
ಧಾರವಾಡ, (ಏಪ್ರಿಲ್ 12): ಮೊನ್ನೆ ಅಷ್ಟೇ ಧಾರವಾಡದ (Dharwad) ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದಿದ್ದ ಕಾಂಗ್ರೆಸ್ (Congress) ಯುವ ಮುಖಂಡ ಫೈರೋಜ್ ಪಠಾಣ್ (Fairoz Pathan Murder Case) ಹಂತಕರನ್ನು ಪತ್ತೆ ಹಚ್ಚುವಲ್ಲಿ ಉಪ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ನಡೆದು 24 ಗಂಟೆಯೊಳಗೇ ಹಂತಕರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 9 ಆರೋಪಿಗಳ ಪೈಕಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಿಂದಿನ ಕೆಲ ವೈಷಮ್ಯಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವೇ ಈ ಕೊಲೆಗೆ ಕಾರಣ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆ ಮಾಡಲು ಮಹಮ್ಮದ್ ಶಾ ನೊಂದಿಗೆ ಬಂದಿದ್ದ ಸದ್ದಾಂ, ಗೌಸ್, ಪರ್ವೇಜ್ ಸಮೀರ್ ನನ್ನು ಬಂಧಿಸಲಾಗಿದೆ. ಇನ್ನು ಮತ್ತೊಬ್ಬ ಆರೋಪಿ ಕೈಫ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಷ್ಟಕ್ಕೂ ಈ ಕೊಲೆ ನಡೆದಿದ್ದು ಮಹಮ್ಮದ್ ಶಾ ಹಾಗೂ ಫೈರೋಜ್ ಪಠಾಣ್ ನಡುವಿನ ವೈಯಕ್ತಿಕ ದ್ವೇಷ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಅದರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಈ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಶಾ ಹಿಂದಿನ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕೊಲೆ ಮಾಡಿದ್ಧಾನೆ. ಈತನೊಂದಿಗೆ ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಭೀಕರವಾಗಿ ಹತ್ಯೆತಾಗಿದ್ದ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಮಗ ಅರ್ಬಾಜ್ ಹಂಚಿನಮನಿ ಮತ್ತು ರೌಡಿ ಶೀಟರ್ ಮುಕ್ತುಂ ಸೊಗಲದ್ ಕೂಡ ಕೈ ಜೋಡಿಸಿದ್ದು, ಇದೀಗ ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗಿದೆ.
ಇನ್ನು ಕೆಲ ತಿಂಗಳ ಹಿಂದೆ ಫೈರೋಜ್ ಹಾಗೂ ಮಹಮ್ಮದ್ ಶಾ ನಡುವೆ ವೈಯಕ್ತಿಕ ವಿಚಾರವಾಗಿ ಜಗಳ ನಡೆದಿತ್ತು. ಆಗ ಫೈರೋಜ್ ಮಹಮ್ಮದ್ ಶಾ ಮನೆಗೆ ಕೆಲವರೊಂದಿಗೆ ಹೋಗಿ ಗಲಾಟೆ ಮಾಡಿ ಬಂದಿದ್ದ. ಅಲ್ಲದೇ ಅದನ್ನು ಪದೇ ಪದೇ ಬೇರೆಯವರ ಬಳಿ ಹೇಳಿ ತಮಾಷೆ ಮಾಡುತ್ತಿದ್ದ. ಇದು ಮಹಮ್ಮದ್ ಶಾನಿಗೆ ಸಿಟ್ಟು ತರಿಸಿತ್ತು. ಇದೇ ವೇಳೆ ರೌಡಿ ಶೀಟರ್ ಮುಕ್ತುಂ ಸೊಗಲದ್ ಹಾಗೂ ಫೈರೋಜ್ ನಡುವೆ ರಿಯಲ್ ಎಸ್ಟೇಟ್ ವಿಚಾರವಾಗಿ ಮನಸ್ತಾಪವಾಗಿತ್ತು. ಹೀಗೆ ಆತನಿಂದ ದೂರವಾದವರೆಲ್ಲ ಒಂದಾಗಿ ಈ ಕೊಲೆಯ ಸಂಚನ್ನು ರೂಪಿಸಿದ್ದರು. ಕೊಲೆ ಮಾಡೋ ದಿನ ಮಧ್ಯಾಹ್ನದವರೆಗೆ ಆರೋಪಿಗಳೆಲ್ಲರೂ ಸೇರಿ ಸಭೆ ನಡೆಸಿದ್ದು, ಏನೇ ಆಗಲಿ ಅವತ್ತೇ ಫೈರೋಜ್ ನನ್ನು ಮುಗಿಸಲೇಬೇಕು ಅಂದುಕೊಂಡಿದ್ದರು. ಅದಕ್ಕಾಗಿಯೇ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಮಹಮ್ಮದ್ ಶಾ ಹಾಗೂ ಆತನ ಹುಡುಗರು, ಅದೇ ತಾನೇ ಮನೆಗೆ ಬಂದಿದ್ದ ಫೈರೋಜ್ ನ ಸುಳಿವನ್ನು ನೀಡಿದ್ದರು.
ಸಾಮಾನ್ಯವಾಗಿ ಫೈರೋಜ್ ತಡವಾಗಿ ಮನೆಗೆ ಬರುತ್ತಿದ್ದ. ಆದರೆ ಇದೇ ಏಪ್ರಿಲ್ 24 ಕ್ಕೆ ಮದುವೆ ನಿಶ್ಚಯವಾಗಿದ್ದರಿಂದ ಕೆಲ ದಿನಗಳಿಂದ ಮನೆಗೆ ಬೇಗ ಬರುತ್ತಿದ್ದ. ಅವತ್ತು ಕೂಡ ಅದೇ ಆಗಿದೆ. ಎಂದಿನಂತೆ ಸುಮಾರು 8 ಗಂಟೆ ಹೊತ್ತಿಗೆ ಮನೆಗೆ ಬಂದ ಫೈರೋಜ್ ಶೆಕೆ ಹೆಚ್ಚಾಗಿದೆ ಎಂದು ಹೊರಗಡೆ ಫೋನ್ ನಲ್ಲಿ ಮಾತಾಡುತ್ತಾ ಜೋಕಾಲಿಯಲ್ಲಿ ಕೂತಿದ್ದ. ಬಳಿಕ ಒಳಗಡೆ ಹೋಗುತ್ತಲೇ ಮನೆಗೆ ಬಂದ ಮಹಮ್ಮದ್ ಶಾ ಆತನನ್ನು ಕೂಗಿ ಕರೆದಿದ್ದು, ಬಳಿಕ ಗೇಟ್ ತೆರೆದು ಆತನ ಮನೆಯ ಮೆಟ್ಟಿಲುಗಳ ಮೇಲೆ ಕೂತಿದ್ದ. ಮತ್ತೆ ಫೋನ್ ನಲ್ಲಿ ಮಾತನಾಡುತ್ತಾ ಹೊರಗೆ ಬಂದ ಫೈರೋಜ್ ಗೇಟ್ ಬಳಿ ಬಂದು ನಿಂತಿದ್ದ. ಆಗ ಸ್ಥಳಕ್ಕೆ ಮತ್ತಿಬ್ಬರು ಯುವಕರು ಬಂದಿದ್ದರು. ಆದ್ರೆ, ಇತ್ತ ಏನೂ ಗೊತ್ತಿಲ್ಲದ ಫೈರೋಜ್ ಗೇಟ್ ಮುಂದೆ ಬಂದು ನಿಲ್ಲುತ್ತಿದ್ದಂತೆಯೇ ಮಹಮ್ಮದ್ ಶಾ, ಕಿಸೆಯಲ್ಲಿಟ್ಟುಕೊಂಡಿದ್ದ ಚಾಕುವನ್ನು ಹೊರ ತೆಗೆದು ಇರಿದಿದ್ದಾನೆ.ಆಗ ಎಚ್ಚೆತ್ತುಕೊಂಡ ಫೈರೋಜ್ ಒಳಗಡೆ ಓಡಿ ಹೋಗಿದ್ದ, ಆದರೂ ಬಿಡದ ಮಹಮ್ಮದ್ ಶಾ, ಹಿಂಬಾಲಿಸುತ್ತಿದ್ದಂತೆಯಾ ಹೊರಗಡೆ ನಿಂತಿದ್ದ ಮತ್ತೆ ಮೂವರು ಮನೆಯೊಳಗೆ ಹೋಗಿ ಫೈರೋಜ್ ನನ್ನು ಇರಿದು ಕೊಂದಿದ್ದದಾರೆ. ಬಳಿಕ ಫೈರೋಜ್ ನ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.
ಹತ್ಯೆ ಬಳಿಕ ಕಾರಿನಲ್ಲಿ ಬೆಳಗಾವಿ ಜಿಲ್ಲೆ ಕಡೆಗೆ ಹೋಗುವಾಗ ಮೊಬೈಲ್ ನನ್ನು ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಎಸೆದಿದ್ದಾರೆ. ಇನ್ನು ಫೈರೋಜ್ ಹಾಗೂ ಆತನ ಮಿತ್ರ ಅಬ್ದುಲ್ ದೇಸಾಯಿ ಕೆಲ ತಿಂಗಳ ಹಿಂದೆ ತಮಗೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.