ಧಾರವಾಡ ಹೈಕೋರ್ಟ್‌ನಲ್ಲಿಂದು ಮಹಿಳೆಯರದ್ದೇ ಪಾರುಪತ್ಯ! ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ

Dharawad News: ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ಇಂದು (ಆಗಸ್ಟ್ 1) ವಿಶೇಷ ಮಹಿಳಾ ನ್ಯಾಯಪೀಠಗಳ ಕಲಾಪ ನಡೆಯಲಿದ್ದು, ಮಹಿಳಾ ನ್ಯಾಯಮೂರ್ತಿಗಳ ಜೊತೆಗೆ ರಾಜ್ಯ ಸರ್ಕಾರದ ಪರವಾಗಿ ಮಹಿಳಾ ಕಾನೂನು ಅಧಿಕಾರಿಗಳ ತಂಡವೇ ವಾದ ಮಂಡಿಸಲಿದೆ. ಏಳು ಪೀಠಗಳಲ್ಲಿ ಇಡೀ ದಿನ ವಿಚಾರಣೆ ನಡೆಯಲಿದೆ.

ಧಾರವಾಡ ಹೈಕೋರ್ಟ್‌ನಲ್ಲಿಂದು ಮಹಿಳೆಯರದ್ದೇ ಪಾರುಪತ್ಯ! ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ
ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠ
Image Credit source: tv9
Edited By:

Updated on: Aug 01, 2026 | 8:32 AM

ಧಾರವಾಡ, ಆಗಸ್ಟ್ 1: ಕರ್ನಾಟಕ ಹೈಕೋರ್ಟ್​ನ (Karnataka High Court) ಧಾರವಾಡ ಪೀಠದಲ್ಲಿ ಇಂದು ನಡೆಯಲಿರುವ ವಿಶೇಷ ಎಲ್ಲಾ ಮಹಿಳಾ ನ್ಯಾಯಪೀಠಗಳ ವಿಚಾರಣೆಯಲ್ಲಿ, ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಲು ಸಂಪೂರ್ಣ ಮಹಿಳಾ ಕಾನೂನು ಅಧಿಕಾರಿಗಳ ತಂಡವನ್ನು ನೇಮಿಸಿ ಅಡ್ವೋಕೇಟ್ ಜನರಲ್ ಕಚೇರಿ ಆದೇಶ ಹೊರಡಿಸಿದೆ. ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆಯಾಗಿರುವ ಈ ವಿಶೇಷ ಶನಿವಾರದ ಕಲಾಪದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರಲಿದ್ದಾರೆ. ಒಂದು ಕಡೆ ಮಹಿಳಾ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದರೆ, ಮತ್ತೊಂದೆಡೆ ಸರ್ಕಾರದ ಪರವಾಗಿ ಸರ್ಕಾರಿ ಮಹಿಳಾ ವಕೀಲರು ವಾದ ಮಂಡಿಸಲಿದ್ದು, ಈ ವಕೀಲರ ತಂಡದ ನೇತೃತ್ವವನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ವಹಿಸಲಿದ್ದಾರೆ.

ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ಕಾರ್ಯಾಚರಿಸಲಿರುವ ಒಟ್ಟು ಏಳು ವಿಶೇಷ ಮಹಿಳಾ ನ್ಯಾಯಪೀಠಗಳ ಮುಂದೆ ಹಾಜರಾಗಿ ಸರ್ಕಾರದ ವಾದ ಮಂಡಿಸಲು ಮಹಿಳಾ ಅಪರ ಸರ್ಕಾರಿ ವಕೀಲರು ಹಾಗೂ ಹೈಕೋರ್ಟ್ ಸರ್ಕಾರಿ ವಕೀಲರಿಗೆ ಪ್ರತ್ಯೇಕವಾಗಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶಿಸಲಾಗಿದೆ.

ಸರ್ಕಾರಿ ಮಹಿಳಾ ವಕೀಲರ ಪಟ್ಟಿ

ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಪ್ರತಿಮಾ ಹೊನ್ನಾಪುರ, ಹೆಚ್ಚುವರಿ ಸರ್ಕಾರಿ ವಕೀಲರಾದ ನಂದಿನಿ ಸೋಮಾಪುರ, ಪ್ರಮೋಧಿನಿ ಕಿಶನ್, ಸಾವಿತ್ರಮ್ಮ, ಬಿ.ಪಿ.ರಾಧಾ, ಸುನಿತಾ ಸೆಕ್ವೇರಿಯಾ, ಮಮತಾ ಶೆಟ್ಟಿ, ಮಾಲಾ ಬಿ. ಭೂಟೆ, ವಿ. ಹೇಮಲತಾ, ಆರ್. ಕೆ. ಪ್ರತಿಭಾ, ಸರ್ಕಾರಿ ವಕೀಲರಾದ ವಿ. ಸ್ಫೂರ್ತಿ, ಗಿರಿಜಾ ಹಿರೇಮಠ, ರಶ್ಮಿ ಪಟೇಲ್, ರಶ್ಮಿ ರಾವ್, ಕೀರ್ತಿಲತಾ ಪಾಟೀಲ್, ರತ್ನಮಾಲಾ, ಎಸ್​. ಚಾಂದನಿ, ಆರ್. ಸೌಮ್ಯ, ವಹೀದಾ, ಮತ್ತು ದೀಪ್ತಿ ಅಲ್ವಾ ಅವರನ್ನು ನಿಯೋಜನೆ ಮಾಡಲಾಗಿದೆ.

ಸಂಪೂರ್ಣ ಮಹಿಳಾ ಪೀಠಗಳು ರಚನೆಯಾಗುವುದೇ ಅಪರೂಪ

ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಸಂಪೂರ್ಣ ಮಹಿಳಾ ಪೀಠಗಳು ರಚನೆಯಾಗುವುದೇ ಅಪರೂಪ. ಅಂಥದ್ದರಲ್ಲಿ, ಇಂದಿನ ಪ್ರತಿಯೊಂದು ಪೀಠದ ಮುಂದೆ ರಾಜ್ಯ ಸರ್ಕಾರದ ಪರವಾಗಿ ಕೇವಲ ಮಹಿಳಾ ಅಧಿಕಾರಿಗಳೇ ಕಾಣಿಸಿಕೊಳ್ಳುತ್ತಿರುವುದು ನ್ಯಾಯಾಂಗ ಮತ್ತು ವಕೀಲರ ವಲಯದಲ್ಲಿ ಒಂದು ಮೈಲಿಗಲ್ಲಾಗಲಿದೆ.

ಏಳು ನ್ಯಾಯಪೀಠಗಳಿಂದ ಕಲಾಪ

ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠಗಳು ಇಡೀ ದಿನದ ಕಲಾಪಗಳು ನಡೆಸಲಿವೆ. ಅದಕ್ಕಾಗಿ ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರತ್ಯೇಕ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ನ್ಯಾಯಪೀಠಗಳನ್ನು ರಚನೆ ಮಾಡಲಾಗಿದೆ. ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾ.ಕೆ. ಜಿ. ಶಾಂತಿ ಅವರನ್ನೊಳಗೊಂಡ ಪೀಠವು ಎಲ್ಲ ವಿಭಾಗೀಯ ಪೀಠದದಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳ ಪ್ರಾಥಮಿಕ ವಿಚಾರಣೆ, ಅರ್ಜಿಗಳು, ಆದೇಶಗಳು ಹಾಗೂ ಅಂತಿಮ ವಿಚಾರಣೆಯನ್ನು ನಡೆಸಲಿದೆ.

ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಅಧಿಸೂಚನೆಯಂತೆ, ಹಿರಿಯ ನ್ಯಾ. ಅನು ಶಿವರಾಮನ್ ಹಾಗೂ ನ್ಯಾ. ಕೆ. ಜಿ. ಶಾಂತಿ, ನ್ಯಾ. ಜ್ಯೋತಿ ಮೂಲಿಮನಿ ಹಾಗೂ ನ್ಯಾ. ಪಿ. ಶ್ರೀಸುಧಾ, ನ್ಯಾ. ಲಲಿತಾ ಕೆನ್ನಾಗಂಟಿ ಹಾಗೂ ನ್ಯಾ. ಕೆ. ಎಸ್. ಹೇಮಲೇಖಾ ಅವರ ನೇತೃತ್ವದ ಮೂರು ವಿಭಾಗೀಯ ನ್ಯಾಯಪೀಠಗಳು ಕಲಾಪ ನಡೆಸಲಿವೆ. ಇದರ ಜೊತೆಗೆ ನ್ಯಾ. ಚೆಲ್ಲಕೂರು ಸುಮಲತಾ, ನ್ಯಾ. ತಾರಾ ವಿತಸ್ತ ಗಂಜು, ನ್ಯಾ. ಕೆ. ಬಿ. ಗೀತಾ, ನ್ಯಾ. ರಾಜೇಶ್ವರಿ ಎನ್. ಹೆಗ್ಡೆ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠಗಳಲ್ಲಿ ಕಲಾಪಗಳು ನಡೆಯಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us