ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು

ಹುಬ್ಬಳ್ಳಿಯಲ್ಲಿ ಗೃಹ ಬಳಕೆ ಸಿಲಿಂಡರ್ ಲಭ್ಯತೆಗೆ ಸಮಸ್ಯೆಯಿಲ್ಲವಾದರೂ, ಬುಕ್ಕಿಂಗ್ ಸರ್ವರ್ ಡೌನ್ ಆಗಿದ್ದರಿಂದ ಗ್ರಾಹಕರು ಪರದಾಡುತ್ತಿದ್ದಾರೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವವಿದ್ದು, ಹೋಟೆಲ್‌ ಮಾಲೀಕರು ಕಂಗೆಟ್ಟಿದ್ದಾರೆ. ಸರ್ವರ್ ಸಮಸ್ಯೆಯಿಂದ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗದೆ, ಜನರಲ್ಲಿ ಆತಂಕ ಹೆಚ್ಚಾಗಿದ್ದು, ಗ್ಯಾಸ್ ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದಾರೆ.

ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು
ಏಜೆನ್ಸಿ ಮುಂದೆ ಖಾಲಿ ಸಿಲಿಂಡರ್ ಹಿಡಿದು ಕೂತ ಜನ
Image Credit source: tv9 kannada
Edited By:

Updated on: Mar 14, 2026 | 4:13 PM

ಹುಬ್ಬಳ್ಳಿ, ಮಾರ್ಚ್​​  14: ರಾಜ್ಯದಲ್ಲಿ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ (gas cylinder) ಪೂರೈಕೆಗೆ ಸಮಸ್ಯೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಅಭಾವವಿದ್ದು, ಹೋಟೆಲ್ ಮಾಲೀಕರು ದೊಡ್ಡಮಟದಲ್ಲಿ ಪರದಾಡುತ್ತಿದ್ದಾರೆ. ಆದರೆ ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆಯಾಗುತ್ತಿದ್ದು, ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಪರದಾಡುತ್ತಿದ್ದಾರೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮುಂದೆ ತಮಗೆ ಎಲ್ಲಿ ಸಿಲಿಂಡರ್ ಸಿಗೋದಿಲ್ವೋ ಅನ್ನೋ ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ತಗೆದುಕೊಂಡು ಬರ್ತಿದ್ದು, ಹೊಸ ಸಿಲಿಂಡರ್​ಗಾಗಿ ಬೇಡಿಕೆ ಇಡ್ತಿದ್ದಾರೆ. ಇದೇ ಕಾರಣಕ್ಕೆ ಅನೇಕರು ಇಂದು ಹುಬ್ಬಳ್ಳಿಯಲ್ಲಿ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ ಹಾಕಿದರು. ತಮಗೆ ಸಿಲಿಂಡರ್ ಬೇಕು ಅಂತ ಏಜನ್ಸಿ ಸಿಬ್ಬಂದಿ ವಿರುದ್ದ ವಾಗ್ವಾದ ನಡೆಸಿದರು.

ಸಿಬ್ಬಂದಿ ಹರಸಾಹಸ

ಹುಬ್ಬಳ್ಳಿ ನಗರದ ಕಾರವಾರ ರಸ್ತೆಯಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಮುಂದೆ ಇಂದು ಮುಂಜಾನೆ ಬಾಗಿಲು ತಗೆಯುವ ಮೊದಲೇ ಅನೇಕರು ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ತಾವು ಅಷ್ಟೇ ಅಲ್ಲದೇ ಸಿಲಿಂಡರ್​ಗಳನ್ನು ಕೂಡ ಸರದಿ ಸಾಲಿನಲ್ಲಿ ಇಟ್ಟಿದ್ದರು. ತಾವು ಖಾಲಿ ಸಿಲಿಂಡರ್ ತಂದಿದ್ದೇವೆ. ತಮಗೆ ಖಾಲಿ ಸಿಲಿಂಡರ್ ಪಡೆದು, ತುಂಬಿರೋ ಸಿಲಿಂಡರ್ ಕೊಡಿ ಅಂತ ಕೇಳುತ್ತಿದ್ದರು. ಆದರೆ ನೀವು ಸಿಲಿಂಡರ್ ಬುಕ್ ಮಾಡಬೇಕು. ನಾವು ನಿಮ್ಮ ಮನೆಗೆ ಸಿಲಿಂಡರ್ ತಂದು ಕೊಡ್ತೇವೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದರು ಜನರು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಸಿಲಿಂಡರ್ ಸಿಗದೇ ಇದ್ದಿದ್ದಕ್ಕೆ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು. ಗ್ರಾಹಕರನ್ನು ಸಮಾಧಾನ ಮಾಡಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಆದರೆ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್​ಗೆ ಸಮಸ್ಯೆಯಾಗಿಲ್ಲ. ಸಿಲಿಂಡರ್ ಬುಕ್ ಆದವರ ಮನೆಗೆ ಸಿಲಿಂಡರ್​ ಡೆಲಿವರಿ ಆಗುತ್ತಿದೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ಸಿಲಿಂಡರ್ ಬುಕ್​ಗೆ ಹೆಚ್ಚಿನ ಜನರು ಮುಂದಾಗಿದ್ದರಿಂದ ಬುಕ್ಕಿಂಗ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಹಗಲು ಹೊತ್ತಲ್ಲಿ ಬುಕ್ ಮಾಡಲು ಮುಂದಾದವರಿಗೆ ಶಾಕ್ ಆಗ್ತಿದ್ದು, ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಹೀಗಾಗಿ ಗ್ಯಾಸ್ ಏಜೆನ್ಸಿಗಳ ಅಂಗಡಿಗಳಿಗೆ ತಮ್ಮ ಖಾಲಿ ಸಿಲಿಂಡರ್ ಸಮೇತ ಬರ್ತಿರೋ ಜನರು, ತಮಗೆ ಸಿಲಿಂಡರ್ ಕೊಡಿ ಅಂತ ಪಟ್ಟು ಹಿಡಿಯುತ್ತಿದ್ದಾರೆ. ಆದರೆ ಬುಕ್ ಮಾಡಿದವರಿಗೆ ಮಾತ್ರ ಸಿಲಿಂಡರ್ ಕೊಡ್ತೇವೆ ಅಂತ ಸಿಬ್ಬಂದಿ ಹೇಳ್ತಿದ್ದಾರೆ. ಇದು ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.

ಮಿಸ್ ಕಾಲ್ ಕೊಟ್ಟರು ಸಿಲಿಂಡರ್ ಬುಕ್ ಆಗ್ತಿಲ್ಲ. ಮತ್ತೊಂದೆಡೆ ವಾಟ್ಸಪ್, ಅಮೆಜಾನ್​ನಿಂದ ಕೂಡ ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದೀಗ ಹಬ್ಬ ಬಂದಿದೆ. ತಮಗೆ ಗ್ಯಾಸ್ ಸಿಲಿಂಡರ್ ನೀಡಬೇಕು ಅಂತ ಗ್ರಾಹಕರು ಪಟ್ಟು ಹಿಡದಿದ್ದರೆ, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕೇಳಿದರೆ ಸಿಲಿಂಡರ್ ಅಭಾವವಿಲ್ಲ. ಬುಕ್ ಮಾಡಿದ ಪ್ರತಿಯೊಬ್ಬರಿಗೂ ಸಿಲಿಂಡರ್ ನೀಡ್ತಿದ್ದೇವೆ. ಆದರೆ ಸರ್ವರ್ ಡೌನ್​​ನಿಂದ ಸಿಲಿಂಡರ್ ಬುಕ್ ಆಗೋದು ವಿಳಂಬವಾಗುತ್ತಿದೆ. ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಏಜೆನ್ಸಿಯವರು ಜನರಿಂದ ಸ್ಥಳದಲ್ಲಿಯೇ ಹಣ ಪಡೆದು, ಅನೇಕರಿಗೆ ಸಿಲಿಂಡರ್ ಕೊಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್​​ ಇಲ್ಲದಿದ್ದರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸಿಗುತ್ತೆ ಹೊಟ್ಟೆ ತುಂಬ ಪ್ರಸಾದ

ಸದ್ಯ ಗೃಹ ಬಳಕೆ ಸಿಲಿಂಡರ್​ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸರ್ವರ್ ಡೌನ್​ನಿಂದ ಬುಕ್ ಆಗದೇ ಇರೋದರಿಂದ ಗ್ರಾಹಕರು ಮತ್ತು ಏಜೆನ್ಸಿ ಸಿಬ್ಬಂದಿ ನಡುವೆ ವಾಗ್ವಾದಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us