ್ನುವ ಗೊಂದಲಕ್ಕೆ ಕಾರಣವಾಗಿದ್ದು ಹೈಬ್ರಿಡ್ ಟೋಲ್ ಮಾದರಿಯ ಪ್ರಯೋಗಾರ್ಥ ಉಪಕ್ರಮ. ಎಎನ್ಪಿಆರ್ ಫಾಸ್ಟ್ಯಾಗ್ ಆಧಾರಿತ ತಡೆರಹಿತ ಟೋಲಿಂಗ್ ಸಿಸ್ಟಂ ಎನ್ನುವ ಹೈಬ್ರಿಡ್ ಮಾದರಿಯನ್ನು ರಾಷ್ಟ್ರದ ವಿವಿಧೆಡೆ ಕೆಲ ಆಯ್ದ ಟೋಲ್ ಬೂತ್ಗಳಲ್ಲಿ ಜಾರಿ ತರಲಾಗುವುದು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಯುಪಿಐ ಪಾವತಿ ಮೇಲೆ ಶೇ. 18 ಜಿಎಸ್ಟಿ: ಇದು ನಿಜವಾ? ಇಲ್ಲಿದೆ ಫ್ಯಾಕ್ಟ್ ಚೆಕ್
ಏನಿದು ಎಎನ್ಪಿಆರ್ ಟೆಕ್ನಾಲಜಿ?
ಇದು ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ಟೆಕ್ನಾಲಜಿ. ಅಂದರೆ, ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಿ ವಾಹವನ್ನು ಟ್ರ್ಯಾಕ್ ಮಾಡುತ್ತದೆ. ಈಗ ಎಲ್ಲಾ ವಾಹನಗಳಿಗೂ ಎಚ್ಎಸ್ಆರ್ ನಂಬರ್ ಪ್ಲೇಟ್ ಹಾಕಿಸಲಾಗಿದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಮೂಲಕ ಈ ನಂಬರ್ ಪ್ಲೇಟ್ ಅನ್ನು ಗುರುತಿಸುತ್ತದೆ. ಸರ್ಕಾರವು ಈ ಎಎನ್ಪಿಆರ್ ಟೆಕ್ನಾಲಜಿಯನ್ನು ಫಾಸ್ಟ್ಯಾಗ್ ಸಿಸ್ಟಂ ಜೊತೆ ಮಿಳಿತಗೊಳಿಸಿದೆ.
ಟೋಲ್ ಬೂತ್ಗಳ ಬಳಿ ಎಎನ್ಪಿಆರ್ ಕ್ಯಾಮೆರಾ ಮತ್ತು ಫಾಸ್ಟ್ಯಾಗ್ ರೀಡರ್ಸ್ ಅನ್ನು ಅಳವಡಿಸಲಾಗಿರುತ್ತದೆ. ಎಎನ್ಪಿಆರ್ ಕ್ಯಾಮೆರಾಗಳು ವಾಹನ ನಂಬರ್ ಅನ್ನು ಗುರುತಿಸುತ್ತವೆ. ಫಾಸ್ಟ್ಯಾಗ್ ರೀಡರ್ಗಳು ಫಾಸ್ಟ್ಯಾಗ್ ಅನ್ನು ಗುರುತಿಸುತ್ತವೆ. ಈ ಹೊಸ ಹೈಬ್ರಿಡ್ ಸುಧಾರಿತ ಟೋಲಿಂಗ್ ಸಿಸ್ಟಂನಿಂದ ವಾಹನಗಳು ಟೋಲ್ ಬೂತ್ಗಳಲ್ಲಿ ನಿಲ್ಲುವ ಅಗತ್ಯೆ ಇರುವುದಿಲ್ಲ.
ಒಂದು ವೇಳೆ, ನಂಬರ್ ಪ್ಲೇಟ್ ಮತ್ತು ಫಾಸ್ಟ್ಯಾಗ್ ಸರಿ ಇಲ್ಲದ ವಾಹನಗಳು ಕಂಡು ಬಂದಲ್ಲಿ ನೋಟೀಸ್ ನೀಡಿ, ಅವುಗಳ ಫಾಸ್ಟ್ಯಾಗ್ ಅನ್ನು ನಿಲ್ಲಿಸಬಹುದು ಅಥವಾ ದಂಡ ವಿಧಿಸಬಹುದು.
ಇದನ್ನೂ ಓದಿ: ಟ್ರೈನ್ ಆಪರೇಶನ್; ಖಾಸಗಿಗೆ ವಹಿಸುವ ಪ್ರಯೋಗ ಯಶಸ್ವಿ; ತೇಜಸ್ ಎಕ್ಸ್ಪ್ರೆಸ್ ರೈಲಿಂದ 3 ಕೋಟಿ ರೂಗೂ ಅಧಿಕ ಲಾಭ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾದ ಎನ್ಎಚ್ಎಐ ಈಗಾಗಲೇ ಈ ಸಿಸ್ಟಂ ಅನ್ನು ಆಯ್ದ ಸ್ಥಳಗಳಲ್ಲಿ ಅಳವಡಿಸಲು ಬಿಡ್ ಕರೆದಿದೆ. ಒಂದು ವೇಳೆ ಈ ಹೈಬ್ರಿಡ್ ಮಾಡಲ್ ಸರಿಯಾಗಿ ಕೆಲಸ ಮಾಡುತ್ತದೆ ಎಂದಾದರೆ ಬಹುಶಃ ದೇಶಾದ್ಯಂತ ಎಲ್ಲಾ ಟೋಲ್ ಬೂತ್ಗಳಲ್ಲಿ ಇವುಗಳ ಅಳವಡಿಕೆ ಆಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ