ಧಾರವಾಡ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ – ಬಣ್ಣ ಹಚ್ಚುವ ಕಾರ್ಯಕ್ರಮಕ್ಕೆ ಸಚಿವ ಪ್ರಲ್ಹಾದ ಜೋಶಿ ಶನಿವಾರ ಚಾಲನೆ
Bannadarpane: ಕುಂದಗೋಳದ ಶ್ರೀ ಹರಭಟ್ಟ ಹೈಸ್ಕೂಲ್ ನಲ್ಲಿ ನಾಳೆ ಶನಿವಾರ ಸಂಜೆ 6 ಗಂಟೆಗೆ ಬಣ್ಣದರ್ಪಣೆ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಶ್ರೀ ಜಗ್ಗೇಶ್ ಅವರು ನಾಳೆ ನಡೆಯುವ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ
ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ (Pralhad Joshi) ಪರಿಕಲ್ಪನೆಯ ಬಣ್ಣದರ್ಪಣೆ (Bannadarpane) ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯಲಿದೆ. ಕಳೆಗುಂದಿರುವ ಸರ್ಕಾರಿ ಶಾಲಾ – ಕಾಲೇಜುಗಳ ಗೋಡೆಗಳಿಗೆ ಹೊಸ ಕಳೆ ತರಲು ಸಚಿವ ಪ್ರಲ್ಹಾದ್ ಜೋಶಿಯವರು ಬಣ್ಣದರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನೆರವೇರಬೇಕೆಂಬುದು ಜೋಶಿಯವರ ಆಶಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸಚಿವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಬಣ್ಣದರ್ಪಣೆ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.
ಕುಂದಗೋಳದ ಶ್ರೀ ಹರಭಟ್ಟ ಹೈಸ್ಕೂಲ್ ನಲ್ಲಿ ನಾಳೆ ಸಂಜೆ 6 ಗಂಟೆಗೆ ಬಣ್ಣದರ್ಪಣೆ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ನಾಳೆ ಶನಿವಾರ ನಡೆಯುವ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ
ಏನಿದು ಬಣ್ಣದರ್ಪಣೆ..?
ಸಚಿವ ಪ್ರಲ್ಹಾದ್ ಜೋಶಿಯವರ ಕ್ಷಮತಾ ಸೇವಾ ಸಂಸ್ಥೆಯ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮವೇ ಬಣ್ಣದರ್ಪಣೆ. ಜೋಶಿಯವರು ತಮ್ಮ ಕ್ಷಮತಾ ಸೇವಾ ಸಂಸ್ಥೆ (Kshamatha) ಮೂಲಕ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚಲು ಉಚಿತವಾಗಿ ಬಣ್ಣ ವಿತರಿಸುತ್ತಿದ್ದಾರೆ. ಸರ್ಕಾರಿ ವಿದ್ಯಾ ಮಂದಿರಗಳು ಕಳೆಗುಂದಬಾರದು ಎಂಬ ದೃಷ್ಢಿಯಿಂದ ಸಚಿವರು ಈ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಸಂಘ ಸಂಸ್ಥೆಗಳು, ಸೇವಾ ಸಂಘಟನೆಗಳು, ಸ್ಥಳೀಯ ಜನಪ್ರತಿನಿಧಿಗಳು ಯಾರೇ ಮುಂದೆ ಬಂದು ಉಚಿತವಾಗಿ ಬಣ್ಣ ಪಡೆದು, ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ಬಣ್ಣ ನೀಡಬಹುದಾಗಿದೆ. ಬಣ್ಣ ನಮ್ಮದು ಸೇವೆ ನಿಮ್ಮದು ಎಂಬ ಹ್ಯಾಶ್ ಟ್ಯಾಗ್ ಜೊತೆ ಪ್ರಲ್ಹಾದ್ ಜೋಶಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣದರ್ಪಣೆ ಅಭಿಯಾನ ನಡೆಸಿದ್ದಾರೆ.
ಸುಮಾರು ಒಂದು ವರ್ಷದ ವರೆಗೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ, ಬಣ್ಣದರ್ಪಣೆ ಅಭಿಯಾನ ಮುಂದುವರಿಯಲಿದೆ. ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಗುರಿ ಹೊಂದಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1130 ಸರ್ಕಾರಿ ಶಾಲಾ ಕಾಲೇಜುಗಳನ್ನ ಗುರುತಿಸಲಾಗಿದ್ದು, ವರ್ಷದೊಳಗೆ ಎಲ್ಲಾ ಶಾಲಾ ಕಾಲೇಜುಗಳು ಹೊಸ ಬಣ್ಣದೊಂದಿಗೆ ಕಂಗೊಳಿಸುವಂತೆ ಮಾಡಲು ಕೇಂದ್ರ ಸಚಿವರು ಸಂಕಲ್ಪ ಮಾಡಿದ್ದಾರೆ.
ಯಾರೆಲ್ಲ ಈ ಅಭಿಯಾನದಲ್ಲಿ ಭಾಗವಹಿಸಬಹುದು..?
ಶಿಕ್ಷಕರು, ಎಸ್.ಡಿ.ಎಮ್.ಸಿ. ಸದಸ್ಯರು, ಶಾಲೆಯ ಹಳೆಯ ವಿಧ್ಯಾರ್ಥಿಗಳು, ಸ್ವಸಹಾಯ ಸಂಘಗಳು, ಸೇವಾ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿ ಮತ್ತು ಸಂಘ ಸಂಸ್ಥೆಗಳು, ದೇವಸ್ಥಾನ ಕಮಿಟಿಗಳು, ಭಜನಾ ಸಂಘಗಳು ಹಾಗೂ ಯಾವುದೇ ಆಸಕ್ತ ತಂಡಗಳು ಈ ಬಣ್ಣದರ್ಪಣೆ ಅಭಿಯಾನದ ಭಾಗವಾಗುವ ಮೂಲಕ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹೊಸ ಬಣ್ಣ ಹಚ್ಚುವ ಸೇವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
Published On - 12:40 pm, Fri, 28 October 22