ಮತದಾನಕ್ಕೆ ಶಾಸಕ ವಿನಯ್ ಕುಲಕರ್ಣಿಗೆ ಕೋರ್ಟ್ ಅನುಮತಿ, ಧಾರವಾಡದಲ್ಲಿ ಬಿಗಿ ಬಂದೋಬಸ್ತ್
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮತದಾನಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಶಾಸಕ ವಿನಯ್ ಕುಲಕರ್ಣಿಗೆ ಮತದಾನದಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಈ ಹಿನ್ನಲೆ ಧಾರವಾಡದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು, ಮೇ.07: ಶಾಸಕ ವಿನಯ್ ಕುಲಕರ್ಣಿಗೆ(Vinay Kulkarni) ಮತದಾನದಲ್ಲಿ ಭಾಗವಹಿಸಲು ಹೈಕೋರ್ಟ್ ಏಕಸದಸ್ಯ ಪೀಠ ಅನುಮತಿ ನೀಡಿದೆ. ಮತದಾನ ಮಾಡಿ ತಕ್ಷಣ ಧಾರವಾಡ(Dharwad) ತೊರೆಯುವಂತೆ ಸೂಚಿಸಿದೆ. ಹೌದು, ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕದಲ್ಲಿ ಸಿಲುಕಿರುವ ವಿನಯ್ ಅವರಿಗೆ ಧಾರವಾಡಕ್ಕೆ ಪ್ರವೇಶಿಸಲು ಸುಪ್ರೀಂಕೋರ್ಟ್ ನಿರ್ಬಂಧ ಹೇರಿತ್ತು. ಈ ಹಿನ್ನಲೆ ಮತದಾನ ಮಾಡಲು ಧಾರವಾಡ ಪ್ರವೇಶ ಕೋರಿದ್ದರು.
ಪತಿಯ ಆಗಮನಕ್ಕಾಗಿ ಕಾಯುತ್ತಿರೋ ಪತ್ನಿ
ಅದರಂತೆ ಇದೀಗ ಮತದಾನಕ್ಕೆ ಅವಕಾಶ ಸಿಕ್ಕಿದ್ದು, ಧಾರವಾಡ ನಗರದ ಶಾರದಾ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 75 ಕ್ಕೆ ವಿನಯ್ ಕುಲಕರ್ಣಿ ಆಗಮಿಸಲಿದ್ದಾರೆ. ಇನ್ನು ಈಗಾಗಲೆ ಮತಗಟ್ಟೆಗೆ ಆಗಮಿಸಿದ ವಿನಯ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಪತಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಪ್ರಕರಣ; ಸಂತ್ರಸ್ತೆಯರ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಅವರ ಭವಿಷ್ಯವೇನು? ವಿನಯ್ ಕುಲಕರ್ಣಿ
ಏನಿದು ಪ್ರಕರಣ?
2016 ರ ಜೂನ್ 15 ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ಜಿಮ್ನಲ್ಲಿ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್‌ಗೌಡ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ ಕುಲಕರ್ಣಿ ಅವರನ್ನು ನವೆಂಬರ್ 5, 2020 ರಂದು ಬಂಧನ ಮಾಡಲಾಗಿತ್ತು. 2021 ಜುಲೈ 27 ರಂದು ಜಿಪಿಎ ನೀಡಲು ಬೆಳಗಾವಿಯಿಂದ ವಿನಯ ಬಂದಿದ್ದ. ಬಳಿಕ ಆಗಸ್ಟ್ 11, 2021 ರಂದು ಜಾಮೀನು ಮಂಜೂರಾಯಿತು. ಆದರೆ, ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ ಸುಮಾರು 3 ವರ್ಷಗಳಿಂದ ವಿನಯ ಕುಲಕರ್ಣಿ ಜಿಲ್ಲೆಗೆ ಕಾಲಿಟ್ಟಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Tue, 7 May 24