ಶಾಲೆಗಳಲ್ಲಿ ಭಗವದ್ಗೀತೆ-ಧ್ಯಾನಕ್ಕೆ ವಿರೋಧಿಸುವುದಾದರೆ ಹಿಂದೂ ವಿರೋಧಿ ಅಂತಾ ಕಾಂಗ್ರೆಸ್ ಹೇಳಲಿ: ಪ್ರಲ್ಹಾದ್ ಜೋಶಿ ಸವಾಲು
ಕಾಂಗ್ರೆಸ್ಸಿಗರಿಗೆ ಸೋನಿಯಾ, ರಾಹುಲ್ ಗಾಂಧಿಯದ್ದೇ ಧ್ಯಾನ. ಕಾಂಗ್ರೆಸ್ ನಾಯಕರಿಗೆ ಇಟಲಿಯ ಧ್ಯಾನ ಒಂದೇ ಗೊತ್ತು. ಕಾಂಗ್ರೆಸ್ನವರು ಭಗವದ್ಗೀತೆಯನ್ನೂ ವಿರೋಧ ಮಾಡುತ್ತಾರೆ.
ಧಾರವಾಡ: ಶಾಲೆಗಳಲ್ಲಿ ಭಗವದ್ಗೀತೆ ಧ್ಯಾನವನ್ನ ವಿರೋಧಿಸಿರುವ ಕಾಂಗ್ರೆಸ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಖಡಕ್ ತಿರುಗೇಟು ನೀಡಿದ್ದಾರೆ. ಧ್ಯಾನ ವಿರೋಧಿಸುವ ಕಾಂಗ್ರೆಸ್, ತಾನು ಹಿಂದುತ್ವ ಹಾಗೂ ಹಿಂದು ವಿರೋಧಿ ಅಂತ ಹೇಳಲಿ ನೋಡೊಣ ಎಂದು ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಧ್ಯಾನದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಭಾರತೀಯ ಹಾಗೂ ಹಿಂದೂ ಪರಂಪರೆಯನ್ನ ಮೊದಲು ವಿರೋಧಿಸುವವರೇ ಕಾಂಗ್ರೆಸ್ ನಾಯಕರು. ಯೋಗ ಕಡ್ಡಾಯಗೊಳಿಸಿದಾಗಲೂ ಕಾಂಗ್ರೆಸ್ ವಿರೋಧ ಮಾಡಿತ್ತು. ಇಡೀ ಜಗತ್ತು ಯೋಗವನ್ನ ಒಪ್ಪಿಕೊಂಡ ಮೇಲೆ ಈಗ ಕಾಂಗ್ರೆಸ್ ಒಪ್ಪಿಕೊಂಡಿದೆ. ಧ್ಯಾನದ ವಿಚಾರದಲ್ಲಿ ಇಂಥದ್ದೇ ದೇವರ ಧ್ಯಾನ ಮಾಡಿ ಅಂತಾ ಏನು ಹೇಳಿಲ್ಲ. ಈ ನಾಯಕರ ಧ್ಯಾನ ಮಾಡಿ ಅಂತಾ ಹೇಳಿದ್ದಾರಾ.? ಹೀಗಿರುವಾಗ ಧ್ಯಾನಕ್ಕೆ ಕಾಂಗ್ರೆಸ್ ವಿರೋಧ ಏಕೆ ಎಂದು ಜೋಶಿಯವರು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರಿಗೆ ಇಟಲಿಯ ಧ್ಯಾನ ಒಂದೇ ಗೊತ್ತು. ಸೋನಿಯಾ, ರಾಹುಲ್ ಗಾಂಧಿಯ ಧ್ಯಾನ ಬಿಟ್ಟರೆ ಬೇರೆ ಧ್ಯಾನದ ಬಗ್ಗೆ ಕಾಂಗ್ರೆಸಿಗರಿಗೆ ಗೊತ್ತಿಲ್ಲ ಅನಿಸುತ್ತೆ ಅಂತ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಧ್ಯಾನ ಒಂದು ಮೆಡಿಟೇಷನ್. ಧ್ಯಾನದಲ್ಲಿ ಹಿಂದುತ್ವದ ಪ್ರಶ್ನೆಯೇ ಇಲ್ಲ, ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು ಜಾರಿ ಮಾಡಿರಬಹುದು. ಧ್ಯಾನದ ವಿಚಾರದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಕಾಂಗ್ರೆಸ್ಸಿಗರು ಆರಾಧನೆ ಮಾಡುವ ದೇವರೇ ಅವರಿಗೆ ಸದ್ಭುದ್ದಿ ಕೊಡಲಿ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಕರ್ನಾಟಕದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಡ್ಡಾಯವಾಗಿ ಧ್ಯಾನದ ಅಭ್ಯಾಸ ಮಾಡಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದರು. ಮಕ್ಕಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ ಮಾಡಿಸುವುದು ಅಗತ್ಯವಾಗಿರುತ್ತದೆ ಎಂದು ಸಚಿವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಧ್ಯಾನದ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ರಾಜ್ಯದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಈಗಾಗಲೇ ಧ್ಯಾನವನ್ನು ಮಾಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೋರಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ‘ವಿದ್ಯಾರ್ಥಿಗಳಿಗೆ ಪ್ರತಿದಿನ ನಿಯಮಿತವಾಗಿ ಧ್ಯಾನ ಮಾಡಿಸುವುದು ಸೂಕ್ತವಾಗಿರುತ್ತದೆ. ರಾಜ್ಯದಲ್ಲಿನ ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ’ ಎಂದು ಸುತ್ತೋಲೆಯಲ್ಲಿ ತಿಳಿಸಿರುವುದನ್ನು ಸ್ಮರಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:52 pm, Sat, 5 November 22