ಕಿಮ್ಸ್​​ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಹುಬ್ಬಳ್ಳಿ ಕಿಮ್ಸ್​​ನ ಬಡವರ ಸಂಜೀವಿನಿ ಎಂದು ಕರೆಯುತ್ತಾರೆ. ಕಿಮ್ಸ್​​ಗೆ ಬಂದ್ರೆ ಜೀವ ಉಳಿಯುತ್ತೆ ಎನ್ನುವ ನಂಬಿಕೆಯಿಂದ ಅನೇಕರು ಬರ್ತಾರೆ. ಆದ್ರೆ ಜೀವ ಉಳಿಸಬೇಕಿದ್ದ ಕಿಮ್ಸ್ ಸಿಬ್ಬಂದಿಯೇ ಜೀವ ತೆಗೆಯುವ ಕೆಲಸ ಮಾಡ್ತಿದ್ದಾರೆ ಎನ್ನುವ ಆರೋಪಗಳು ಇತ್ತೀಚೆಗೆ ಮೇಲಿಂದ ಮೇಲೆ ಕೇಳಿಬರುತ್ತಿವೆ. ಈ ನಡುವೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಲು ಸತಾಯಿಸಿದ ಪರಿಣಾಮ, ಆತ ಬ್ರೈನ್ ಡೆಡ್ ಆಗಿ ಬಾರದ ಲೋಕಕ್ಕೆ ಹೋಗಿದ್ದಾನೆ. ತಮ್ಮ ಮಗನ ಸಾವಿಗೆ ಕಿಮ್ಸ್ ಸಿಬ್ಬಂದಿಯೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂಬ ಮಾಹಿತಿ ಇಲ್ಲಿದೆ.

ಕಿಮ್ಸ್​​ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು
ಮೃತ ಪ್ರಕಾಶ್​​
Image Credit source: Tv9 Kannada
Edited By:

Updated on: Mar 15, 2026 | 3:54 PM

ಹುಬ್ಬಳ್ಳಿ, ಮಾರ್ಚ್​​ 15: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಕಿಮ್ಸ್​​ ಸಿಬ್ಬಂದಿ ಬೇಜವಾಬ್ದಾರಿ ತೋರಿರುವ ಕಾರಣ ಆತ ಬ್ರೈನ್​ ಡೆಡ್​​ ಆಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಧಾರವಾಡದ ತಾಲೂಕಿನ ಮೊರಬ ಗ್ರಾಮದ ನಿವಾಸಿ ಪ್ರಕಾಶ್ (25) ಮೃತರಾಗಿದ್ದು, ಜೆಸಿಬಿ ಚಾಲಕನಾಗಿ ಇವರು ಕೆಲಸಮಾಡಿಕೊಂಡಿದ್ದರು. ಮಾರ್ಚ್ 13ರಂದು ಕೆಲಸ ಮುಗಿಸಿ ಬೈಕ್​ನಲ್ಲಿ ತಮ್ಮೂರಿಗೆ ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತವಾಹನ ಡಿಕ್ಕಿಯಾಗಿ ಪ್ರಕಾಶ್​​ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ್ಯಂಬುಲೆನ್ಸ್​ ಮೂಲಕ ಕೂಡಲೇ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್​​ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗಾಗಿ ರಾತ್ರಿಯೇ ಪ್ರಕಾಶ್​​ರನ್ನು ಕಿಮ್ಸ್​​ಗೆ ಕರೆತರಲಾಗಿತ್ತು. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರೂ ಕನಿಷ್ಠ ಚಿಕಿತ್ಸೆಯನ್ನೂ ನೀಡಿಲ್ಲ. ಬೆಡ್ ಇಲ್ಲವೆಂಬ ಕಾರಣ ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ.

ಆ್ಯಂಬುಲೆನ್ಸ್​​ನಿಂದ ಗಾಯಾಳುವನ್ನು ಕೆಳಗಿಳಿಸಲೂ ಸಿಬ್ಬಂದಿ ಬಾರದ ಕಾರಣ, ಅರ್ಧಗಂಟೆಗೂ ಹೆಚ್ಚು ಕಾದು ಬಳಿಕ ಅನಿವಾರ್ಯವಾಗಿ ಪ್ರಕಾಶ್​​ರನ್ನು ಮತ್ತೆ ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಅಷ್ಟರೊಳಗಾಗಿ ಅವರ ಬ್ರೈನ್ ಡೆಡ್ ಆಗಿದೆ. ಹೀಗಾಗಿ ಮರಳಿ ಮತ್ತೆ ಕಿಮ್ಸ್​​ಗೆ ಕರೆತರಲಾಗಿತ್ತಾದರೂ ಗಾಯಾಳು ಮಾತ್ರ ಬದುಕುಳಿಯಲಿಲ್ಲ. ಧಾರವಾಡ ಜಿಲ್ಲಾ ಆಸ್ಪತ್ರೆಯಿದ ಹುಬ್ಬಳ್ಳಿ ಕಿಮ್ಸ್, ಹುಬ್ಬಳ್ಳಿ ಕಿಮ್ಸ್​​ನಿಂದ ಧಾರವಾಡ ಖಾಸಗಿ ಆಸ್ಪತ್ರೆ ಓಡಾಟದಲ್ಲಿಯೇ ಎರಡು ಗಂಟೆಗೂ ಹೆಚ್ಚು ಸಮಯ ಹೋಗಿದ್ದರಿಂದ ಸೂಕ್ತ ಚಿಕಿತ್ಸೆ ಸಿಗದ ಕಾರಣ ಪ್ರಕಾಶ್ ಬಾರದ ಲೋಕಕ್ಕೆ ಹೋಗಿದ್ದಾರೆ. ಹುಬ್ಬಳ್ಳಿ ಕಿಮ್ಸ್​​ನಲ್ಲಿಯೇ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಪ್ರಕಾಶ್ ಬದುಕುಳಿಯುತ್ತಿದ್ದರು. ಇಲ್ಲಿನ ಸಿಬ್ಬಂದಿ ಆತನನ್ನು ಬಲಿ ಪಡೆದಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಧಾರವಾಡದ ಕೇಂದ್ರ ಕಾರಾಗೃಹ ಕೈದಿಗಳ ಪಾಲಿಗೆ ಪಂಚತಾರಾ ಹೋಟೆಲ್; ಹಣ ಕೊಟ್ಟರೆ ಎಲ್ಲ ಸಿಗುತ್ತದೆ, ಆಡಿಯೋ ವೈರಲ್

ಇನ್ನು ಹುಬ್ಬಳ್ಳಿಯ ಕಿಮ್ಸ್​​ನಲ್ಲಿ ಇತ್ತೀಚೆಗೆ ಕೆಲ ಡಿ ಗ್ರೂಪ್ ಸಿಬ್ಬಂದಿ ಹಾಗೂ ವೈದ್ಯರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತವರ ವಿರುದ್ದ ಮೇಲಾಧಿಕಾರಿಗಳು ಕಠೀಣ ಕ್ರಮ ಕೈಗೊಳ್ಳಬೇಕಿದ್ದು, ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಜನರು ಕಿಮ್ಸ್​​ನ ಬಡವರ ಸಂಜೀವಿನಿ ಎಂದೇ ನಂಬಿರುವ ಕಾರಣ, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us