ಹುಬ್ಬಳ್ಳಿ, ಮೇ 22: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಮಂಗಳವಾರ (ಮೇ 22) ರಂದು ಬೆಂಗಳೂರು ಸೇರಿದಂತೆ 11 ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಎನ್ಐಎ ಅಧಿಕಾರಿಗಳು ಹುಬ್ಬಳ್ಳಿಯ ಸಹೋದರಿಬ್ಬರನ್ನು ವಶಕ್ಕೆ ಪಡೆದುಕೊಂಡು, ತಡರಾತ್ರಿವರೆಗೆ ವಿಚಾರಣೆ ನಡೆಸಿದರು.
ಹುಬ್ಬಳ್ಳಿಯ ಗೌಸಿಯಾ ಟೌನ್ ನಿವಾಸಿ, ಸಾಫ್ಟ್‌ವೇರ್ ಇಂಜಿನಿಯರ್ ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ಸದ್ಯ ಎನ್ಐಎ ವಶದಲ್ಲಿದ್ದು, ಇವರಿಬ್ಬರೂ ವಿದೇಶಿ ಹ್ಯಾಂಡ್ಲರ್ಗಳ ಸೂಚನೆಯಂತೆ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ಗೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಎನ್ಐಎ ಅಧಿಕಾರಿಗಳಿಗೆ ದೊರೆತಿದೆ. ಶೋಯೆಬ್ ಪತ್ನಿ ನಿವಾಸ ಬೆಳಗಾವಿಯಲ್ಲೂ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.
ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ಹಣ ಸಹಾಯ ಮಾಡಿದ್ದ ಬಗ್ಗೆ ಕೆಲ ಡಿಜಿಟಲ್ ಸಾಕ್ಷ್ಯಗಳು ಎನ್ಐಎಗೆ ದೊರೆತಿವೆ. ಹಣ ಸಹಾಯದ ಬಗ್ಗೆ ಸಹೋದರರು ವಿದೇಶಿ ಹ್ಯಾಂಡ್ಲರ್ನ ಜೊತೆ ಕೋಡ್ ವರ್ಡ್ನಲ್ಲಿ ಚಾಟಿಂಗ್ ಮಾಡಿದ್ದಾರೆ. ಇನ್ನು ರಾಮೇಶ್ವರಂ ಕೆಫೆ ಸ್ಫೋಟ ಬಳಿಕ ಆರೋಪಿ ಮುಸಾವೀರ್ ಹುಬ್ಬಳ್ಳಿಗೆ ಭೇಟಿ ನೀಡಿ, ಇಲ್ಲಿ ಹಣ ಪಡೆದು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಅನುಮಾನ ಎನ್ಐಎ ಅಧಿಕಾರಿಗಳಲ್ಲಿ ಮೂಡಿದೆ. ಹೀಗಾಗಿ ಸಹೋದರರಿಬ್ಬರನ್ನು ಹುಬ್ಬಳ್ಳಿ ಇಂದಿರಾನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಎನ್ಐಎ ಅಧಿಕಾರಗಳು ತೀವ್ರ ವಿಚಾರಣೆ ನಡೆಸಿದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್ಐಎ
ಮಾರ್ಚ್ 1 ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಕೃತ್ಯ ಎಸಗಿದ ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಅನ್ನು ಎನ್ಐಎ ಅಧಿಕಾರಿಗಳು, ಘಟನೆ ನಡೆದು 43 ದಿನಗಳ ಬಳಿಕ, ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ್ದು ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದವು.
ಎನ್ಐಎ ವಿಚಾರಣೆ ವೇಳೆ ಬಾಂಬರ್ ಮುಸಾವೀರ್ ಹಾಗೂ ಮತೀನ್ ತಾಹ ಆಘಾತಕಾರಿ ಸತ್ಯ ಹೊರಹಾಕಿದ್ದರು. ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನವೇ, ವೈಟ್ಫೀಲ್ಡ್ ಭಾಗದ SEZ (ವಿಶೇಷ ಆರ್ಥಿಕ ವಲಯ) ಗಳನ್ನು ಉಗ್ರರು ಟಾರ್ಗೆಟ್ ಮಾಡಿದ್ದಾಗಿ ತಿಳಿಸಿದ್ದರು.
ಐಟಿಬಿಪಿ ಕಂಪನಿಗಳು ಹೆಚ್ಚಿರುವ ಈ ಬಾಗದಲ್ಲಿ ಬ್ಲಾಸ್ಟ್ ಮಾಡಿದರೆ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬಹುದು. ಐಸಿಸ್ ಸಂಘಟನೆ ನಮ್ಮನ್ನ ಸಲೀಸಾಗಿ ಸೇರಿಸಿಕೊಳ್ಳುತ್ತೆ ಅನ್ನೋ ನಂಬಿಕೆ ಇತ್ತಂತೆ. ಆದರೆ ಐಟಿಬಿಟಿ ಏರಿಯಾದಲ್ಲಿ, ಸೆಕ್ಯೂರಿಟಿ ಬಿಗಿಯಾಗಿದ್ದರಿಂದ ಸ್ಫೋಟದ ಪ್ಲ್ಯಾನ್ ವರ್ಕೌಟ್ ಆಗಲಿಲ್ಲ. ಹೀಗಾಗಿ, ಇದು ಸೇಫ್ ಅಲ್ಲ ಅಂತ ಮುಂದೆ ಸಾಗಿದವರ ಕಣ್ಣಿಗೆ ಬಿದ್ದದ್ದೇ ಈ ರಾಮೇಶ್ವರಂ ಕೆಫೆ.
ರಾಮೇಶ್ವರಂ ಕೆಫೆ ಕಂಡ ಉಗ್ರರಿಗೆ ಕೋಪ ಹೆಚ್ಚಾಗಿತ್ತು. ಕಾರಣ, ಕೆಫೆ ಮುಂದಿದ್ದ ಹೂವಿನ ಅಲಂಕಾರ, ಕೇಸರಿ ಮಯವಾಗಿದ್ದ ಕಲರ್ ಪೇಪರ್ಸ್. ದೇಶಾದ್ಯಂತ ರಾಮಮಂದಿರ ಉದ್ಘಾಟನೆ ಸಂಭ್ರಮ ಇದಿದ್ರಿಂದ ಎಲ್ಲೆಲ್ಲೂ ರಾಮಜಪ ಜೋರಾಗಿತ್ತು. ಹೀಗಾಗಿ, ರಾಮೇಶ್ವರಂ ಕೆಫೆ ಸ್ಫೋಟಿಸೋದೇ ಸೂಕ್ತ ಅಂತ ನಿರ್ಧರಿಸಿದ್ರಂತೆ. ಅದ್ರಂತೆ ಮಾರ್ಚ್ 1 ರಂದು ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದಾಗಿ ಎನ್ಐಎ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 am, Wed, 22 May 24