ಮುಖದಲ್ಲಿನ ನಗು, ಪ್ರಸನ್ನತೆ, ಮಂದಹಾಸ ಮಾನಸಿಕ ಆರೋಗ್ಯದ ಆಭರಣ – ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ

| Updated By: ಸಾಧು ಶ್ರೀನಾಥ್​

Updated on: Oct 10, 2023 | 4:55 PM

ಮಾನಸಿಕ ಅಸ್ವಸ್ಥತೆ ಸಮಾಜಕ್ಕೆ ಮಾರಕ. ಅದು ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತದೆ. ಅಲ್ಲದೇ ಅದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು - ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ

ಮುಖದಲ್ಲಿನ ನಗು, ಪ್ರಸನ್ನತೆ, ಮಂದಹಾಸ ಮಾನಸಿಕ ಆರೋಗ್ಯದ ಆಭರಣ - ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ
ನಗು, ಮಂದಹಾಸ ಮಾನಸಿಕ ಆರೋಗ್ಯದ ಆಭರಣ -ಜಡ್ಜ್​ ಪರಶುರಾಮ ದೊಡ್ಡಮನಿ
Follow us on

ವ್ಯಕ್ತಿ ಜೀವನ ಹಾಗೂ ಸಮಾಜದ ಸ್ಥಿತಿಗತಿಗಳು ಮನುಷ್ಯನ ಮಾನಸಿಕ ಸ್ಥಿಮಿತತೆಯನ್ನು ಅವಲಂಭಿಸಿವೆ. ವ್ಯಕ್ತಿಯ ಮುಖದಲ್ಲಿ ಕಾಣುವ ನಗು, ಪ್ರಸನ್ನತೆ, ಮಂದಹಾಸಗಳು ಅವನ ಮಾನಸಿಕ ಆರೋಗ್ಯ ಮತ್ತು ನಿರ್ಮಲ ಭಾವನೆಗಳ ಪ್ರತೀಕವಾಗಿ ಅವನ ಆಭರಣೆಗಳಂತೆ ಕಾಣುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ (Senior Civil Judge Parshuram Doddamani) ಹೇಳಿದರು.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್ – Dimhans, Dharwad) ಸಭಾಂಗಣದಲ್ಲಿ ವಿಶ್ವಮಾನಸಿಕ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಡಿಮ್ಹಾನ್ಸ್, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಯೂತ್‍ವೂವ್‍ಮೆಂಟ್ ಸಂಯುಕ್ತವಾಗಿ ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಘೋಷವಾಕ್ಯದಡಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಮಾನವ ಸಮಾಜದ ಅಳಿವು, ಉಳಿವು ಮಾನವನ ಮಾನಸಿಕ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ. ಪ್ರತಿಯೊಬ್ಬರಲ್ಲಿನ ದಯೆ, ಧರ್ಮ, ಪರಸ್ಪರ ಪ್ರೀತಿ-ವಿಶ್ವಾಸಗಳಿಂದ ಇಡೀ ಸಮಾಜ ಆದರ್ಶವಾಗುತ್ತದೆ. ವ್ಯಕ್ತಿಯಲ್ಲಿನ ಮಾನವೀಯತೆ ಮಾನಸಿಕ ಆರೋಗ್ಯದ ಸೂಚಕ. ನಮ್ಮ ಮನಸ್ಸೇ ನಮ್ಮ ಸಾಧನೆಯ ಮಾರ್ಗವಾಗಿದೆ. ಅಧಿಕಾರ, ಅಂತಸ್ತು ಮೀರಿ ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ತೋರಬೇಕು. ಇದರಿಂದ ವೃತ್ತಿ ಬಾಂಧವ್ಯ ಮತ್ತು ವೈಯಕ್ತಿಕ ಬಾಂಧವ್ಯಗಳು ಗಟ್ಟಿಗೊಳ್ಳುತ್ತವೆ ಎಂದು ಅವರು ಹೇಳಿದರು.

ಮಾನಸಿಕ ಅಸ್ವಸ್ಥತೆ ಸಮಾಜಕ್ಕೆ ಮಾರಕ. ಅದು ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತದೆ. ಅಲ್ಲದೇ ಅದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಅವರು ಮಾತನಾಡಿ, ಮಾನಸಿಕ ರೋಗದ ಲಕ್ಷಣ ಕಂಡುಬಂದ ತಕ್ಷಣ ಚಿಕಿತ್ಸೆಗೆ ಒಳಪಡಬೇಕು. ಈಗ ಜಿಲ್ಲಾ ಆಸ್ಪತ್ರೆ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ಚಿಕಿತ್ಸೆಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಮಾನಸಿಕ ರೋಗ ಗುಣಮುಖರಾದವರು ಸ್ವ-ಉದ್ಯೋಗ ಕೈಗೊಳ್ಳಲು ಸರ್ಕಾರದ ವಿವಿಧ ಇಲಾಖೆಗಳಿಂದ ಸಹಾಯಧನದ ಸೌಲಭ್ಯಗಳಿವೆ. ಮತ್ತು ಮಾನಸಿಕ ರೋಗಿಗಳ ಉತ್ತಮ ಚಿಕಿತ್ಸೆಗಾಗಿ ಪುನರ್‍ವಸತಿ ಕೇಂದ್ರ ತೆರೆಯಲಾಗಿದೆ. ಇವುಗಳ ಸದುಪಯೋಗ ಪಡೆಯಬೇಕೆಂದು ಡಾ. ಶಶಿ ಪಾಟೀಲ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಅವರು ಮಾತನಾಡಿ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯು, ಸಮುದಾಯ ಮಾನಸಿಕ ಆರೋಗ್ಯ ಕೇಂದ್ರಗಳ ಮೂಲಕ ಮಾನಸಿಕ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಚಿಕಿತ್ಸೆಗಳ ಲಭ್ಯತೆ ಬಗ್ಗೆ ನಿರಂತರವಾಗಿ ವಿಸ್ತರಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರೋಗಿಗಳು ಮತ್ತು ಅವರ ಪಾಲಕರು, ಮಾನಸಿಕ ಕಾಯಿಲೆಗಳ ಬಗ್ಗೆ ಆರಂಭ ಹಂತದಲ್ಲಿ ಆಸ್ಪತ್ರೆಗೆ ಬಂದು ಸಮಾಲೋಚನೆ, ಚಿಕಿತ್ಸೆ ಪಡೆಯದೇ ಮೂಢನಂಬಿಕೆ, ದೇವರು, ಮಾಟಮಂತ್ರವೆಂದು ವ್ಯರ್ಥ ಕಾಲಹರಣ ಮಾಡುತ್ತಾರೆ. ಇದರಿಂದ ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹಾನಿಯಾಗುತ್ತದೆ. ಕುಟುಂಬದ ಸದಸ್ಯರಲ್ಲಿ ಮಾನಸಿಕ ವರ್ತನೆಯು ಕಾಯಿಲೆ ರೂಪದಲ್ಲಿ ಕಂಡಾಗ, ತಕ್ಷಣ ಮಾನಸಿಕ ಆಸ್ಪತ್ರೆ ಅಥವಾ ಮನೋವೈದ್ಯರ ಬಳಿ ತೋರಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕೆಂದು ಡಾ. ದೇಸಾಯಿ ಹೇಳಿದರು.

ಡಿಮ್ಹಾನ್ಸ್‌ದಿಂದ ಟೆಲಿಮಾನಸ ಮೂಲಕ ದೂರವಾಣಿಯಲ್ಲಿಯೇ ಪರಿಹಾರ ಹೇಳುವ, ಮಾನಸಿಕ ಧೈರ್ಯ, ಸ್ಥೈರ್ಯ ತುಂಬುವ ಕಾರ್ಯ ಯಶಸ್ವಿಯಾಗಿ ಮುಂದುವರಿದಿದೆ. ಕಳೆದ ಸುಮಾರು 18 ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ತಿಳಿಸಲಾಗಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಟೆಲಿಮಾನಸ ದೂರವಾಣಿ ಸಮಾಲೋಚನಾ ಕೇಂದ್ರಕ್ಕೆ ಪ್ರತಿದಿನ ಸರಾಸರಿ 40 ರಿಂದ 50ಕ್ಕೂ ಹೆಚ್ಚು ಕರೆಗಳು ದಂಪತಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಯುವಕ ಯುವತಿಯರಿಂದ ಸ್ವೀಕೃತವಾಗುತ್ತಿವೆ. ಎಲ್ಲ ಕರೆಗಳನ್ನು ಸಮರ್ಥವಾಗಿ, ಸಮರ್ಪಕವಾಗಿ ನಿರ್ವಹಿಸಲು ನುರಿತ ಸಿಬ್ಬಂದಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಶಿಧರ ಬಿ. ಕಳಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಂ. ತಿಮ್ಮಾಪುರ ಸ್ವಾಗತಿಸಿದರು, ಅಶೋಕ ಕೋರಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಸುನಂದಾ ಜಿ.ಟಿ. ಕಾರ್ಯಕ್ರಮ ನಿರೂಪಿಸಿದರು.