AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಡಬಲ್ ಮರ್ಡರ್ ಪ್ರಕರಣ – 36 ಗಂಟೆಯಲ್ಲಿ ಬೇಧಿಸಿದ ಪೊಲೀಸರು- ಮತ್ತೊಬ್ಬ ಲಾಕ್, ಅಷ್ಟಕ್ಕೂ ಆ ಕಂಟ್ರಿ ಪಿಸ್ತೂಲು ಕೊಟ್ಟು ಸಿಕ್ಕಿಬಿದ್ದವ ಯಾರು?

ಮೃತ ಕುಡಚಿ ದೇಹದಲ್ಲೆಲ್ಲೂ ಬುಲೆಟ್ ಪತ್ತೆ ಆಗಿರಲಿಲ್ಲ. ಆದರೆ ಘಟನಾ ಸ್ಥಳದಲ್ಲಿ ಕಾಟ್ರೆಡ್ಜ್ ಪತ್ತೆಯಾಗಿತ್ತು. ಆರೋಪಿಗಳನ್ನು ಪೊಲೀಸ್ ಕಸ್ಟಡಿ ವೇಳೆ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.

ಧಾರವಾಡ: ಡಬಲ್ ಮರ್ಡರ್ ಪ್ರಕರಣ - 36 ಗಂಟೆಯಲ್ಲಿ ಬೇಧಿಸಿದ ಪೊಲೀಸರು- ಮತ್ತೊಬ್ಬ ಲಾಕ್, ಅಷ್ಟಕ್ಕೂ ಆ ಕಂಟ್ರಿ ಪಿಸ್ತೂಲು ಕೊಟ್ಟು ಸಿಕ್ಕಿಬಿದ್ದವ ಯಾರು?
ಧಾರವಾಡ: ಡಬಲ್ ಮರ್ಡರ್ ಪ್ರಕರಣ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​|

Updated on: Jun 05, 2023 | 3:05 PM

Share

ಕಳೆದ ತಿಂಗಳು ಧಾರವಾಡ ನಗರವನ್ನು ಬೆಚ್ಚಿಬೀಳಿಸಿದ್ದ ಡಬಲ್ ಮರ್ಡರ್ ಪ್ರಕರಣವನ್ನು (Double Murder case) ಬೇಧಿಸುವಲ್ಲಿ ಪೊಲೀಸರು (Dharwad Police) 36 ಗಂಟೆಗಳಲ್ಲಿಯೇ ಯಶಸ್ವಿಯಾಗಿದ್ದರು. ಕೊಲೆ ಸಂದರ್ಭದಲ್ಲಿ ಪಿಸ್ತೂಲಿನಿಂದ (Pistol) ಫೈರ್ ಆಗಿರೋ ಬಗ್ಗೆ ಗುಸುಗುಸು ಸುದ್ದಿ ಎದ್ದಿತ್ತು. ಅಷ್ಟೇ ಅಲ್ಲ, ಘಟನಾ ಸ್ಥಳದಲ್ಲಿ ಕಾಟ್ರೇಡ್ಜ್ ಕೂಡ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ ಘಟನೆ ವೇಳೆ ಪಿಸ್ತೂಲು ಬಳಕೆಯಾಗಿದ್ದು ಕನ್ಫರ್ಮ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಲಾಕ್ ಆಗಿದ್ದಾನೆ. ಅಂದು ಮೇ 25ರ ರಾತ್ರಿ ಹೊತ್ತು. ಧಾರವಾಡ ಹೊರವಲಯದ ಕಮಲಾಪುರ ಬಡಾವಣೆಯಲ್ಲಿ ಮನೆ ಎದುರು ಊಟ ಮಾಡಿ ಕುಳಿತಿದ್ದ ರಿಯಲ್ ಎಸ್ಟೆಟ್ ಉದ್ಯಮಿ ಮಹಮ್ಮದಸಾಬ್ ಕುಡಚಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಸುದ್ದಿ ತಿಳಿದು ಸ್ಥಳಕ್ಕೆ ಹೋದ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ಮೃತ ಕುಡಚಿ ಮನೆ ಸಮೀಪದಲ್ಲೇ ಮತ್ತೋರ್ವ ಯುವಕನ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಇದು ಡಬಲ್ ಮರ್ಡರ್ ಎಂಬ ಕಾರಣಕ್ಕೆ ಪೊಲೀಸರಿಗೂ ಈ ಪ್ರಕರಣ ದೊಡ್ಡ ತಲೆ ನೋವಾಗಿತ್ತು. ಆದರೆ ಮೃತ ಇನ್ನೋರ್ವನ ಜಾಡು ಹಿಡಿದು ಹೊರಟಾಗಲೇ ಇಡೀ ಪ್ರಕರಣದ ಆರು ಆರೋಪಿಗಳು ಖೆಡ್ಡಾಗೆ ಬಿದ್ದಿದ್ದರು. ಈ ಪ್ರಕರಣದ ಪ್ರಮುಖ ರೂವಾರಿ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಪುತ್ರ ಅರ್ಬಾಜ್ ಆಗಿದ್ದು, ಆತನು ಸೇರಿ ಆರು ಜನ ಬಂಧನಕ್ಕೊಳಗಾಗಿದ್ದರು. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ ಪೊಲೀಸರಿಗೆ ಘಟನೆಯ ವೇಳೆ ಅಕ್ರಮ ಪಿಸ್ತೂಲು ಬಳಸಿರೋದು ಕನ್ಫರ್ಮ್ ಆಗಿತ್ತು. ಏಕೆಂದರೆ ಪ್ರತ್ಯಕ್ಷದರ್ಶಿಗಳು ಘಟನೆಯ ವೇಳೆ ಗುಂಡು ಹಾರಿಸಿದ ಶಬ್ದವನ್ನು ಕೇಳಿದ್ದರು.

ಈ ವಿಷಯ ತಿಳಿದ ಮೇಲಂತೂ ಪೊಲೀಸರು ಮತ್ತಷ್ಟು ಅಲರ್ಟ್ ಆಗಿ, ತನಿಖೆಯನ್ನು ತೀವ್ರಗೊಳಿಸಿದ್ದರು. ಏಕೆಂದರೆ ಒಂದು ಕಡೆ ಮೃತ ಕುಡಚಿ ದೇಹದಲ್ಲೆಲ್ಲೂ ಬುಲೆಟ್ ಪತ್ತೆ ಆಗಿರಲಿಲ್ಲ. ಆದರೆ ಘಟನಾ ಸ್ಥಳದಲ್ಲಿ ಕಾಟ್ರೆಡ್ಜ್ ಪತ್ತೆಯಾಗಿತ್ತು. ಎಲ್ಲ ಕಡೆ ಹುಡುಕಾಡಿದರೂ ಮತ್ತೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಹೀಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿ ವೇಳೆ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.

ಇದೀಗ ಅನೇಕ ವಿಚಾರಗಳು ಹೊರಗೆ ಬಂದಿವೆ. ಅಷ್ಟಕ್ಕೂ ಈ ಕಂಟ್ರಿ ಪಿಸ್ತೂಲು ಬಂದಿದ್ದು ಎಲ್ಲಿಂದ? ಇದನ್ನು ಅಲ್ಲಿಗೆ ತಂದವರು ಯಾರು? ಅಷ್ಟಕ್ಕೂ ಅವತ್ತು ಫೈರ್ ಮಾಡಿದ್ದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಇದೀಗ ತನಿಖೆ ವೇಳೆ ಉತ್ತರ ಸಿಕ್ಕಿವೆ. ಹೌದು; ಈ ಎಲ್ಲದಕ್ಕೂ ಕಾರಣ ಆಸ್ತಿ ವಿವಾದ, ಹಣ. ಈ ಕೊಲೆಯ ಪ್ರಮುಖ ಆರೋಪಿ ಅರ್ಬಾಜ್ ನ ತಂದೆ ರೌಡಿ ಶೀಟರ್ ಫ್ರುಟ್ ಇರ್ಫಾನ್. ಈತ ರಿಯಲ್ ಎಸ್ಟೇಟ್ ಉದ್ಯಮವನ್ನು ಕೂಡ ಮಾಡುತ್ತಿದ್ದ.

ಈತನನ್ನು ಆಗಸ್ಟ್ 6, 2020 ರ ಸಂಜೆ ಅರ್ಬಾಜ್ ನ ರಿಸೆಪ್ಷನ್ ದಿನವೇ ಹಳೆ ಹುಬ್ಬಳ್ಳಿಯ ಆಲ್ತಾಜ್ ಹೋಟೆಲ್ ಎದುರು ಗುಂಡಿಕ್ಕಿ ಕೊಲ್ಲಲಾಗಿತ್ತು. ಇಂಥ ಫ್ರುಟ್ ಇರ್ಫಾನ್ ನೊಂದಿಗೆ ಪಾರ್ಟನರ್ ಆಗಿದ್ದ ಮಹಮದಸಾಬ್ ಕುಡಚಿ ಬಳಿ ಸಾಕಷ್ಟು ಆಸ್ತಿ ಕೂಡ ಇತ್ತು. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಅರ್ಬಾಜ್ ತನ್ನ ತಂದೆಯ ಆಸ್ತಿಯನ್ನು ತನಗೆ ಬಿಟ್ಟುಕೊಡುವಂತೆ ದುಂಬಾಲು ಬಿದ್ದಿದ್ದ.

ಇದೇ ವೇಳೆ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿತ್ತು. ಇದರ ಮಧ್ಯಸ್ಥಿಕೆಯನ್ನು ವಹಿಸಿದ್ದು ಇರ್ಫಾನ್ ಹಾಗೂ ಕುಡಚಿ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದ ಧಾರವಾಡದ ತೇಜಸ್ವಿ ನಗರ ಬಡಾವಣೆಯ ರೌಡಿ ಶೀಟರ್ ಮಂಜುನಾಥ ಸಾವಂತ್. ಇದೇ ಕಾರಣಕ್ಕೆ ಧಾರವಾಡ ಜಿಲ್ಲಾಸ್ಪತ್ರೆಯ ಬಳಿಯ ಜಾಗವೊಂದರ ಸಂಬಂಧ ಅರ್ಬಾಜ್ ಮತ್ತು ಕುಡಚಿ ನಡುವೆ ಬಂದಿದ್ದ ಸಮಸ್ಯೆಗೆ ಪರಿಹಾರ ಸೂಚಿಸಿದ್ದ. ಹೀಗಾಗಿ ಅರ್ಬಾಜ್ ಗೆ ಹತ್ತಿರನಾಗಿದ್ದ. ಈ ವೇಳೆ ತನ್ನ ತಂದೆಯಂತೆ ತನ್ನ ಹತ್ಯೆಯಾದರೆ ಹೇಗೆ ಅಂತಾ ಅರ್ಬಾಜ್ ಆತಂಕ ವ್ಯಕ್ತಪಡಿಸಿದ್ದ.

Also Read:  ಅಪರಾಧ ಮಾಡಿ ಪಾತಾಳದಲ್ಲೇ ಅಡಗಿದ್ದರೂ, 28 ವರ್ಷವೇ ಆದರೂ, ಕೊನೆಗೆ ಆರೋಪಿ ಸಿಗಲೇಬೇಕು! ಈ ಸ್ಟೋರಿ ಸ್ವಲ್ಪ ನೋಡ

ಇದೇ ಕಾರಣಕ್ಕೆ ಮಂಜುನಾಥ ಸಾವಂತ್ ತನ್ನ ಬಳಿ ಇದ್ದ ಕಂಟ್ರಿ ಪಿಸ್ತೂಲ್ ವೊಂದನ್ನು ಅರ್ಬಾಜ್ ಗೆ ಕೊಟ್ಟಿದ್ದ. ಅಷ್ಟೇ ಅಲ್ಲ, ಅದನ್ನು ಉಪಯೋಗಿಸೋ ಬಗೆಯನ್ನೂ ತೋರಿಸಿಕೊಟ್ಟಿದ್ದ. ಕೊಲೆ ನಡೆದ ದಿನ ಬಳಕೆಯಾಗಿದ್ದೇ ಆ ಪಿಸ್ತೂಲು. ಮಹಮ್ಮದಸಾಬ್ ಕುಡಚಿಯನ್ನು ನೇರವಾಗಿ ಎದುರಿಸೋದು ಅಷ್ಟು ಸುಲಭದ ಮಾತಲ್ಲ ಅಂತಾ ಅರಿತಿದ್ದ ಅರ್ಬಾಜ್ ತನ್ನೊಂದಿಗೆ ಪಿಸ್ತೂಲನ್ನು ಒಯ್ದಿದ್ದ. ಪೊಲೀಸರ ಪ್ರಕಾರ ಕೊಲೆ ಸಂದರ್ಭದಲ್ಲಿ ಒಂದು ಬಾರಿ ಅರ್ಬಾಜ್ ಕುಡಚಿ ಮೇಲೆ ಫೈರ್ ಮಾಡಿದ್ದಾನೆ. ಆದರೆ ಗುಂಡು ಆತನಿಗೆ ತಗುಲಿಲ್ಲ.

ಹಾಗಂತ ಅದು ವೇಸ್ಟ್ ಆಯ್ತು ಅಂತಾನೂ ಅಲ್ಲ. ಆ ಗುಂಡಿನ ಸದ್ದಿಗೆ ಸುತ್ತಲಿನ ಯಾರೊಬ್ಬರೂ ನೆರವಿಗೆ ಬರಲು ಸಾಧ್ಯವಾಗಲೇ ಇಲ್ಲ. ಇದನ್ನೇ ಉಪಯೋಗಿಸಿಕೊಂಡು ಮಾರಕಾಸ್ತ್ರಗಳಿಂದ ಕಂಡಕಂಡಂತೆ ಕುಡಚಿಗೆ ಹೊಡೆದು ಕೊಂದು ಹಾಕಲಾಗಿತ್ತು. ಇದೀಗ ಅರ್ಬಾಜ್ ಗೆ ಪಿಸ್ತೂಲು ಕೊಟ್ಟಿದ್ದ ರೌಡಿ ಶೀಟರ್ ಮಂಜುನಾಥ ಸಾವಂತ್ ನನ್ನು ಕೂಡ ಪೊಲೀಸರು ಜೈಲಿಗಟ್ಟಿದ್ದಾರೆ. ಇನ್ನು ಈ ಪಿಸ್ತೂಲು ಪ್ರಕರಣದಲ್ಲಿ ಮತ್ತೋರ್ವ ವ್ಯಕ್ತಿ ಇದ್ದಾನೆ ಅನ್ನೋ ಮಾತು ಕೂಡ ಕೇಳಿ ಬಂದಿದೆ. ಆ ಬಗ್ಗೆಯೂ ಉಪನಗರ ಠಾಣೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಿವೃತ್ತರ ಸ್ವರ್ಗ ಅಂದುಕೊಳ್ಳುತ್ತಿದ್ದ ವಿದ್ಯಾಕಾಶಿ ಧಾರವಾಡದಲ್ಲಿ ಗುಂಡುಗಳ ಸದ್ದು ಕೇಳಿ ಬರುತ್ತಿರೋದು ಎಲ್ಲರಿಗೂ ಆತಂಕ ಸೃಷ್ಟಿಸಿದ್ದಂತೂ ಸತ್ಯ.