ಲೋಕಸಭೆ ಚುನಾವಣೆ: ಧಾರವಾಡದ 180 ಸದಸ್ಯರ ಈ ಕುಟುಂಬದಿಂದ 96 ಮಂದಿ ಮತ ಚಲಾವಣೆ!
ಧಾರವಾಡ ಜಿಲ್ಲೆಯ ನೂಲ್ವಿ ಗ್ರಾಮದ ಕೊಪ್ಪದ್ ಕುಟುಂಬದಲ್ಲಿ 180 ಸದಸ್ಯರಿದ್ದಾರೆ. ಈ ಬೃಹತ್ ಕುಟುಂಬದಲ್ಲಿ 96 ಮಂದಿ ಮತದಾರರೂ ಇದ್ದಾರೆ. ಇವರೆಲ್ಲ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಮತದಾನ ಎಂಬುದು ಹಬ್ಬದಂತೆ ಎನ್ನುತ್ತಾರೆ ಕೊಪ್ಪದ್ ಕುಟುಂಬದವರು. ಮತ ಚಲಾಯಿಸಿದ ನಂತರ ಕುಟುಂಬದವರು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.
ಹುಬ್ಬಳ್ಳಿ, ಮೇ 8: ಲೋಕಸಭೆ ಚುನಾವಣೆಯ (Lok Sabha Elections) ಮೂರನೇ ಹಂತದ ಮತದಾನ (Voting) ಮಂಗಳವಾರ ಮುಕ್ತಾಯವಾಗಿದ್ದು, ಹುಬ್ಬಳ್ಳಿ ಧಾರವಾಡವೂ ಸೇರಿದಂತೆ (Hubballi Dharawad) ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಹುಬ್ಬಳ್ಳಿ ಧಾರವಾಡ ಕ್ಷೇತ್ರ ಮಾತ್ರ ಈಗ ರಾಜ್ಯದ ಗಮನ ಸೆಳೆದಿದೆ. ಇದಕ್ಕೆ ಕಾರಣ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತೀರಿ. ಒಂದೇ ಕುಟುಂಬದ 96 ಮಂದಿ ಇಲ್ಲಿ ಮತ ಚಲಾಯಿಸಿದ್ದಾರೆ!
ಧಾರವಾಡ ಜಿಲ್ಲೆಯ ನೂಲ್ವಿ ಗ್ರಾಮದ ಕೊಪ್ಪದ್ ಕುಟುಂಬದಲ್ಲಿ 180 ಸದಸ್ಯರಿದ್ದಾರೆ. ಈ ಬೃಹತ್ ಕುಟುಂಬದಲ್ಲಿ 96 ಮಂದಿ ಮತದಾರರೂ ಇದ್ದಾರೆ.
ಗ್ರಾಮದ ಒಂದೇ ಬೀದಿಯ ವಿವಿಧ ಮನೆಗಳಲ್ಲಿ 180 ಮಂದಿಯ ಕೊಪ್ಪದ್ ಕುಟುಂಬ ವಾಸವಾಗಿದೆ. 96 ಮತದಾರರ ಪೈಕಿ 30 ಮಂದಿ ಮಹಿಳೆಯರು. ಪುರುಷರು ಊಟದ ಸಮಯದಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡಿದರೆ, ಬೇಸಿಗೆಯ ಸುಡುವ ಬಿಸಿಲಿನ ಕಾರಣದಿಂದ ಹಿರಿಯರು ಸಂಜೆಯ ಸಮಯದಲ್ಲಿ ಮತ ಚಲಾಯಿಸಿದ್ದಾರೆ. ನಾವು ತಪ್ಪದೇ ಮತದಾನ ಮಾಡುತ್ತಿದ್ದೇವೆ ಎಂದು ಕುಟುಂಬದ ಹಿರಿಯ ಸದಸ್ಯ ಕಂಟೆಪ್ಪ ಕೊಪ್ಪದ್ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಮೊದಲಿನಿಂದಲೂ ನಾವು ಒಂದು ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದೇವು. ಕುಟುಂಬಗಳು ಬೆಳೆಯಲು ಪ್ರಾರಂಭವಾದಾಗ, ನಾವು ಒಂದೇ ಬೀದಿಯಲ್ಲಿ ವಿವಿಧ ಮನೆಗಳಿಗೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಿದ್ದೆವು. ಸದ್ಯ ಇಡೀ ಬೀದಿಯಲ್ಲಿ ಕೊಪ್ಪದ್ ಕುಟುಂಬದ ಸದಸ್ಯರ ಮನೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರು ಮನೆಗೆ ಮರಳಿದ ನಂತರ ಹೊಲಗಳಲ್ಲಿ ಕೆಲಸ ಮಾಡುವ ಪುರುಷರು ಮತ ಚಲಾಯಿಸಲು ಹೋಗುತ್ತಾರೆ. ನಮಗೆ ಚುನಾವಣೆ ಬಂತೆಂದರೆ ಇತರ ಹಬ್ಬಗಳಂತೆ ಅದೂ ಒಂದು ಹಬ್ಬವೇ. ಚುನಾವಣೆ ನೆಪದಲ್ಲಿ ಎಲ್ಲ ಒಟ್ಟಿಗೆ ಸೇರುತ್ತೇವೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಫಕೀರವ್ವ ಕೊಪ್ಪದ್ ಪ್ರತಿನಿಧಿಸುವ ವಾರ್ಡ್‌ನಲ್ಲಿ ತಮ್ಮ ಕುಟುಂಬದ ಶೇ 30ರಷ್ಟು ಮತಗಳಿವೆ. ನಾವು 180 ಸದಸ್ಯರು ಈಗ ಗ್ರಾಮದಲ್ಲಿ ಪರಸ್ಪರ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಪ್ರತಿಯೊಂದು ಕುಟುಂಬವು ತನ್ನದೇ ಆದ ವ್ಯವಹಾರವನ್ನು ಹೊಂದಿದೆ. ಉದಾಹರಣೆಗೆ ಕೃಷಿ, ಬಾಡಿಗೆಗೆ ವಾಹನಗಳನ್ನು ಓಡಿಸುವುದು ಮತ್ತು ಅಂಗಡಿಗಳು ಇತ್ಯಾದಿ. ಮಕ್ಕಳು ಹಳ್ಳಿಗಳಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಓದುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಅಂತ್ಯ: ಯಾವ್ಯಾವ ಕ್ಷೇತ್ರದಲ್ಲಿಎಷ್ಟು ಮತದಾನ? ಇಲ್ಲಿದೆ ವಿವರ
ವಾರ್ಷಿಕ ತೀರ್ಥಯಾತ್ರೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಕುಟುಂಬಗಳು ಒಟ್ಟಿಗೆ ಸೇರುತ್ತವೆ. ಮತದಾನವು ಗಂಭೀರ ವಿಷಯವಾಗಿದೆ ಮತ್ತು ಎಲ್ಲಾ ಕುಟುಂಬಗಳು ತಮ್ಮ ಹಕ್ಕು ಚಲಾಯಿಸಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಕುಟುಂಬದ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ (ಮೇ 7) ಮತದಾನ ನಡೆದಿದ್ದು, ಶೇ 68ರಷ್ಟು ಮತದಾನವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ