ಹುಬ್ಬಳ್ಳಿ-ಪುಣೆ ಮಾರ್ಗದ ವಂದೇ ಭಾರತ್ ರೈಲು ಸಂಚಾರಕ್ಕೆ ಸೆ. 16ರಂದು ಪ್ರಧಾನಿ ಮೋದಿ ಚಾಲನೆ
ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್ಪ್ರೆಸ್ ಹುಬ್ಬಳ್ಳಿ- ಪುಣೆ ಮಾರ್ಗದಲ್ಲಿ ಸಂಚರಿಸಲಿದೆ. ಈ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 16ರಂದು ಚಾಲನೆ ನೀಡಲಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ- ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಸೆಪ್ಟೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಅಂದು ಅಹ್ಮದಾಬಾದ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ಸೆ.16ರಂದು ಹುಬ್ಬಳ್ಳಿ- ಪುಣೆ ನಡುವೆ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸಲಿದ್ದು, ಹುಬ್ಬಳ್ಳಿಯಿಂದ ಸೆ.18ರಿಂದ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ರೈಲು ಕೊಲ್ಹಾಪುರದ ಮೂಲಕ ಸಂಚರಿಸುವುದಿಲ್ಲ. ಇದು ಹುಬ್ಬಳ್ಳಿ- ಪುಣೆ ನೇರ ಮಾರ್ಗದಲ್ಲಿ ಸಂಚರಿಸಲಿದೆ.
ಹುಬ್ಬಳ್ಳಿಯಿಂದ ವಾರದಲ್ಲಿ 3 ದಿನ:
ವಾರದಲ್ಲಿ 3 ಬಾರಿ ಅಂದರೆ ಬುಧವಾರ, ಶುಕ್ರವಾರ, ಭಾನುವಾರ ಹುಬ್ಬಳ್ಳಿಯಿಂದ ಪುಣೆಗೆ ಹಾಗೂ ಗುರುವಾರ, ಶನಿವಾರ, ಸೋಮವಾರದಂದು ಪುಣೆಯಿಂದ ಹುಬ್ಬಳ್ಳಿಗೆ ವಂದೇ ಭಾರತ್ ಎಕ್ಸಪ್ರೆಸ್ ಸಂಚರಿಸಲಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಕೇಂದ್ರದಿಂದ ಮತ್ತೊಂದು ಗಿಫ್ಟ್; ಹುಬ್ಬಳ್ಳಿ- ಪುಣೆ ನಡುವೆ 2ನೇ ವಂದೇ ಭಾರತ್ ರೈಲು
ಕೊಲ್ಲಾಪುರ ಮೂಲಕ ಸಂಚರಿಸಲ್ಲ:
ಇದು ಹುಬ್ಬಳ್ಳಿ-ಪುಣೆ ನಡುವೆ ನೇರವಾಗಿ ಸಂಚರಿಸಲಿದ್ದು ಕೊಲ್ಹಾಪುರ ಮೂಲಕ ಸಂಚರಿಸುವುದಿಲ್ಲ ಎಂದೂ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಈ ರೈಲು ಪ್ರತಿ ದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವೆ. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರದಿಂದ ಉತ್ತರ ಕರ್ನಾಟಕ ಭಾಗದ ವಾಣಿಜ್ಯೋದ್ಯಮಕ್ಕೆ, ಕೈಗಾರಿಕಾ ವಸಾಹತುಗಳಿಗೆ ಅನಕೂಲವಾಗಲಿದೆ. ಅಲ್ಲದೆ, ಮುಂಬೈ ಸಂಪರ್ಕಕ್ಕೆ ಈ ಮಾರ್ಗ ಪ್ರಮುಖವಾಗಿ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ