ಖಾತೆ ಬದಲಾವಣೆಗೆ ಲಂಚ ಜತೆಗೆ ಮನೆ ಕೆಲಸ ಮಾಡಿಸಿಕೊಂಡ ಕ್ಲರ್ಕ್: ಕಾರ್ಮಿಕ ಫುಲ್ ಕ್ಲಾಸ್
ಹುಬ್ಬಳ್ಳಿಯಲ್ಲಿ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪಾಲಿಕೆ ಅಧಿಕಾರಿಯನ್ನು ಕಟ್ಟಡ ಕಾರ್ಮಿಕ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಪಾಲಿಕೆಯ ಕ್ಲರ್ಕ್ 8,000 ರೂ. ಪಡೆದು ಮನೆ ಕೆಲಸವನ್ನೂ ಮಾಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ಎರಡು ವರ್ಷಗಳ ಬಳಿಕ ಖಾತೆ ಬದಲಾವಣೆ ಮಾಡಿಕೊಟ್ಟು ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿದೆ.

ಹುಬ್ಬಳ್ಳಿ, ಮಾರ್ಚ್ 20: ಮನೆ ಖಾತೆ ಬದಲಾವಣೆ ವಿಚಾರವಾಗಿ ಲಂಚ (Bribe) ಕೇಳಿದ ಅಧಿಕಾರಿಯನ್ನು ಕಟ್ಟಡ ಕಾರ್ಮಿಕ ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ನಗರದ ಪಾಲಿಕೆ ಕಚೇರಿ ಮುಂಭಾಗದಲ್ಲಿ ನಡೆದಿದೆ. ಪಾಲಿಕೆ (corruption) ಕಚೇರಿ ನಂಬರ್ 9ರ ಕ್ಲರ್ಕ್ ಮಂಜುನಾಥ ಎಂಬುವವರನ್ನು ಕಾರ್ಮಿಕ ತಿಮ್ಮಾರೆಡ್ಡಿ ತರಾಟೆ ತೆಗೆದುಕೊಂಡಿದ್ದಾರೆ. ಖಾತೆ ಬದಲಾವಣೆ ಮಾಡಿಕೊಟ್ಟ ಬಳಿಕವೂ 12 ಸಾವಿರ ರೂ ಹಣಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಪಾಲಿಕೆ ಕಚೇರಿಗೆ ಬಂದು ಮಂಜುನಾಥನನ್ನ ತಿಮ್ಮಾರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಖಾತೆ ಬದಲಾವಣೆ ವಿಚಾರವಾಗಿ 20 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈಗಾಗಲೆ 8 ಸಾವಿರ ರೂ ಅನ್ನು ಕ್ಲರ್ಕ್ ಮಂಜುನಾಥ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಹಣದ ಜೊತೆಗೆ ಮನೆ ಕೆಲಸ ಕೂಡ ಮಾಡಿಸಿಕೊಂಡಿರುವುದಾಗಿ ಕಾರ್ಮಿಕ ತಿಮ್ಮಾರೆಡ್ಡಿ ಆರೋಪಿಸಿದ್ದಾರೆ.
ನಾನು ಹಣ ತೆಗೆದುಕೊಂಡಿಲ್ಲ: ಮಂಜುನಾಥ
ಹುಬ್ಬಳ್ಳಿಯ ತೊರವಿ ಹೊಕ್ಕಲ ನಿವಾಸಿಯಾಗಿರುವ ತಿಮ್ಮಾರೆಡ್ಡಿ, ಮನೆ ಕೆಲಸ ಮಾಡಿಕೊಟ್ಟಿದ್ದೇನೆ. ಮತ್ತೆ ಹಣ ಕೇಳುತ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಎರಡು ವರ್ಷದ ಬಳಿಕ ಮಂಜುನಾಥ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಆದರೆ ಇತ್ತ ಮಂಜುನಾಥ ಮಾತ್ರ ‘ನಾನು ಹಣ ತೆಗೆದುಕೊಂಡಿಲ್ಲ. ಸುಳ್ಳು ಹೇಳುತ್ತಿದ್ದಾರೆ’ ಎಂದಿದ್ದಾರೆ.
ಕಚೇರಿಯಲ್ಲೇ ಲಂಚ ಪಡೆಯುವ ವೇಳೆ ಸಿಕ್ಕಬಿದ್ದ ಕೇಸ್ ವರ್ಕರ್
ಕೋಲಾರ ಉಪ ವಿಭಾಗಾಧಿಕಾರಿ ಕಚೇರಿಯ ಕೇಸ್ ವರ್ಕರ್, ಕಚೇರಿಯಲ್ಲೇ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಿ ಘಟನೆ ಇತ್ತೀಚೆಗೆ ನಡೆದಿತ್ತು. ಕೋಲಾರ ನಗರದ ಹೊರ ವಲಯದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಎಸಿ ಕಚೇರಿಯಲ್ಲೇ 20 ಸಾವಿರ ರೂ ಲಂಚ ಪಡೆಯುವ ವೇಳೆ ಕೇಸ್ ವರ್ಕರ್ ಕೋಮಲ್, ಲೋಕಾಯುಕ್ತ ಅಧಿಕಾರಿಗಳು ತೋಡಿದ್ದ ಖೆಡ್ಡಾಗೆ ಬಿದ್ದಿದ್ದರು.
ಇದನ್ನೂ ಓದಿ: ಲಂಚದ ಹಣ ನುಂಗಿದ ಅಧಿಕಾರಿ: ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್
ಉತ್ತನೂರು ಗ್ರಾಮದ ರೈತ ಸುರೇಶ್ ಎಂಬುವವರ ಪವತಿ ಖಾತೆಗೆ 50 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ ಕೇಸ್ ವರ್ಕರ್ ಕೋಮಲ್ ಮುಂಗಡವಾಗಿ 20 ಸಾವಿರ ರೂ ಲಂಚ ಪಡೆಯುವ ವೇಳೆ, ಹಣದ ಸಮೇತ ಸಿಕ್ಕಿಬಿದ್ದಿದ್ದರು.
ಕೋಮಲ್ ಕೋಲಾರ ಎಸಿ ಕಚೇರಿಯ ಕೇಸ್ ವರ್ಕರ್ ಆಗಿ ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೋಲಾರ ಲೋಕಾಯುಕ್ತ ಇನ್ಸ್ಪೆಕ್ಟರ್ ರೇಣುಕಾ ಮತ್ತು ಸಿಬ್ಬಂದಿ ದಾಳಿ ವೇಳೆ ಕೋಮಲರನ್ನ ವಶಕ್ಕೆ ಪಡೆಯಲಾಗಿದೆ.
ನಕಲಿ ಲೊಕಾಯುಕ್ತ ಡಿವೈಎಸ್ಪಿಯನ್ನ ಖೆಡ್ಡಾಗೆ ಬೀಳಿಸಿದ ಪೊಲೀಸ್
ತಾನೊಬ್ಬ ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಸಾಮಿಯನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯ ಕೆಬಿಜೆಎನ್ಎಲ್ ಕಚೇರಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಶೋಕ್ ತಿಪ್ಪಣ್ಣ ಬಿರಾದಾರ ಎಂಬುವವರಿಗೆ ಕರೆ ಮಾಡಿ ನಿಮ್ಮ ಮೇಲೆ ದೂರೊಂದು ದಾಖಲಾಗಿದೆ. ಅದರ ವಿಚಾರಣೆಗೆ ಒಳಪಡಿಸಬಾರದು ಎಂದರೆ ಹಣ ಕೊಡಬೇಕು ಎಂದು 70 ಸಾವಿರ ರೂ. ಬೇಡಿಕೆ ಇಟ್ಟಿದ್ದ.
ಇದನ್ನೂ ಓದಿ: ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಆರೋಪ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ
ಈ ವಿಚಾರವಾಗಿ ಕೆಬಿಜೆಎನ್ಎಲ್ ಅಧಿಕಾರಿ ಅಶೋಕ ಬಿರಾದಾರ್ ಮುದ್ದೇಬಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಕೈಗೆತ್ತಿಕೊಂಡ ಪೋಲಿಸರು ನಕಲಿ ಲೊಕಾಯುಕ್ತ ಡಿವೈಎಸ್ಪಿ ಮುರಿಗೆಪ್ಪ ಕುಂಬಾರ್ ಎಂಬಾತನನ್ನು ಬಂಧಿಸಿದ್ದಾರೆ. ಈತನ ಮೇಲೆ ಈಗಾಗಲೇ ಹಲವು ಪ್ರಕರಣ ದಾಖಲಾಗಿದ್ದ ಕಾರಣ ವಾರಂಟ್ ಕೂಡಾ ಜಾರಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:26 pm, Thu, 20 March 25