ಹುಬ್ಬಳ್ಳಿ; ಗಣೇಶ ವಿಸರ್ಜನೆ ವೇಳೆ ಈದ್ ಮಿಲಾದ್ ಮೆರವಣಿಗೆ ಇಲ್ಲ, ಮುಂದೂಡಿರುವುದಾಗಿ ಘೋಷಿಸಿದ ಅಂಜುಮನ್ ಸಮಿತಿ
Eid Milad procession; ಈದ್ ಮಿಲಾದ್ ನಮಗೆ ದೊಡ್ಡ ಹಬ್ಬ. 28ಕ್ಕೆ ಹಬ್ಬ ಆಚರಿಸುತ್ತೇವೆ. ಆದ್ರೆ ಮೆರವಣಿಗೆ 29 ಕ್ಕೆ ಮಾಡ್ತೀವಿ ಎಂದು ಅಂಜುಮನ್ ಸಮಿತಿ ಅಧ್ಯಕ್ಷ ಯುಸೂಫ್ ಸವಣೂರ ತಿಳಿಸಿದ್ದಾರೆ.
ಹುಬ್ಬಳ್ಳಿ, ಸೆಪ್ಟೆಂಬರ್ 20: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಗಣೇಶೋತ್ಸವ ಆಚರಣೆ ವಿವಾದದ ಬಿಸಿ ತಣ್ಣಗಾಗುತ್ತಿರುವಂತೆಯೇ ಶಾಂತಿ ಸೌಹಾರ್ದತೆಗಾಗಿ ಅಂಜುಮನ್ ಸಮಿತಿ (Anjuman Committee) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು (Eid Milad procession) ಒಂದು ದಿನ ಮುಂದೂಡಲು ಅಂಜುಮನ್ ಸಮಿತಿ ನಿರ್ಧಾರ ಕೈಗೊಂಡಿದೆ. ಶಾಂತಿ ಸೌಹಾರ್ದತೆಗಾಗಿ ಮೆರವಣಿಗೆ ಮುಂದೂಡಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಇದೇ 28 ಕ್ಕೆ ಪವಿತ್ರ ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತದೆ. ಅಂದೇ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ. ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಬೇಡ. 28 ಕ್ಕೆ ಬದಲಾಗಿ 29 ಕ್ಕೆ ಮೆರವಣಿಗೆ ನಡೆಸೋಣ ಎಂದು ಸಮಿತಿಯ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಮುಸ್ಲಿಂ ಗುರುಗಳು, ಅಂಜುಮನ್ ಸಮಿತಿಯ 52 ಸದಸ್ಯರಿಂದ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈದ್ ಮಿಲಾದ್ ನಮಗೆ ದೊಡ್ಡ ಹಬ್ಬ. 28ಕ್ಕೆ ಹಬ್ಬ ಆಚರಿಸುತ್ತೇವೆ. ಆದ್ರೆ ಮೆರವಣಿಗೆ 29 ಕ್ಕೆ ಮಾಡ್ತೀವಿ ಎಂದು ಅಂಜುಮನ್ ಸಮಿತಿ ಅಧ್ಯಕ್ಷ ಯುಸೂಫ್ ಸವಣೂರ ತಿಳಿಸಿದ್ದಾರೆ.
ನಾವು ತ್ಯಾಗ ಮಾಡಿ ಮೆರವಣಿಗೆ ಮುಂದೂಡಿಕೆ ಮಾಡಿದ್ದೇವೆ. ಆದ್ರೆ ಮೆರವಣಿಗೆಗೆ ಯಾವುದೇ ಸಮಯ ನಿರ್ಬಂಧ ಇಲ್ಲ ಎಂದು ಈಗಾಗಲೇ ಪೊಲೀಸರಿಗೆ ಹೇಳಿದ್ದೇವೆ. ಯಾಕಂದರೆ ನಾವು ಬಿಜೆಪಿ ಸರ್ಕಾರದಲ್ಲಿ ಬಹಳ ಸಫರ್ ಆಗಿದ್ದೇವೆ. ಶಾಂತಿಯ ಕಾರಣಕ್ಕಾಗಿ ನಾವು ಮೆರವಣಿಗೆ ಮುಂದಕ್ಕೆ ಹಾಕುತ್ತಿದ್ದೇವೆ. ಗಣೇಶ ವಿಸರ್ಜನೆ ವೇಳೆ ಪರಸ್ಪರ ಗಲಾಟೆ ಆಗಬಾರದು ಅನ್ನೋ ಕಾರಣಕ್ಕೆ ಮೆರವಣಿಗೆ ಮುಂದಕ್ಕೆ ಹಾಕಿದ್ದೇವೆ. ನಾವು ದೊಡ್ಡ ನಿರ್ದಾರ ತಗೆದುಕೊಂಡಿದ್ದೇವೆ. ಅವರು ಹಬ್ಬ ಮಾಡಲಿ, ಅವರಿಗೆ ಗಣೇಶ ಹಬ್ಬದ ಶುಭಾಶಯಗಳು. ನಮ್ಮ ಮುಸ್ಲಿಂ ಸಮುದಾಯ ಎಲ್ಲರೂ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಯುಸೂಫ್ ಸವಣೂರ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬದ ಸಂಭ್ರಮ; ಕಾಶಿ ವಿಶ್ವನಾಥ ದೇಗುಲದ ಮಾದರಿಯಲ್ಲಿ ಗಂಗಾರತಿ, ಇಲ್ಲಿದೆ ವಿಡಿಯೋ
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕೊನೇ ಕ್ಷಣದ ವರೆಗೂ ಧರಣಿ ನಡೆಸಿದ್ದವು. ಈ ಮಧ್ಯೆ, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಠರಾವಿಗೆ ತಡೆಯಾಜ್ಞೆ ಕೋರಿ ಅಂಜುಮನ್ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ನ ಧಾರವಾಡ ಪೀಠ ವಜಾಗೊಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ