ಬಿಹಾರದಲ್ಲಿ ಸೋಲು, ರಾಜ್ಯದಲ್ಲಿ ಪಟ್ಟಕ್ಕಾಗಿ ಫೈಟ್: ‘ಕೈ’ ನಾಯಕರ ಅಲಭ್ಯತೆಯಿಂದ ಬಡವರಿಗೆ ಸಂಕಷ್ಟ!
ರಾಜ್ಯ ಸೇರಿ ಕಾಂಗ್ರೆಸ್ ಪಾಳಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಬಡವರ ಮೇಲೆ ಪ್ರಭಾವ ಬೀರುತ್ತಿವೆ. ಅಚ್ಚರಿ ಎನಿಸಿದರೂ ಇದು ಸದ್ಯವಾಗಿದ್ದು, ನಾಯಕರ ಸಮಯದ ಅಲಭ್ಯತೆಯ ಕಾರಣ ವಸತಿ ರಹಿತರು ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದು ಹೇಗೆ? ಏನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿ, ನವೆಂಬರ್ 24: ಇತ್ತೀಚೆಗೆ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳಗೊಂಡ ಮಹಾ ಘಟಬಂಧನ್ಗೆ ಉಂಟಾದ ಸೋಲು, ಮತ್ತೊಂದೆಡೆ ಇತ್ತ ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ನಾಯಕರ ನಡೆಯುತ್ತಿರೋ ಫೈಟ್ನಿಂದ ರಾಜ್ಯದ ಬಡವರಿಗೆ ಸಮಸ್ಯೆಯಾಗಿದೆ. ಕೇಳೋಕೆ ನಿಮಗೆ ಅಚ್ಚರಿ ಅನಿಸಿದರೂ ಇದು ಸತ್ಯ. ಕಾಂಗ್ರೆಸ್ನಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಂದ ಬಡವರಿಗಾಗಿ ನಿರ್ಮಿಸಲಾಗಿರುವ ಮನೆಗಳ ಹಂಚಿಕೆಗೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ನಿಗದಿಯಾಗಿದ್ದ ಕಾರ್ಯಕ್ರಮವೂ ಮುಂದೂಡಿಕೆಯಾಗಿರೋದು ಫಲಾನುಭವಿಗಳ ನಿರಾಸೆಗೆ ಕಾರಣವಾಗಿದೆ.
ವಸತಿ ಇಲಾಖೆ, ಸ್ಲಂ ಬೋರ್ಡ್ನಿಂದ ಬಡವರಿಗಾಗಿ ಬರೋಬ್ಬರಿ 42 ಸಾವಿರ ಮನೆಗಳು ಹಂಚಿಕೆಗೆ ಸಿದ್ಧವಾಗಿದ್ದರೂ ಅವುಗಳ ಹಂಚಿಕೆ ಇನ್ನೂ ನಡೆದಿಲ್ಲ. ಅಂತಿಮವಾಗಿ ನವೆಂಬರ್ 29ಕ್ಕೆ ಹುಬ್ಬಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ಇವುಗಳ ಹಂಚಿಕೆಗೆ ಸಿದ್ಧತೆ ನಡೆದಿತ್ತು. ಮಂಟೂರು ರಸ್ತೆಯಲ್ಲಿ ರಾಜ್ಯ ಮಟ್ಟದ ಬೃಹತ್ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳೂ ಭರದಿಂದ ಸಾಗಿದ್ದವು. ಆದರೆ ಈ ಕಾರ್ಯಕ್ರಮವೀಗ ದಿಢೀರನೆ ಮುಂದೂಡಿಕೆಯಾಗಿದೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮಯ ನೀಡದೇ ಇರೋದು.
ಇದನ್ನೂ ಓದಿ: ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ, ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ವೈರಲ್ ಆಡಿಯೋ
ರಾಜ್ಯದಲ್ಲಿ ನಿರ್ಮಾಣವಾಗಿರೋ 42 ಸಾವಿರ ಮನೆಗಳ ಪೈಕಿ, ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಸಾವಿರದಾ ಐನೂರಕ್ಕೂ ಹೆಚ್ಚು ಮನೆಗಳು ತಲೆ ಎತ್ತಿವೆ. ಸ್ಲಂ ಬೋರ್ಡ್ ಅಧ್ಯಕ್ಷ, ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಮುತುವರ್ಜಿಯಲ್ಲಿ ಇವುಗಳನ್ನ ನಿರ್ಮಿಸಲಾಗಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿಯೇ ಈ ಮನೆಗಳು ಮಂಜೂರಾಗಿದ್ದವು. ಆದ್ರೆ, ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಮನೆಗಳ ನಿರ್ಮಾಣ ಕಾರ್ಯ ಮುಗಿದಿರಲಿಲ್ಲ.ಇದೀಗ ಮನೆಗಳ ನಿರ್ಮಾಣವಾಗಿ ವರ್ಷವಾಗುತ್ತ ಬಂದರೂ ಅವುಗಳ ಹಂಚಿಕೆಗೆ ಸಮಯ ಕೂಡಿ ಬರ್ತಿಲ್ಲ.
ಕಳೆದ ಏಪ್ರಿಲ್ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಲು ವಸತಿ ಸಚಿವ ಜಮೀರ್ ಅಹ್ಮದ್ ಮುಂದಾಗಿದ್ದರು. ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಕರೆಸಬೇಕೆಂಬುದು ಅವರ ಆಸೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಏಪ್ರಿಲ್ 27ರಂದು ಸಿಎಂ ಸಿದ್ದರಾಮಯ್ಯ ಸಮಯ ಕೂಡ ನೀಡಿದ್ದರು. ಆದ್ರೆ ಎಐಸಿಸಿ ಅಧ್ಯಕ್ಷರ ಸಮಯ ಸಿಗದ ಕಾರಣ ಅದು ಮುಂದಕ್ಕೆ ಹೋಗಿತ್ತು. ಹೀಗಾಗಿ ಮೇ ತಿಂಗಳ ಮೊದಲ ವಾರದಲ್ಲಿಯಾದ್ರು ಕಾರ್ಯಕ್ರಮ ಮಾಡಬೇಕೆಂದು ಸಚಿವರು ಸಿದ್ಧತೆ ನಡೆಸಿದ್ದರು. ಆಗಲೂ ನಾಯಕರ ಸಮಯ ಹೊಂದಾಣಿಕೆ ಆಗಿರಲಿಲ್ಲ. ಬಳಿಕ ಮಳೆಗಾಲ ಆರಂಭವಾದ ಕಾರಣ ಮನೆಗಳ ಹಂಚಿಕೆ ಬಾಕಿ ಉಳಿದಿತ್ತು. ನವೆಂಬರ್ 29ಕ್ಕೆ ಫಿಕ್ಸ್ ಆಗಿದ್ದ ಕಾರ್ಯಕ್ರಮವೂ ನಾಯಕರ ಅಲಭ್ಯತೆ ಕಾರಣಕ್ಕೆ ಮುಂದೆ ಹೋಗಿದೆ ಎನ್ನಲಾಗುತ್ತಿದೆ. ಆದರೆ ಚಳಿಗಾಲದ ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗುತ್ತಿದೆ ಎಂದು ಶಾಸಕ ಹಾಗೂ ಸ್ಲಂಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



