
ಹುಬ್ಬಳ್ಳಿ, ಆಗಸ್ಟ್ 19: ಬಸ್ ನಿಲ್ದಾಣಗಳಲ್ಲಿ ಗುಟ್ಕಾ, ತಂಬಾಕು (Tobacco) ಉತ್ಪನ್ನಗಳು ಹಾಗೂ ಪಾನ್ ಬೀಡಾ ಜಗಿದು ಉಗುಳುವ ಪ್ರವೃತ್ತಿಗೆ ಕಡಿವಾಣ ಹಾಕಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಬಸ್ ನಿಲ್ದಾಣ ಆವರಣ ಅಥವಾ ಕರ್ತವ್ಯದ ವೇಳೆ ತಂಬಾಕು ಉತ್ಪನ್ನಗಳನ್ನು ಜಗಿದು ಉಗುಳುವ ಚಾಲಕರು ಮತ್ತು ನಿರ್ವಾಹಕರಿಗೂ ದಂಡ ವಿಧಿಸಲು ಸಂಸ್ಥೆ ಮುಂದಾಗಿದೆ. ಬಸ್ ನಿಲ್ದಾಣಗಳು ಹಾಗೂ ಸಂಸ್ಥೆಯ ಬಸ್‌ಗಳಲ್ಲಿ ಉಗುಳುವ ಪ್ರಕರಣಗಳಿಂದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಪ್ರಯಾಣಿಕರು ಮತ್ತು ಸಾರ್ವಜನಿಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಈಗ ಸಂಸ್ಥೆಯ ಸಿಬ್ಬಂದಿಯನ್ನೂ ನಿಯಮದ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ.
ಈ ಕುರಿತು ಕರಡು ಅಧಿಸೂಚನೆ ಬಹುತೇಕ ಸಿದ್ಧವಾಗಿದ್ದು, ಭದ್ರತಾ ವಿಭಾಗದ ಸಿಬ್ಬಂದಿ ಮತ್ತು ಸಂಸ್ಥೆಯ ಅಧಿಕಾರಿಗಳು ನಿಯಮ ಉಲ್ಲಂಘಿಸುವ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸಲಿದ್ದಾರೆ. ಮರು ಉಲ್ಲಂಘನೆ ಮಾಡುವವರ ವಿರುದ್ಧದ ಹೆಚ್ಚುವರಿ ದಂಡ ಮತ್ತು ಶಿಸ್ತು ಕ್ರಮಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಎಂ. ತಿಳಿಸಿದ್ದಾರೆ.
ಇದನ್ನೂ ಓದಿ: KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ?
ಎನ್‌ಡಬ್ಲ್ಯೂಕೆಆರ್‌ಟಿಸಿಯ ವ್ಯಾಪ್ತಿಯಲ್ಲಿರುವ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೆ ಈ ನಿಯಮ ಅನ್ವಯವಾಗಲಿದೆ. ಪ್ರಯಾಣಿಕರಿಗೆ ಅನ್ವಯಿಸುವ ಸ್ವಚ್ಛತಾ ನಿಯಮಗಳನ್ನು ಸಿಬ್ಬಂದಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಉದ್ದೇಶದಿಂದ ಈ ಕ್ರಮ ಜಾರಿಯಾಗುತ್ತಿದೆ. ಸಂಸ್ಥೆಯು ದಂಡದ ಮೊತ್ತವನ್ನೂ ಪರಿಷ್ಕರಿಸಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಚಾಲಕ ಅಥವಾ ನಿರ್ವಾಹಕನಿಗೆ ರೂ.200 ದಂಡ ವಿಧಿಸಲಾಗುತ್ತದೆ. ಮರು ಉಲ್ಲಂಘನೆ ಮಾಡಿದರೆ ಹೆಚ್ಚಿನ ದಂಡ ಹಾಗೂ ಶಿಸ್ತು ಕ್ರಮಗಳನ್ನು ಜಾರಿಗೆ ತರಲು ಸಂಸ್ಥೆ ಚಿಂತನೆ ನಡೆಸಿದೆ.
ಪ್ರಯಾಣಿಕರು ಮತ್ತು ಸಾರ್ವಜನಿಕರು ಬಸ್ ನಿಲ್ದಾಣ ಅಥವಾ ಬಸ್‌ನಲ್ಲಿ ತಂಬಾಕು ಉತ್ಪನ್ನಗಳನ್ನು ಜಗಿದು ಉಗುಳಿದರೆ ರೂ.100 ದಂಡ ವಿಧಿಸಲಾಗುತ್ತದೆ. ಬಸ್ ನಿಲ್ದಾಣ ನಿಯಂತ್ರಕರು, ಭದ್ರತಾ ಸಿಬ್ಬಂದಿ ಹಾಗೂ ಸಂಸ್ಥೆಯ ಅಧಿಕಾರಿಗಳು ದಂಡ ವಿಧಿಸುವ ಅಧಿಕಾರ ಹೊಂದಿರುತ್ತಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Wed, 19 August 26