ಪಡಿತರ ಚೀಟಿ ಇ-ಕೆವೈಸಿಗೆ ಕೈಕೊಟ್ಟ ಸರ್ವರ್: ಜನಸಾಮಾನ್ಯರ ಪರದಾಟ

Dharwad News: ಬಡವರ ಹೊಟ್ಟೆ ತುಂಬಿಸಬೇಕಾದ ಸರ್ಕಾರದ ಪಡಿತರ ವ್ಯವಸ್ಥೆ ಇದೀಗ ಬಡ ಜನರಿಗೆ ಹಿಂಸೆಯಾಗಿ ಪರಿಣಮಿಸಿದೆ. ಪಡಿತರ ವಿತರಣೆಯಲ್ಲಿ ಅನರ್ಹರನ್ನು ಪತ್ತೆ ಹಚ್ಚುವ ನೆಪದಲ್ಲಿ ಜಾರಿಗೆ ತಂದಿರುವ ಕಠಿಣ ತಂತ್ರಾಂಶ ಹಾಗೂ ನಿರಂತರ ಸರ್ವರ್ ಸಮಸ್ಯೆಯಿಂದಾಗಿ ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಬಡ ಫಲಾನುಭವಿಗಳು ತುತ್ತು ಕೂಳಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ದಿನಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ.

ಪಡಿತರ ಚೀಟಿ ಇ-ಕೆವೈಸಿಗೆ ಕೈಕೊಟ್ಟ ಸರ್ವರ್: ಜನಸಾಮಾನ್ಯರ ಪರದಾಟ
ಸರ್ವರ್ ಸಮಸ್ಯೆ
Image Credit source: tv9 kannada
Edited By:

Updated on: Aug 19, 2026 | 5:22 PM

ಧಾರವಾಡ, ಆಗಸ್ಟ್​​ 19: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತವೆ. ಆದರೆ ಇಂಥ ಯೋಜನೆಗಳ ಲಾಭ ಪಡೆಯುವ ಫಲಾನುಭವಿಗಳು ಎಷ್ಟರ ಮಟ್ಟಿಗೆ ಆ ಯೋಜನೆಗಳಿಗೆ ಅರ್ಹರು ಎನ್ನುವ ಪ್ರಶ್ನೆಗಳು ಆಗಾಗ ಏಳುತ್ತಲೇ ಇರುತ್ತವೆ. ಹೀಗಾಗಿ ಎಲ್ಲಾ ಸರಕಾರಗಳು ಫಲಾನುಭವಿಗಳ ಅರ್ಹತೆ ಬಗ್ಗೆ ಆಗಾಗ ಪರಿಶೀಲನೆ ಮಾಡುತ್ತಲೇ ಇರುತ್ತವೆ. ಇದರೊಂದಿಗೆ ಹೊಸ ಹೊಸ ತಂತ್ರಾಂಶಗಳ ಮೊರೆ ಹೋಗುತ್ತಲೇ ಇರುತ್ತದೆ. ಆದರೆ ಹೀಗೆ ಹೊಸ ಹೊಸ ತಂತ್ರಾಂಶಗಳ ಮೊರೆ ಹೋದಾಗ ಆಗುತ್ತಿರುವ ಸಮಸ್ಯೆಗಳಂತೂ ನೂರಾರು. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಇತ್ತೀಚಿನ ಒಂದು ಉದಾಹರಣೆ ಎಂದರೆ ಪಡಿತರ ವಿತರಣೆ (Ration Card).

ಕೆವೈಸಿ ಹೆಸರಲ್ಲಿ ಪರದಾಟ

ಬಿಪಿಎಲ್ ಕಾರ್ಡ್​ ಮೂಲಕವೇ ಜನರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯುತ್ತಾರೆ. ಆದರೆ ಹೀಗೆ ಪಡಿತರ ಪಡೆಯುವವರೆಲ್ಲಾ ಬಡವರು ಎನ್ನುವ ಹಾಗಿಲ್ಲ. ಹೀಗೆ ಪಡಿತರ ಪಡೆಯುವವರ ಪೈಕಿ ಅನೇಕರು ಈ ಯೋಜನೆಗೆ ಅನರ್ಹರೂ ಆಗಿರುತ್ತಾರೆ. ಅಂಥವರನ್ನು ಪತ್ತೆ ಹಚ್ಚಲು ಹಾಗೂ ಈ ಯೋಜನೆಯಲ್ಲಿ ಪಾರದರ್ಶಕತೆ ತರಲು ಸರಕಾರ ಹೊಸ ತಂತ್ರಾಂಶವನ್ನು ಪರಿಚಯ ಮಾಡಿತ್ತು. ಆ ತಂತ್ರಾಂಶದ ಮೂಲಕವೇ ನ್ಯಾಯಬೆಲೆ ಅಂಗಡಿಯವರು ಜನರಿಗೆ ಪಡಿತರವನ್ನು ನೀಡಬೇಕಿದೆ. ಆದರೆ ಈತಂತ್ರಾಂಶ ಸಾಕಷ್ಟು ಸಮಸ್ಯೆಗಳಿಂದ ಕೂಡಿತ್ತು. ಆ ಬಗ್ಗೆ ದೂರು ಬಂದ ಬಳಿಕ ಆ ಸಮಸ್ಯೆಗಳನ್ನು ಪರಿಹರಿಸಲಾಗಿತ್ತು. ಆದರೆ ಇದೀಗ ಮತ್ತಷ್ಟು ಅನರ್ಹರನ್ನು ಗುರುತಿಸಲು ತಂತ್ರಾಂಶವನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.

ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಗುಟ್ಕಾ, ಪಾನ್ ಬೀಡಾ ಉಗುಳಿದರೆ ಚಾಲಕ-ನಿರ್ವಾಹಕರಿಗೂ ದಂಡ: NWKRTCಯಿಂದ ಹೊಸ ನಿಯಮ

ಅನರ್ಹರನ್ನು ಪತ್ತೆ ಹಚ್ಚಲು ಇದೀಗ ಕುಟುಂಬದ ಎಲ್ಲ ಸದಸ್ಯರ ಕೆವೈಸಿಯನ್ನು ಮಾಡಬೇಕಿದೆ. ಕುಟುಂಬದ ಎಲ್ಲ ಸದಸ್ಯರು ಬಂದು ಬಯೋಮೆಟ್ರಿಕ್ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಆಯಾ ಸದಸ್ಯರ ಹೆಬ್ಬೆರಳಿನ ಗುರುತು ನೀಡಿದ ಕೂಡಲೇ ಅವರ ಮೊಬೈಲ್ ನಂಬರ್​ಗೆ ಓಟಿಪಿ ಹೋಗುತ್ತೆ. ಅದನ್ನು ಮತ್ತೆ ತಂತ್ರಾಂಶದಲ್ಲಿ ಹಾಕಬೇಕು. ಅಂದಾಗ ಮಾತ್ರ ಅವರ ಹೆಸರಿನಲ್ಲಿ ಸಿಗುತ್ತಿದ್ದ ಪಡಿತರವನ್ನು ಪಡೆಯಲು ಅವರು ಅರ್ಹರಾಗುತ್ತಾರೆ. ಇದೀಗ ಉಂಟಾಗಿರುವ ಸಮಸ್ಯೆ ಎಂದರೆ, ಸರ್ವರ್ ಸಮಸ್ಯೆಯಿಂದಾಗಿ ಒಂದು ದಿನ ಕಾದರೂ ಇಬ್ಬರು ಫಲಾನುಭವಿಗಳ ಕೆವೈಸಿ ಮಾತ್ರ ಪೂರ್ಣವಾಗುತ್ತಿದೆ. ಇದರಿಂದಾಗಿ ಜನರು ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲೋದೇ ಆಗಿದೆ.

ತಾಂತ್ರಿಕ ಎಡವಟ್ಟು, ಜನರ ಗೋಳು

ಒಂದೊಂದು ಕುಟುಂಬದಲ್ಲಿ ಏಳೆಂಟು ಜನ ಸದಸ್ಯರಿದ್ದರಂತೂ ಅವರ ಕಥೆ ಮುಗಿದಂತೆಯೇ. ಏಕೆಂದರೆ ಒಬ್ಬೊಬ್ಬ ಸದಸ್ಯರ ಕೆವೈಸಿ ಮುಗಿಯಲು ಒಂದರಿಂದ ಎರಡು ಗಂಟೆಗಳವರೆಗೆ ಕಾಯಬೇಕು. ಬಳಿಕ ಅವರ ಮೊಬೈಲ್​ಗೆ ಓಟಿಪಿ ಹೋಗುತ್ತಿದ್ದಂತೆಯೇ ಅದನ್ನು ಮತ್ತೆ ಸಾಫ್ಟ್ ವೇರ್​ನಲ್ಲಿ ನಮೂದಿಸಬೇಕು. ಹೀಗೆ ನಮೂದಿಸಲು ಹೋದರೆ ಮತ್ತೆ ಸರ್ವರ್ ಸಮಸ್ಯೆ ಎದುರಾಗುತ್ತದೆ. ಅಲ್ಲಿಗೆ ಮತ್ತೊಂದು ಗಂಟೆ ಕಾಯಬೇಕಾದ ಅನಿವಾರ್ಯತೆ. ಎಷ್ಟೋ ಸಂದರ್ಭಗಳಲ್ಲಿ ಓಟಿಪಿಯೂ ಬರೋದಿಲ್ಲ.

ಇದನ್ನೂ ಓದಿ: ರೈತರ ಜೀವಕ್ಕೆ ಕುತ್ತು ತರುತ್ತಿದೆಯಾ ಕ್ರಿಮಿನಾಶಕ: KIMS ಅಧ್ಯಯನದಲ್ಲಿ ಆತಂಕಕಾರಿ ಸಂಗತಿ ಬಯಲು

ಇನ್ನು ಓಟಿಪಿ ಬಂತು ಅಂತಾ ಖುಷಿಯಾದರೆ ಅದನ್ನು ನಮೂದಿಸುವ ಹೊತ್ತಿಗೆ ಅದರ ಅವಧಿ ಮುಗಿದು ಹೋಗಿರುತ್ತೆ. ಹೀಗಾಗಿ ಮತ್ತೊಮ್ಮೆ ಎಲ್ಲ ಪ್ರಕ್ರಿಯೆಯನ್ನು ಹೊಸದಾಗಿ ಮಾಡಬೇಕಿದೆ. ಇದೇ ಕಾರಣಕ್ಕೆ ಫಲಾನುಭವಿಗಳು ಬಿಸಿಲು-ಮಳೆ ಅನ್ನದೇ ಹಗಲು-ರಾತ್ರಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅತ್ತ ಅಧಿಕಾರಿಗಳನ್ನು ಕೇಳಿದರೆ ಇದು ಸರ್ವರ್ ಸಮಸ್ಯೆಯಿಂದಾಗುತ್ತಿದೆ ಅನ್ನುತ್ತಾರೆ. ಆದರೆ ಇತ್ತ ಪಡಿತರ ಅಂಗಡಿ ಮಾಲಿಕರು ತಮ್ಮ ಬಳಿ ಬರುವ ಫಲಾನುಭವಿಗಳನ್ನು ಸಂಭಾಳಿಸಲು ಆಗದೇ ಒದ್ದಾಡುತ್ತಿದ್ದಾರೆ. ಇದರಿಂದಾಗಿ ಜನರು ವಾರಗಟ್ಟಲೇ ಕೆಲಸಕ್ಕೆ ಹೋಗದೇ ಇಲ್ಲಿಯೇ ಬಂದು ನಿಲ್ಲುವಂತಾಗಿದೆ.

ಕೂಲಿ ಬಿಟ್ಟು ಬಿಸಿಲಿನಲ್ಲಿ ನಿಲ್ಲುವ ಅನಿವಾರ್ಯತೆ

ನಿತ್ಯವೂ ಬೆಳಿಗ್ಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುವ ಎಷ್ಟೋ ವೃದ್ಧೆಯರು ಅಸ್ವಸ್ಥರಾಗಿ ಬೀಳುತ್ತಿದ್ದಾರೆ. ಅವರಿಗೆ ಸ್ಥಳೀಯರು ಹಾಗೂ ಅಂಗಡಿ ಮಾಲಿಕರೇ ನೀರು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಅಲ್ಲದೇ ಇಲ್ಲಿ ಬಂದು ಕ್ಯೂನಲ್ಲಿ ನಿಲ್ಲುವ ಬಹುತೇಕರು ನಿತ್ಯವೂ ಬೇರೆ ಕಡೆಗೆ ಕೂಲಿಗೆ ಹೋಗುವ ಜನರು. ತಮ್ಮ ನಿತ್ಯದ ಅನ್ನಕ್ಕಾಗಿ ಅವರು ಕೂಲಿಗೆ ಹೋಗದಿದ್ದರೆ, ಅಂದು ಇಡೀ ಕುಟುಂಬವೇ ಉಪವಾಸ ಬೀಳಬೇಕಾಗುತ್ತೆ. ಇದೇ ಕಾರಣಕ್ಕೆ ಈ ಸಮಸ್ಯೆಗೊಂದು ಪರಿಹಾರ ಕೊಡಿ ಅಂತಾ ಸರಕಾರಕ್ಕೆ ಕೇಳುತ್ತಿದ್ದಾರೆ. ಆದರೆ ಅವರ ಕೂಗು ಅರಣ್ಯ ರೋದನವಾಗಿರುವುದು ಮಾತ್ರ ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us