
ಹುಬ್ಬಳ್ಳಿ, ಮೇ 30: ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರದಲ್ಲಿ ನೂರಾರು ಕೋಟಿ ರೂ ಖರ್ಚು ಮಾಡಿದರು ಅಭಿವೃದ್ದಿ ಮಾತ್ರ ಹೇಳಿಕೊಳ್ಳುವಂತೆ ಆಗುತ್ತಿಲ್ಲ. ಬದಲಾಗಿ ಜನರ ಕೋಟಿ ಕೋಟಿ ತೆರಿಗೆ ಹಣವನ್ನು ವ್ಯರ್ಥ ಮಾಡುವ ಪ್ರಯತ್ನಗಳೇ ಹೆಚ್ಚಾಗುತ್ತಿವೆ. ವಿವಿಧ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಕೋಟ್ಯಂತರ ರೂ ಹಣ ಪೋಲಾಗುತ್ತಿದೆ. ಎರಡು ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ (Road) ನಿರ್ಮಾಣ ಮಾಡಲಾಗಿತ್ತು. ಒಳಚರಂಡಿ ನಿರ್ಮಾಣ ಮಾಡಿ ರಸ್ತೆ ಮಾಡಬೇಕಿತ್ತು. ಆದರೆ ಹುಬ್ಬಳ್ಳಿಯಲ್ಲಿ ಮೊದಲು ರಸ್ತೆ ನಿರ್ಮಾಣ ಮಾಡಿ, ಇದೀಗ ಅದೇ ರಸ್ತೆಯನ್ನು ಅಗೆದು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ನಗರದ ಎರಡೆತ್ತಿನ ಮಠದ ಮುಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಿಶೇಷ ಅನುದಾನದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವೀರಾಪುರ ಓಣಿಯಿಂದ ಯಲ್ಲಾಪುರ ಓಣಿವರಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸ್ಥಳೀಯರು, ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಹೀಗಾಗಿ ಮೊದಲು ಒಳಚರಂಡಿ ನಿರ್ಮಾಣ ಮಾಡಿ, ನಂತರ ಸಿಸಿ ರಸ್ತೆ ನಿರ್ಮಾಣ ಮಾಡಿ ಅಂತ ಪಾಲಿಕೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದ್ದರಂತೆ. ಆದರೆ ಅಂದು ಸಾರ್ವಜನಿಕರ ಮಾತು ಪರಿಗಣಿಸದ ಅಧಿಕಾರಿಗಳು ಒಳಚಂರಡಿ ಮಾಡದೇ ಸಿಸಿ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿಸಿ ರಸ್ತೆಯನ್ನು ಇದೀಗ ಏಕಾಏಕಿ ಅಗೆಯಲಾಗುತ್ತಿದೆ.
ಇದನ್ನೂ ಓದಿ: ಧಾರವಾಡ ಜನರ ದಶಕಗಳ ಬೇಡಿಕೆ ಈಡೇರುವ ಸಮಯ ಸನಿಹ: ಇದರಿಂದ ಜಿಲ್ಲೆಯ ಜನರಿಗೆ ಎಷ್ಟು ಲಾಭ?
ಈ ಬಗ್ಗೆ ಕೇಳಿದರೆ ಇಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗುತ್ತಿದೆ ಅಂತ ಅಧಿಕಾರಿಗಳು ಹೇಳ್ತಿದ್ದಾರಂತೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಒಳಚರಂಡಿ ಕಾಮಗಾರಿ ಮಾಡಿ ರಸ್ತೆ ನಿರ್ಮಾಣ ಮಾಡುವಂತೆ ಹಲವು ಬಾರಿ ಹೇಳಿದರೂ ಕೇಳದೆ ರಸ್ತೆ ಮಾಡಿದ್ದರು. ಇದೀಗ ಒಳಚರಂಡಿಗಾಗಿ ಎರಡು ವರ್ಷದ ಹಿಂದಷ್ಟೇ ಮಾಡಿದ್ದ ಸಿಸಿ ರಸ್ತೆ ಅಗೆಯುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಆರ್ಐಡಿಎಲ್ ಸದ್ಯ ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿದೆ. ಅದಕ್ಕಾಗಿ ಸಿಸಿ ರಸ್ತೆಯನ್ನು ಮದ್ಯದಲ್ಲಿಯೇ ಅಗೆಯಲಾಗಿದೆ. ಹೀಗಾಗಿ ಈ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಮಾಡಿದ್ದ ಎರಡು ಕೋಟಿ ರೂ ಜನರ ತೆರಿಗೆ ಹಣ ಪೋಲಾದಂತಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಇದೊಂದೆ ರಸ್ತೆಯಲ್ಲ. ಹುಬ್ಬಳ್ಳಿ-ಧಾರವಾಡದ ಅನೇಕ ಕಡೆ ಹೀಗೆಯೇ ಮಾಡಲಾಗುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕೋಟಿ ಕೋಟಿ ರೂ ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ರಸ್ತೆ ನಿರ್ಮಾಣ ಮಾಡುವುದು, ಬಳಿಕ ಕೆಲವೇ ತಿಂಗಳು, ವರ್ಷಗಳಲ್ಲಿ ಕುಡಿಯುವ ನೀರಿಗಾಗಿ, ಒಳಚರಂಡಿಗಾಗಿ ಅಗೆಯುವ ಕೆಲಸ ಮಾಡಲಾಗುತ್ತಿದೆ.
ಉತ್ತಮ ರಸ್ತೆಗಳನ್ನು ಸರಿಮಾಡುವ ಕೆಲಸ ಕೂಡ ಆಗುತ್ತಿಲ್ಲ. ಹೀಗಾಗಿ ಜನರು ಸಂಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ಪಾಲಿಕೆಯ ಮೇಯರ್ ಜೋತಿ ಪಾಟೀಲ್ರನ್ನು ಕೇಳಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರತ್ಯಕ ಪಾಲಿಕೆ ಹೋರಾಟಕ್ಕೆ ತೆರೆ: ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು
ಹುಬ್ಬಳ್ಳಿ-ಧಾರವಾಡದಲ್ಲಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅಧಿಕಾರಿಗಳ ಅಂದಾದರ್ಬಾರ್ ನೋಡಿಯೂ ಜನಪ್ರತಿನಿಧಿಗಳು ಸುಮ್ಮನಾಗಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಇದರಿಂದ ಜನರಿಗೆ ನಿತ್ಯ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ಇನ್ನಾದರೂ ವಿವಿಧ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವ ಕೆಲಸವಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.