ಹುಬ್ಬಳ್ಳಿ ನೇಹ ಹಿರೇಮಠ ಕೊಲೆ ಪ್ರಕರಣ: ಹಂತಕನ ಜಾಮೀನು ಅರ್ಜಿ ವಜಾ
Neha Hiremath Murder Case: ಕರ್ನಾಟಕದಾದ್ಯಂತ ಭಾರೀ ಸುದ್ದಿಯಾಗಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಫಯಾಜ್ ಗೆ ಕೋರ್ಟ್ ಶಾಕ್ ಕೊಟ್ಟಿದೆ. ಕಾಲೇಜಿನೊಳಗೆ ನುಗ್ಗಿ ನೇಹಾಳನ್ನು ಹತ್ಯೆಗೈದಿದ್ದ ಫಯಾಜ್ ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಅಲ್ಲದೇ ಖುದ್ದು ಹಾಜರಾಹುವಂತೆ ಖಡಕ್ ಸೂಚನೆ ನೀಡಿದೆ.

ಹುಬ್ಬಳ್ಳಿ, (ಆಗಸ್ಟ್ 04): ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ (Neha Hiremath Murder Case) ಆರೋಪಿ ಫಯಾಜ್ ( accused fayaz)ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. 2024ರ ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಇಂದು(ಆಗಸ್ಟ್ 04) ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು, ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಇಲ್ಲಿವರೆಗೆ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಹಂತಕ ಫಯಾಜ್ ನನ್ನು ಆಗಸ್ಟ್ 6 ರಂದು ಖುದ್ದು ಹಾಜರಿಗೆ ಕೋರ್ಟ್ ಸೂಚಿಸಿದೆ. ಇನ್ನು ಹಂತಕ ಫಯಾಜ್ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್ನ ಆದೇಶವನ್ನು ನೇಹಾ ಹಿರೇಮಠ ಕುಟುಂಬಸ್ಥರು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೇಹಾ ತಂದೆ ನಿರಂಜನ ಹಿರೇಮಠ, ನಮಗೆ ಮೊದಲ ಜಯ ಸಿಕ್ಕಿದೆ, ನೇಹಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. ವಾಮಮಾರ್ಗದ ಮೂಲಕ ಜಾಮೀನು ಪಡೆಯಲು ಯತ್ನ ನಡೆದಿತ್ತು. ಮತ್ತೆ ಯಾರ ಕೊಲೆಗೆ ಸಂಚು ರೂಪಿಸಿದ್ದನೋ ಏನೋ. ಎಲ್ಲರ ಹೋರಾಟಕ್ಕೆ ಮೊದಲ ಹಂತದಲ್ಲಿ ನ್ಯಾಯ ಸಿಕ್ಕಿದೆ. ನಮಗೆ ನ್ಯಾಯ ಸಿಗುತ್ತದೆ ಅನ್ನೋ ಭರವಸೆ ಮೂಡಿದೆ. ಆರೋಪಿ ಫಯಾಜ್ಗೆ ಬೇಗನೆ ಗಲ್ಲು ಶಿಕ್ಷೆಯಾಗಬೇಕು ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಪ್ರಕರಣದ ಹಿನ್ನೆಲೆ
ಏಪ್ರಿಲ್ 18, 2024ರಂದು, ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 24 ವರ್ಷದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ನಡೆದಿತ್ತು. ಫಯಾಜ್ ಎನ್ನುವ ಯುವಕ 10 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಹಿರಿದು ನೇಹಾಳನ್ನ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಪೊಲಿಸರು ಕಾರ್ಯಚರಣೆ ನಡೆಸಿ ಆರೋಪಿ ಬೆಳಗಾವಿ ಜಿಲ್ಲೆಯ ಫಯಾಜ್ ಕೊಂಡುನಾಯ್ಕ್ (24) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಪ್ರಕರಣವು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Mon, 4 August 25



