AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಕೋಟಿ 40 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಪ್ರಲ್ಹಾದ್ ಜೋಶಿ ಚಾಲನೆ

ಮೆಹಬೂಬ್ ನಗರ ಹಾಗೂ ಮಾಳಾಪುರದಲ್ಲಿ 5 ಕೋಟಿ 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂದು ಚಾಲನೆ ನೀಡಿದರು.

5 ಕೋಟಿ 40 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಪ್ರಲ್ಹಾದ್ ಜೋಶಿ ಚಾಲನೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 05, 2022 | 8:48 PM

ಧಾರವಾಡ: ನಗರದ ಮೆಹಬೂಬ್ ಹಾಗೂ ಮಾಳಾಪುರದಲ್ಲಿ 5 ಕೋಟಿ 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಇಂದು ಚಾಲನೆ ನೀಡಿದರು. ಮೂರು ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.‌ ಅಂದಾಜು 2.05 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಹಬೂಬ್ ನಗರ ಗಾದಿ ಕಾರ್ಖಾನೆಯಿಂದ ಯತ್ತಿನಗುಡ್ಡದವರೆಗೆ ರಸ್ತೆ‌ ನಿರ್ಮಾಣ ಹಾಗೂ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮೆಹಬೂಬ್ ನಗರದಿಂದ ಗುಲಗಂಜಿಕೊಪ್ಪ ಸ್ಮಶಾನದವರಿಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೇ 2 ಕೋಟಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಳಾಪುರ್ ಲಾಸ್ಟ್ ಬಸ್ ಸ್ಟಾಪ್ ನಿಂದ ಯತ್ತಿನಗುಡ್ಡದವರೆಗೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಸರ್ಕಾರಿ ನೌಕರರ ಸಂಘ, ನಗರದ ನೌಕರರ ಭವನದಲ್ಲಿ 2022ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ್ದು, ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನ ಪ್ರಲ್ಹಾದ್ ಜೋಶಿ ಸನ್ಮಾನಿಸಿದರು. ಎಸ್ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಇದೇ ವೇಳೆ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಎಸ್‌. ಜಿ ಸುಬ್ಬಾಪುರಮಠ ಅವರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕೂಡ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಅಮೃತ್ ದೇಸಾಯಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ‌.ಎಸ್. ಷಡಕ್ಷರಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾದ ಪ್ರೊ. ಎಸ್​ಎಂ ಶಿವಪ್ರಸಾದ್ ಉಪಸ್ಥಿತರಿದ್ದರು.

ಕಾಂಗ್ರೆಸ್​ ನಾಯಕರಿಗೆ ಇಟಲಿಯ ಧ್ಯಾನ ಒಂದೇ ಗೊತ್ತು!

ಶಾಲೆಗಳಲ್ಲಿ ಭಗವದ್ಗೀತೆ ಧ್ಯಾನವನ್ನ ವಿರೋಧಿಸಿರುವ ಕಾಂಗ್ರೆಸ್​ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಖಡಕ್ ತಿರುಗೇಟು ನೀಡಿದ್ದಾರೆ‌. ಧ್ಯಾನ ವಿರೋಧಿಸುವ ಕಾಂಗ್ರೆಸ್, ತಾನು ಹಿಂದುತ್ವ ಹಾಗೂ ಹಿಂದು ವಿರೋಧಿ ಅಂತ ಹೇಳಲಿ ನೋಡೊಣ ಎಂದು ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಧ್ಯಾನದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಭಾರತೀಯ ಹಾಗೂ ಹಿಂದೂ ಪರಂಪರೆಯನ್ನ ಮೊದಲು ವಿರೋಧಿಸುವವರೇ ಕಾಂಗ್ರೆಸ್ ನಾಯಕರು.

ಯೋಗ ಕಡ್ಡಾಯಗೊಳಿಸಿದಾಗಲೂ ಕಾಂಗ್ರೆಸ್ ವಿರೋಧ ಮಾಡಿತ್ತು. ಇಡೀ ಜಗತ್ತು ಯೋಗವನ್ನ ಒಪ್ಪಿಕೊಂಡ ಮೇಲೆ ಈಗ ಕಾಂಗ್ರೆಸ್ ಒಪ್ಪಿಕೊಂಡಿದೆ. ಧ್ಯಾನದ ವಿಚಾರದಲ್ಲಿ ಇಂಥದ್ದೇ ದೇವರ ಧ್ಯಾನ ಮಾಡಿ ಅಂತಾ ಏನು ಹೇಳಿಲ್ಲ. ಈ ನಾಯಕರ ಧ್ಯಾನ ಮಾಡಿ ಅಂತಾ ಹೇಳಿದ್ದಾರಾ.? ಹೀಗಿರುವಾಗ ಧ್ಯಾನಕ್ಕೆ ಕಾಂಗ್ರೆಸ್ ವಿರೋಧ ಏಕೆ ಎಂದು ಜೋಶಿಯವರು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:48 pm, Sat, 5 November 22