ಮಂಗಳೂರು ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿದ ಕಾಂಗ್ರೆಸ್ ಕಾರ್ಯಕರ್ತ: ಸ್ಪಷ್ಟನೆ ನೀಡಿದ ಆಯುಕ್ತ
ಕಾಂಗ್ರೆಸ್ ಸರ್ಕಾರ ಕರಾವಳಿಯಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಕಡಕ್ ಅಧಿಕಾರಿಗಳನ್ನು ನೇಮಿಸಿದೆ. ಮಂಗಳೂರು ಪೊಲೀಸರ ವಿರುದ್ಧ ಈಗ ಕಾಂಗ್ರೆಸ್ ಕಾರ್ಯರ್ತನೋರ್ವ ಗಂಭೀರ ಆರೋಪ ಮಾಡಿದ್ದಾರೆ. ಫೇಸ್ ಬುಕ್ ಲೈವ್ ಬಂದು ಆತ್ಮಗತ್ಯೆ ಮಾಡಿಕೊಳ್ಳೊದಾಗಿ ಹೇಳಿದ್ದಾರೆ. ಪ್ರಭಾವಿ ಕಾಂಗ್ರೆಸ್ ನಾಯಕರ ಆಪ್ತನಿಗೆ ಪೊಲೀಸರು ಟಾರ್ಚರ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ.

ಮಂಗಳೂರು, ಜೂನ್ 21: ಕೆಲ ದಿನಗಳ ಹಿಂದೆ ಪೊಲೀಸರು (Police) ತಡರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಓರ್ವ ಕಾಂಗ್ರೆಸ್ ಕಾರ್ಯಕರ್ತ ಕೂಡ ಮಂಗಳೂರು ಪೊಲೀಸರ (Mangaluru Police) ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ. ಕಾಂಗ್ರೆಸ್ (Congress) ಕಾರ್ಯಕರ್ತನ ಆರೋಪಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಕಾರ್ಯಕರ್ತ ಸುಜೀತ್ ಶೆಟ್ಟಿಗೆ ಮಾನಸಿಕ ತಪಾಸಣೆ ಮತ್ತು ಸಮಾಲೋಚನೆ ವ್ಯವಸ್ಥೆ ಮಾಡಲಾಗುತ್ತೆ ಎಂದಿದ್ದಾರೆ.
ಏನಿದು ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಹತ್ಯೆಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖಡಕ್ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಿಸಿತ್ತು. ಮಂಗಳೂರಿಗೆ ನೇಮಕವಾದ ದಿನದಿಂದ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಮನಸ್ಸಿಗೆ ಬಂದಿದ್ದನ್ನು ಪೋಸ್ಟ್ ಮಾಡಿದರೇ ಕ್ರಮ ಕೈಗೊಳ್ಳುತ್ತಿದ್ದಾರೆ. ಕುಡುಪು ಬಳಿ ಗುಂಪು ಹತ್ಯೆಗೆ ಒಳಗಾದ ಕೇರಳದ ವಯನಾಡಿನ ಅಶ್ರಫ್ ಕೊಲೆ ಹಿಂದೆ ಬಿಜಿಪಿ ಮಾಜಿ ಪಾಲಿಕೆ ಸದಸ್ಯೆಯ ಪತಿ ರವೀಂದ್ರ ಕೈವಾಡ ಇದೆ ಅನ್ನೊದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ರ ಆರೋಪವಾಗಿತ್ತು.
ತಲೆಮರಿಸಿಕೊಂಡಿರುವ ರವೀಂದ್ರ ಬಂಧನ ಯಾವಾಗ ಅಂತ ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಕುತ್ತಿದ್ದರು. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಜೀತ್ ಶೆಟ್ಟಿ ಕೂಡ ಒಬ್ಬ. ಈತ ಹಾಕಿದ ಪೋಸ್ಟ್ನಲ್ಲಿ ಆರೋಪಿ ಮತ್ತು ಪೊಲೀಸರ ಜುಗಲ್ಬಂದಿ ಎಂಬ ಪದ ಬಳಸಿದ್ದರು. ಇದರಿಂದ ಸೆನ್ ಪೊಲೀಸರು ಸಜೀತ್ಗೆ ಕರೆಮಾಡಿ ಪ್ರಕರಣ ಸಂಬಂಧ ಮಾಹಿತಿ ನೀಡಲು ಕರೆಸಿಕೊಂಡಿದ್ದಾರೆ.
ಠಾಣೆಯಲ್ಲಿ, “ಎಸಿಪಿ ಪ್ರಕಾಶ್ ಮತ್ತು ಗ್ರಾಮಾಂತರ ಇನ್ಸ್ಪೆಕ್ಟರ್ ಅರುಣ್ ಟಾರ್ಚರ್ ಕೊಟ್ಟರು. ಸಾಕ್ಷಿ ಇದ್ದರೆ ಕೊಡು, ಇಲ್ಲದಿದ್ದರೇ ಸಮಾಜಿಕ ಜಾಲತಾಣದಲ್ಲಿ ಏಕೆ ಟೀಕೆ ಮಾಡುತ್ತೀಯಾ ಅಂತ ಗದರಿದರಿದರು. ಈತನ ಮೊಬೈಲ್ ಕಸಿದುಕೊಂಡು ಬಲವಂತವಾಗಿ ತಪ್ಪೊಪ್ಪಿಗೆ ವಿಡೀಯೋ ಮಾಡಿದ್ದಾರೆ. ವಿಡಿಯೋವನ್ನು ಆತನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಸಂ ಅಲ್ಲದೇ, ಅದೇ ವಿಡಿಯೋವನ್ನು ತಮ್ಮ ಮೊಬೈಲ್ಗೂ ಪೊಲೀಸರು ಕಳುಹಿಸಿಕೊಂಡಿದ್ದಾರೆ. ನನ್ನ ಫೇಸ್ ಬುಕ್ ನಿಂದ ಕೆಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಲ್ಲದೇ, ಬಳಿಕ ಫೇಸ್ ಬುಕ್ ಆ್ಯಪ್ ಅನ್ನು ಡಿಲೀಟ್ ಮಾಡಿ ಕಳುಹಿಸಿದರು. ನಂತರ ನಾನು ಆ್ಯಪ್ ರಿಟ್ರೀವ್ ಮಾಡಿ, ನಾನು ಕ್ಷಮೆ ಕೇಳಿದ ವೀಡಿಯೋ ಡಿಲೀಟ್ ಮಾಡಿದೆ” ಎಂದು ಟಿವಿ9 ಗೆ ಸಜೀತ್ ಹೇಳಿದ್ದಾರೆ.
ಇದಕ್ಕೂ ಮೊದಲು ಫೇಸ್‌ಬುಕ್‌ನಲ್ಲಿ ಲೈವ್ ಹೋದ ಸಜೀತ್ ಪೊಲೀಸರ ವಿರುದ್ಧ ಅಕ್ರೋಶಗೊಂಡು, ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಈ ವಿಚಾರವನ್ನು ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದು, ಪೊಲೀಸರ ಮೇಲೆ ಕಾನೂನು ಹೋರಾಟ ಮಾಡುವುದಾಗಿ ಸಜೀತ್ ಹೇಳಿಕೊಂಡಿದ್ದಾರೆ. “ನಾನು ಆರೋಪಿಯನ್ನು ಸೃಷ್ಠಿಸಿಲ್ಲ. ಪೊಲೀಸರ ಹುಡುಕುತ್ತಿದ್ದ ಆರೋಪಿಯ ಬಂಧನ ಯಾವಾಗ ಅಂತಾ ವಾಕ್ ಸ್ವಾಂತತ್ರ್ಯದ ಅಡಿಯಲ್ಲಿ ಕೇಳಿದ್ದೇನೆ. ನನ್ನದು ತಪ್ಪಿದ್ದರೆ ಕೇಸ್ ಹಾಕಿ ಬಂಧಿಸಲಿ. ಅದನ್ನ ಬಿಟ್ಟು ನನ್ನ ತೇಜೋವಧೆ ಮಾಡಿದ್ದಾರೆ” ಎಂದು ಸಜೀತ್ ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸ್ ಆಯುಕ್ತ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾತನಾಡಿ, ಸುಜೀತ್ ಶೆಟ್ಟಿಗೆ ಮಾನಸಿಕ ತಪಾಸಣೆ ಮತ್ತು ಸಮಾಲೋಚನೆ ವ್ಯವಸ್ಥೆ ಮಾಡಲಾಗುತ್ತೆ. ಸಜಿತ್ ಶೆಟ್ಟಿ ಫೇಸ್‌ಬುಕ್‌ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಒಂದು ಪ್ರಕರಣದಲ್ಲಿ ಮುಖ್ಯ ಆರೋಪಿಯು ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ ಎಂದಿದ್ದರು. ಅವರು ಈ ಆರೋಪಕ್ಕೆ ಕಾರಣವಾಗಿ ಕೆಲವು ಸಂಬಂಧಗಳನ್ನು ಉಲ್ಲೇಖಿಸಿದ್ದರು. ಈ ಪೋಸ್ಟ್‌ನ ಆಧಾರದಲ್ಲಿ ಪ್ರಕರಣದಲ್ಲಿ ಇನ್ನೊಬ್ಬ ಪ್ರಮುಖ ಆರೋಪಿ ಇರಬಹುದೆಂಬ ಸಾಧ್ಯತೆಯತ್ತ ಪೊಲೀಸರು ಗಮನ ಹರಿಸಿದರು ಎಂದು ಹೇಳಿದರು.
ಅದಕ್ಕಾಗಿ ತನಿಖಾಧಿಕಾರಿ (IO) ಅವರು ಸಜಿತ್ ಶೆಟ್ಟಿ ಅವರಿಂದ ಆ ವ್ಯಕ್ತಿಯ ಗುರುತನ್ನು ತಿಳಿದುಕೊಳ್ಳುವುದು. ಹಾಗೂ ಸಾಕ್ಷಿಗಳನ್ನು ಹೊಂದಿದರೆ ಅವುಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬಂದರು. ತನಿಖಾ ಪ್ರಕ್ರಿಯೆಯ ಭಾಗವಾಗಿ ವ್ಯಕ್ತಿಯನ್ನು ಸಮನ್ಸ್ ನೀಡಿ ವಿಚಾರಣೆ ನಡೆಸುವ ಹಕ್ಕು ಇದೆ. ಈ ಹಿನ್ನೆಲೆಯಲ್ಲಿ ಸಜಿತ್ ಶೆಟ್ಟಿ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ಸಂದರ್ಭದಲ್ಲಿ ಅವರು ತನ್ನ ಬಳಿ ಸಾಕ್ಷಿಗಳಿಲ್ಲವೆಂದು ಹೇಳಿದ್ದಾರೆ. ತಮ್ಮ ಪೋಸ್ಟ್ ವೈಯಕ್ತಿಕ ಕಾರಣಗಳಿಂದಲೇ ಮಾಡಿದುದಾಗಿಯೂ ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಲಾಗಿದ್ದು, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಇಲ್ಲಿ ಯಾರೊಬ್ಬರೂ ಕಾನೂನುಕ್ಕಿಂತ ಮೇಲಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಅನುಯಾಯಿಗಳಿದ್ದರೂ ಅಥವಾ ಸಾರ್ವಜನಿಕ ಆಸ್ತಿಯಾಗಿದ್ದರೂ, ಕಾನೂನಿನಡಿ ತನಿಖೆಗೆ ಸಹಕಾರ ನೀಡಬೇಕು. ಪೊಲೀಸರು ಕೈಗೊಂಡಿರುವ ಎಲ್ಲ ಕ್ರಮಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಅಡಿಯಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳ ಪ್ರಕಾರವೇ ನಡೆದಿವೆ ಎಂದು ತಿಳಸಿದರು.
ಇದನ್ನೂ ಓದಿ: ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧ, ವ್ಯಾಪಕ ಆಕ್ರೋಶದ ಬೆನ್ನಲ್ಲೇ ಆದೇಶ ವಾಪಸ್
ಸಜಿತ್ ಶೆಟ್ಟಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಾವು ಮಾನಸಿಕ ಒತ್ತಡ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ನಮ್ಮ ವ್ಯಾಪ್ತಿಯೊಳಗಿನ ಎಲ್ಲರ ಸೌಖ್ಯವನ್ನೂ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ. ಈ ರೀತಿಯ ಹೇಳಿಕೆ ಮತ್ತು ವಿಡಿಯೋಗಳನ್ನು ಪರಿಗಣಿಸಿ ಅವರಿಗೆ ಅಗತ್ಯವಿರುವ ಮಾನಸಿಕ ತಪಾಸಣೆ ಮತ್ತು ಸಮಾಲೋಚನೆ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.