ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರು ಬಯಸಿದರೆ ಸರ್ಕಾರ ಪುನರ್‌ವಸತಿ ಕಲ್ಪಿಸಲಿದೆ: ಪ್ರಲ್ಹಾದ್ ಜೋಶಿ

ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದು ಹೇಳಿದ್ದಾರೆ. ಹಿಂದಿ ಬರಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಸಿನಿಮಾದಲ್ಲಿ ಸಬ್ ಟೈಟಲ್ಸ್ ಇದೆ ಹೀಗಾಗಿ ಹೋಗಿ ನೋಡಿ. ಸಿನಿಮಾ ನೋಡಿ ತಪ್ಪಾಗಿದೆ ಎಂದು ನೀವು ಒಪ್ಪಿಕೊಳ್ಳಿ. ಆಗ ಜನರು ನಿಮ್ಮನ್ನು ಕ್ಷಮಿಸುತ್ತಾರೆ ಎಂದು ಜೋಶಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರು ಬಯಸಿದರೆ ಸರ್ಕಾರ ಪುನರ್‌ವಸತಿ ಕಲ್ಪಿಸಲಿದೆ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Follow us
TV9 Web
| Updated By: ganapathi bhat

Updated on:Mar 20, 2022 | 2:56 PM

ಧಾರವಾಡ: ನಮ್ಮದರ ಮೇಲೆ ನಮಗೆ ವಿಶ್ವಾಸ ಕಡಿಮೆ. ಭಗವದ್ಗೀತೆ ಇಂಗ್ಲೀಷ್‌ನಲ್ಲಿ ಬರೋವರೆಗೆ ಬಹಳ ಜನ ನಂಬಿರಲಿಲ್ಲ. ಈಗ ಭಗವದ್ಗೀತೆ ಬಗ್ಗೆ ಜಾಗೃತಿ ಆಗುತ್ತಿದೆ ಒಳ್ಳೆಯದು. ಪಠ್ಯದಲ್ಲಿ ಭಗವದ್ಗೀತೆ ತರುವ ವಿಚಾರ ನಡೆದಿದೆ. ಜಾತ್ಯತೀತರನ್ನು ಬಿಟ್ಟು ಉಳಿದೆಲ್ಲರೂ ಒಪ್ಪುತ್ತಿದ್ದಾರೆ. ಜಾತ್ಯಾತೀತತೆ ಅನ್ನೋದು ಒಂದು ವಿಚಿತ್ರ ಆಗಿದೆ. ಅದೊಂದು ಧರ್ಮಾತೀತ ಆಗಿದೆ. ಧರ್ಮದ ಆಧಾರದ ಮೇಲೆ ಜೀವನ ನಡೆಯಬೇಕು. ರಾಜಕೀಯದಲ್ಲಿಯೂ ಧರ್ಮ ಬೇಕು. ಧರ್ಮ ರಹಿತ ಜೀವನ, ರಾಜಕೀಯ ಶೂನ್ಯವಾಗುತ್ತದೆ. ಧರ್ಮ ಇಲ್ಲದೇ ಹೋದಲ್ಲಿ ಎರಡೂ ಶೂನ್ಯ ಆಗಿ ಬಿಡುತ್ತವೆ ಎಂದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ವಿರೋಧ ವಿಚಾರಕ್ಕೆ ಸಂಬಂಧಿಸಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ ನೀಡಿದ್ದಾರೆ. ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವ ಪ್ರಯುಕ್ತ ನಡೆದಿರುವ ಭೀಮ ಪಲಾಸ್ ಸಂಗೀತೋತ್ಸವ ಉದ್ಘಾಟನೆಯಲ್ಲಿ ಹೀಗೆ ಹೇಳಿದ್ದಾರೆ.

ಪಂಡಿತರ ಮೇಲೆ ದೌರ್ಜನ್ಯದ ವೇಳೆ ವಿ.ಪಿ. ಸಿಂಗ್ ಸರ್ಕಾರವಿತ್ತು. ಬಿಜೆಪಿ ಆ ಸರ್ಕಾರದ ಭಾಗವಾಗಿರಲಿಲ್ಲ. ವಿ.ಪಿ. ಸಿಂಗ್ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದೆವು. ವಿ.ಪಿ. ಸಿಂಗ್ ಸರ್ಕಾರ ಹಿಂದೂ ವಿರೋಧಿಯೆಂದು ಪರಿವರ್ತನೆ ಆಗಿದೆ. ವಿ.ಪಿ. ಸಿಂಗ್​ಗೆ ನೀಡಿದ್ದ ಬೆಂಬಲವನ್ನ ವಾಪಸ್ ಪಡೆದಿದ್ದೆವು. ನಾವು ಆರ್ಟಿಕಲ್ 370 ತೆಗೆದಿದ್ದೇವೆ, ಈಗ ಕಾಶ್ಮೀರ ಶಾಂತ ಆಗಿದೆ. ನಾವು ಉಗ್ರರಿಗೆ ಬಿರಿಯಾನಿ ಕೊಡುತ್ತಿಲ್ಲ. ಉಗ್ರರು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಯತ್ನಿಸಿದರೆ ಬಿಡಲ್ಲ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರ ಸರ್ವೆ ಕಾರ್ಯ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸರ್ವೆ ಕಾರ್ಯ ಆಗಿದೆ ಎಂಬ ಮಾಹಿತಿ ಇದೆ. ಅವರು ಬಯಸಿದರೆ ಸರ್ಕಾರ ಪುನರ್‌ವಸತಿ ಕಲ್ಪಿಸಲಿದೆ. ಅವರು ಬಯಸಿದ ಸ್ಥಳದಲ್ಲಿ ಪುನರ್‌ವಸತಿ ಕಲ್ಪಿಸುತ್ತೇವೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಾ ಬಂದಿದೆ. ಕಾಶ್ಮೀರ್ ಫೈಲ್ಸ್ ವಿರೋಧ ಮಾಡೋದಕ್ಕೆ ಇದೇ ಕಾರಣ. ಕಾಂಗ್ರೆಸ್ ವಿರೋಧದಿಂದಲೇ ಸಿನಿಮಾ ಜನಪ್ರಿಯವಾಗಿದೆೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದು ಹೇಳಿದ್ದಾರೆ. ಹಿಂದಿ ಬರಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಸಿನಿಮಾದಲ್ಲಿ ಸಬ್ ಟೈಟಲ್ಸ್ ಇದೆ ಹೀಗಾಗಿ ಹೋಗಿ ನೋಡಿ. ಸಿನಿಮಾ ನೋಡಿ ತಪ್ಪಾಗಿದೆ ಎಂದು ನೀವು ಒಪ್ಪಿಕೊಳ್ಳಿ. ಆಗ ಜನರು ನಿಮ್ಮನ್ನು ಕ್ಷಮಿಸುತ್ತಾರೆ ಎಂದು ಜೋಶಿ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಹಾನಿ ಮಾಡಿದವರನ್ನು ಮತ್ತೆ ಸೇರಿಸಿಕೊಳ್ಳಲ್ಲ: ಸಿದ್ದರಾಮಯ್ಯ

ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳಡಿಸುವ ವಿಚಾರಕ್ಕೆ ಸಂಬಂಧಿಸಿ ಇತ್ತ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಮುಖ್ಯ. ನೈತಿಕ ಶಿಕ್ಷಣದ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆದರೆ ಸಂವಿಧಾನ ವಿರೋಧಿಯಾಗಿ ಏನನ್ನೂ ಮಾಡಬಾರದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಹಾನಿ ಮಾಡಿದವರನ್ನು ಮತ್ತೆ ಸೇರಿಸಿಕೊಳ್ಳಲ್ಲ. ಕಾಂಗ್ರೆಸ್ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. CWC ಸಭೆಯಲ್ಲಿ ಸೋನಿಯಾ ನಾಯಕರೆಂದು ಒಪ್ಪಿದ್ದಾರೆ. ಪಕ್ಷ ಬಲವರ್ಧನೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆಂಬ ಭ್ರಮೆಯಲ್ಲಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಭಾವನಾತ್ಮಕ ವಿಚಾರ ಇಟ್ಟುಕೊಂಡು ಗೆಲ್ಲಲು ಆಗಲ್ಲ. ಉತ್ತರ ಪ್ರದೇಶವೇ ಬೇರೆ ಕರ್ನಾಟಕವೇ ಬೇರೆ. ಇಲ್ಲಿ ಅಭಿವೃದ್ಧಿ ನೋಡಿ ಜನರು ಮತ ಹಾಕುತ್ತಾರೆ. ಬಿಜೆಪಿಯಲ್ಲಿ ಹತ್ತಾರು ಬಣಗಳಿವೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಗವದ್ಗೀತೆ ಹೊಟ್ಟೆ ತುಂಬಿಸಲ್ಲ, ತಲೆ ತುಂಬಿಸುತ್ತದೆ: ಪ್ರತಾಪ್ ಸಿಂಹ

ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಅವರೇ ಮಾಡಿದ್ದನ್ನು ಅವರೇ ನೋಡಲು ಹೇಗೆ ಸಾಧ್ಯ? ಆದ್ರೆ ಜನರು ನೋಡುತ್ತಿದ್ದಾರೆ, ಅವರಿಗೆ ಸತ್ಯದ ಅರಿವಾಗಿದೆ. ಅವರೇ ಮಾಡಿದ ಕರ್ಮ ಅವರೇ ನೋಡಲು ಹೇಗೆ ಸಾಧ್ಯ? ಎಂದು ಕಾಂಗ್ರೆಸ್‌ನವ್ರು ದಿ ಕಾಶ್ಮೀರ್ ಫೈಲ್ಸ್‌ ಚಿತ್ರ ನೋಡದ ವಿಚಾರದ ಬಗ್ಗೆ ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಜೈ ಭೀಮ್‌ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡದ ವಿಚಾರದ ಬಗ್ಗೆ, ಜೈ ಭೀಮ್ ಸಿನಿಮಾ ಬಿಡುಗಡೆಯಾಗಿದ್ದು ಓಟಿಟಿಯಲ್ಲಿ. ಓಟಿಟಿಯಲ್ಲಿ ತೆರಿಗೆ ವಿನಾಯಿತಿ ಕೊಡಲು ಹೇಗೆ ಸಾಧ್ಯ? ಕಾಂಗ್ರೆಸ್‌ನವ್ರು ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರದ ಬಗ್ಗೆ ಸಿದ್ದರಾಮಯ್ಯ ಅಭ್ಯಂತರ ಇಲ್ಲವೆಂದಿದ್ದಾರೆ. ಅಂತಃಕರಣದಿಂದ ನೈಜವಾಗಿ ಹೇಳಿದ್ದರೆ ಸ್ವಾಗತಿಸ್ತೇನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಪಠ್ಯಕ್ಕೆ ಸೇರಿಸಲಿ. ಈ ಬಗ್ಗೆ ಸಿದ್ದರಾಮಯ್ಯ ಒತ್ತಾಯಿಸಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಭಗವದ್ಗೀತೆ ಹೊಟ್ಟೆ ತುಂಬಿಸಲ್ಲವೆಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸಲ್ಲ, ತಲೆ ತುಂಬಿಸುತ್ತದೆ. ಭಗವದ್ಗೀತೆ ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತೆ. ಕುಟುಂಬ ರಾಜಕಾರಣ ಮಾಡಬಾರದು. ಎಲ್ಲ ಅಧಿಕಾರ ನನಗೇ ಬೇಕೆಂಬ ಮನಸ್ಥಿತಿ ಬದಲಿಸುತ್ತೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯವಾಗಿದೆ; ಯಾದಗಿರಿಯಲ್ಲಿ ಸಿಎಂ ಬೊಮ್ಮಾಯಿ ಮಾತು

ಇದನ್ನೂ ಓದಿ: ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸ್ತೇನೆ; ನೈತಿಕ ವಿಚಾರ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲ: ಸಿದ್ದರಾಮಯ್ಯ

Published On - 2:49 pm, Sun, 20 March 22