
ಹುಬ್ಬಳ್ಳಿ, ಜೂನ್ 26: ಸ್ಮಾರ್ಟ್ ಸಿಟಿ ಯೋಜನೆಯಡಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸಾಕಷ್ಟು ಹಣ ಹರಿದು ಬಂದಿದೆ. ಆದ್ರೆ ನಗರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಣ ಪೋಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ನಗರದ ಮಂಗಳ ಓಣಿಯಲ್ಲಿ ನಡೆಸಿರುವ ಕಾಮಗಾರಿಗಳು. ಒಳಚರಂಡಿ ನಿರ್ಮಾಣ ಮಾಡಿದ ನಂತರ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಜನಸಾಮಾನ್ಯರಿಗೂ ಗೊತ್ತಿರುವ ವಿಚಾರ. ಆದರೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆಯನ್ನೇ ಚರಂಡಿ ಮಾಡಲೆಂದು ಇಲ್ಲಿ ಅಗೆಯಲಾಗಿದೆ. ಬಳಿಕ ರಸ್ತೆ ದುರಸ್ತಿಯನ್ನೂ ಮಾಡದೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿರೋದು ಸ್ಥಳೀಯ ನಿವಾಸಿಗಳನ್ನು ಕೆರಳಿಸಿದೆ.
ಈ ಹಿಂದೆ ಮಂಗಳ ಓಣಿ ಮೂಲ ಸೌಕರ್ಯಗಳನ್ನು ಕಂಡಿರಲಿಲ್ಲ. ಚರಂಡಿ, ರಸ್ತೆ ಸೇರಿದಂತೆ ಕುಡಿಯುವ ನೀರಿಗೂ ಸಮಸ್ಯೆಯಿತ್ತು. ಕೊನೆಗೂ ಇಲ್ಲಿನ ನಿವಾಸಿಗಳ ಬೆಡಿಕೆ ಸ್ಪಂದಿಸಿದ್ದ ಆಡಳಿತ ಎರಡು ವರ್ಷದ ಹಿಂದಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಸಿ ರಸ್ತೆ ನಿರ್ಮಾಣ ಮಾಡಿತ್ತು. ಆದರೆ ಚರಂಡಿ ನಿರ್ಮಿಸೋದನ್ನು ಅಧಿಕಾರಿಗಳು ಮರೆತಿದ್ದರು. ಹೀಗಾಗಿ ಮನೆಗೆ ನೀರು ನುಗ್ಗಲು ಆರಂಭವಾದ ಕಾರಣ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಚರಂಡಿ ಮಾಡಲು ಹೊರಟ ಅಧಿಕಾರಿಗಳು, ನಿರ್ಮಾಣ ಮಾಡಿದ್ದ ರಸ್ತೆಯನ್ನೇ ಅಗೆದು ಕೆಲ ತಿಂಗಳ ಹಿಂದೆ ಕಾಮಗಾರಿ ನಡೆಸಿದ್ದಾರೆ. ಕೆಲಸ ಮುಗಿದ ಮೇಲೆ ಕನಿಷ್ಠ ರಸ್ತೆ ರಿಪೇರಿಯನ್ನೂ ಮಾಡದೆ ಹಾಗೆಯೇ ಬಿಟ್ಟ ಕಾರಣ ಬಡಾವಣೆಯಲ್ಲಿ ಓಡಾಡಲೂ ಜನ ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: ದಲಿತರಿಗೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಹಿಂದೇಟು; ಕಾರಣವೇನು ಗೊತ್ತಾ?
ಅಧಿಕಾರಿಗಳ ನಡೆ ವಿರುದ್ಧ ಸಿಡಿದೆದ್ದಿರುವ ಸ್ಥಳೀಯ ನಿವಾಸಿಗಳು, ನಗರದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಮಾರು ಒಂದು ಗಂಟೆಗಳ ಕಾಲ ತಡೆದು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಮನವೊಲಿಸಲು ಸ್ಥಳಕ್ಕೆ ಬಂದ ಪೊಲೀಸರು, ಅಧಿಕಾರಿಗಳ ವಿರುದ್ಧವೇ ಪ್ರತಿಭಟನಾಕಾರರು ಗರಂ ಆದ ಪ್ರಸಂಗವೂ ನಡೆದಿದೆ. ಉಂಟಾಗಿರುವ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹತ್ತಾರು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಸ್ತೆ ದುರಾವಸ್ತೆ ಕಾರಣ ಅನೇಕರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ಹೀಗಾಗಿಯೇ ನಾವು ಹೋರಾಟದ ಹಾದಿ ತುಳಿದಿದ್ದೇವೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:30 pm, Fri, 26 June 26