Garlic Price: ಟೆಮೆಟೊ, ಈರುಳ್ಳಿ ಆಯ್ತು ಈಗ ಬೆಳ್ಳುಳ್ಳಿ ಸರದಿ, ಬಲು ದುಬಾರಿ!
Garlic Price Hiked: ಈರುಳ್ಳಿ, ಟೆಮೆಟೊ ಆಯ್ತು ಈಗ ಬೆಳ್ಳುಳ್ಳಿ ಸರದಿ. ಗಗನಕ್ಕೇರಿರುವ ಬೆಳ್ಳುಳ್ಳಿ ಬೆಲೆ ಸಾಮಾನ್ಯ ಗ್ರಾಹಕನ ಜೇಬು ಸುಡುತ್ತಿದೆ. ಹಾಗಾದ್ರೆ, ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿಗೆ ಎಷ್ಟಿದೆ?, ಏರಿಕೆಗೆ ಕಾರಣಗಳೇನು ಎನ್ನುವ ವಿವರ ಇಲ್ಲಿದೆ..
ಹುಬ್ಬಳ್ಳಿ, (ಡಿಸೆಂಬರ್ 12): ಈರುಳ್ಳಿ, ಬೆಳ್ಳುಳ್ಳಿ ಪ್ರತಿ ಮನೆಯ ಅಡುಗೆಮನೆಯಲ್ಲಿ ಲಭ್ಯವಿರುವ ಮಸಾಲೆ ಸಾಮಾಗ್ರಿಯಾಗಿದೆ. ಆದ್ರೆ, ಟೆಮೆಟೊ ಬೆಲೆ ಏರಿಕೆ ಬಳಿಕ ಈಗ ಬೆಳ್ಳುಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಒಂದು ಕೆಜಿಗೆ 70-ರಿಂದ 80 ಇದ್ದ ಬೆಳ್ಳುಳ್ಳಿ ದರ ಇದೀಗ 350 ರೂಪಾಯಿಗೆ ಏರಿಕೆಯಾಗಿದೆ. ಮಳೆಯಾಗದ ಹಿನ್ನಲೆ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತತ್ತರಿಸಿದ್ದಾರೆ.
ಸಗಟು ಮಾರುಕಟ್ಟೆಗೆ ಈಗ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗುತ್ತಿದೆ. ಈ ಹಿಂದೆ ದಿನಕ್ಕೆ 25ರಿಂದ 30 ವಾಹನಗಳಲ್ಲಿ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಇನ್ನು ದಕ್ಷಿಣ ರಾಜ್ಯಗಳಿಂದ ಕೂಡ ಬೆಳ್ಳುಳ್ಳಿ ಪೂರೈಕೆ ತಗ್ಗಿದೆ. ಇದು ಕೂಡ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಇನ್ನು ಊಟಿ ಹಾಗೂ ಮಲಪುರಂನಿಂದ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ ಪ್ರಮಾಣದಲ್ಲಿ ಕೂಡ ಭಾರೀ ಇಳಿಕೆಯಾಗಿದೆ. ಇದು ಕೂಡ ಬೆಲೆಯೇರಿಕೆಗೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: ಬೆಳ್ಳುಳ್ಳಿಯನ್ನು ದೀರ್ಘ ಕಾಲ ಸಂರಕ್ಷಿಸಿಡಲು ಸುಲಭ ಉಪಾಯ ಇಲ್ಲಿದೆ
ಮದ್ಯಪ್ರದೇಶ, ಗುಜರಾತ್ ನಿಂದ ಬರುವ ಬೆಳ್ಳುಳ್ಳಿ ದರ ಭಾರೀ ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ಕರ್ನಾಟಕ ವಿವಿಧ ಎಪಿಎಂಸಿಯಲ್ಲೂ ಸಹ ಬೆಳ್ಳುಳ್ಳಿ ಬೆಲೆ ಹೆಚ್ಚಳವಾಗಿದೆ. ಇದರಿಂದ ಗ್ರಾಹಕರು ಮಾತ್ರವಲ್ಲ ಹೋಲ್ಸೇಲ್ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ದಿನಕ್ಕೆ 300 ಚೀಲ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಇದೀಗ ಬೆಲೆ ಗಗನಕ್ಕೇರಿರುವುದರಿಂದ ದಿನವೊಂದಕ್ಕೆ ಕೇವಲ 50 ಚೀಲ ಮಾರಾಟವಾಗುತ್ತಿದೆ. ಇದಕ್ಕೆ ಕಾರಣ ದರ ಹೆಚ್ಚಳವಾಗಿದ್ದರಿಮದ ಗ್ರಾಹಕರು ಸಹ ಖರೀದಿ ಮಾಡುತ್ತಿಲ್ಲ. ಹೀಗಾಗಿ ಪ್ಯಾಪಾರ ಕಡಿಮೆಯಾಗಿದೆ.
ಕಳೆದ ವರ್ಷ 20 ರಿಂದ 30 ರೂಪಾಯಿಗೆ ಕೆಜಿ ಇದ್ದ ಬೆಳ್ಳುಳ್ಳಿ, ಈ ವರ್ಷ ಹೆಚ್ಚು ಕಡಿಮೆ 10 ಪಟ್ಟು ದರ ಹೆಚ್ಚಾಗಿದೆ. ಮಳೆ ಇಲ್ಲದಿರುವುದರಿಂದ ಬೆಳ್ಳುಳ್ಳಿ ಬೆಳೆಯುವುದು ಸಹ ಕಡಿಮೆಯಾಗಿರುವ ಕಾರಣ ದರ ಏರಿಕೆಯಾಗಿದ್ದು, ಹೊಸ ಬೆಳ್ಳುಳ್ಳಿ ಬರುವವರೆಗೂ ಇದೇ ಬೆಲೆ ಮುಂದುರೆಯಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ದರ?
- ಬೀದರ್- ಬೆಳ್ಳುಳ್ಳಿ ಬೆಲೆ ಕೆಜಿಗೆ 400 ರೂಪಾಯಿ
- ಯಾದಗಿರಿ – ಬೆಳ್ಳುಳ್ಳಿ ಬೆಲೆ ಕೆಜಿಗೆ 280 ರಿಂದ 320 ರೂಪಾಯಿ
- ತುಮಕೂರು- ಬೆಳ್ಳುಳ್ಳಿ ಬೆಲೆ ಕೆಜಿಗೆ -300-350 ರೂ.
- ರಾಯಚೂರು – ಬೆಳ್ಳುಳ್ಳಿ ಬೆಲೆ ಕೆಜಿಗೆ 300-320 ರೂಪಾಯಿ.
- ಮಂಡ್ಯ – ಬೆಳ್ಳುಳ್ಳಿ ಕೆಜಿಗೆ 200 ರೂ ರಿಂದ 240 ರೂ ಇದೆ.
- ಗದಗ – ಬೆಳ್ಳುಳ್ಳಿ ಕೆಜಿಗೆ 250-340 ರೂಪಾಯಿ
Published On - 4:13 pm, Tue, 12 December 23