ಹುಬ್ಬಳ್ಳಿ: ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ; ಒಣ ಕಸದಿಂದ ಉತ್ಪತ್ತಿಯಾಗಲಿದೆ ಹಸಿರು ಇದ್ದಿಲು!

ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದ ಕಸದ ಸಮಸ್ಯೆಗೆ ಮುಕ್ತಿ ನೀಡಲು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಒಣ ಕಸದಿಂದ ಹಸಿರು ಇದ್ದಿಲು ಉತ್ಪಾದಿಸುವ ಅತ್ಯಾಧುನಿಕ ಘಟಕ ಹುಬ್ಬಳ್ಳಿಯ ಗಬ್ಬೂರಿನಲ್ಲಿ ತಲೆಎತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮುತುವರ್ಜಿಯಿಂದ NTPC ಅಂಗಸಂಸ್ಥೆ ಜಾರಿಗೆ ತಂದಿರುವ ಈ ಘಟಕವು ನಿತ್ಯ 200 ಟನ್ ಒಣ ಕಸವನ್ನು ಸಂಸ್ಕರಿಸಿ 120 ಟನ್ ಪರಿಸರಸ್ನೇಹಿ ಇದ್ದಿಲು ಉತ್ಪಾದಿಸಲಿದೆ.

ಹುಬ್ಬಳ್ಳಿ: ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ; ಒಣ ಕಸದಿಂದ ಉತ್ಪತ್ತಿಯಾಗಲಿದೆ ಹಸಿರು ಇದ್ದಿಲು!
ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ
Edited By:

Updated on: Jun 27, 2026 | 1:26 PM

ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದ ಮೊದಲ ಹಸಿರು ಇದ್ದಿಲು ಘಟಕ ಸ್ಥಾಪನೆಯಾಗಿದೆ.
  • ನಿತ್ಯ 200 ಟನ್ ಒಣ ಕಸದಿಂದ ಚಾರ್ಕೋಲ್ ಉತ್ಪಾದಿಸುವ ಅತ್ಯಾಧುನಿಕ ಯೋಜನೆ.
  • ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಳಜಿಯಿಂದ ಗಬ್ಬೂರಿನಲ್ಲಿ ಘಟಕ ಆರಂಭಗೊಂಡಿದೆ.

ಹುಬ್ಬಳ್ಳಿ, ಜೂನ್ 27: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ (Hubballi-Dharwad) ದೊಡ್ಡ ತಲೆನೋವಾಗಿದ್ದ ಕಸದ ಸಮಸ್ಯೆಗೆ ಈಗ ಅತ್ಯಾಧುನಿಕ ತಂತ್ರಜ್ಞಾನದ ಮುಕ್ತಿ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಒಣ ಕಸವನ್ನು ಸಂಸ್ಕರಿಸಿ ಹಸಿರು ಇದ್ದಿಲಾಗಿ ಪರಿವರ್ತಿಸುವ ಅತ್ಯಾಧುನಿಕ ಘಟಕವೊಂದು ಹುಬ್ಬಳ್ಳಿಯಲ್ಲಿ ತಲೆ ಎತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ದಕ್ಷಿಣ ಭಾರತದ ಮೊದಲ ಚಾರ್ಕೋಲ್ ಘಟಕ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿಶೇಷ ಕಾಳಜಿ ಮತ್ತು ಮುತುವರ್ಜಿಯಿಂದಾಗಿ ಈ ನೂತನ ಪರಿಸರಸ್ನೇಹಿ ಯೋಜನೆ ಅನುಷ್ಠಾನಗೊಂಡಿದೆ. ಹುಬ್ಬಳ್ಳಿಯ ಗಬ್ಬೂರು ಬಳಿ ಸುಮಾರು 10 ಎಕರೆ ಭೂಮಿಯಲ್ಲಿ ಈ ಬೃಹತ್ ಘಟಕವನ್ನು ಸ್ಥಾಪಿಸಲಾಗಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಇತ್ತೀಚೆಗೆ ಘಟಕಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (NTPC) ಅಂಗಸಂಸ್ಥೆಯಾದ ವಿದ್ಯುತ್ ವ್ಯಾಪಾರ ನಿಗಮವು ಈ ಅತ್ಯಾಧುನಿಕ ಯೋಜನೆಯನ್ನು ಜಾರಿಗೆ ತಂದಿದೆ.

ಅವಳಿ ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ನೂರಾರು ಟನ್ ತ್ಯಾಜ್ಯದಿಂದ ಕಸದ ಬೆಟ್ಟಗಳು ನಿರ್ಮಾಣವಾಗುತ್ತಿದ್ದವು. ಸದ್ಯ ಹುಬ್ಬಳ್ಳಿಯಲ್ಲಿ 280 ಟನ್ ಹಾಗೂ ಧಾರವಾಡದಲ್ಲಿ 120 ಟನ್ ಸೇರಿದಂತೆ ಪ್ರತಿದಿನ ಒಟ್ಟು 400 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ, ಕೇವಲ ಒಣ ಕಸವನ್ನು ಮಾತ್ರ ಈ ಚಾರ್ಕೋಲ್ ಉತ್ಪಾದನಾ ಘಟಕಕ್ಕೆ ರವಾನಿಸಲಾಗುತ್ತದೆ.

ನಿತ್ಯ 120 ಟನ್ ಹಸಿರು ಇದ್ದಿಲು ಉತ್ಪಾದನೆಯ ಗುರಿ

ಈ ಘಟಕವು ಪ್ರತಿನಿತ್ಯ ಗರಿಷ್ಠ 200 ಟನ್ ಒಣ ತ್ಯಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ದಹಿಸಿ, ಸುಮಾರು 120 ಟನ್ ಪರಿಸರಸ್ನೇಹಿ ಹಸಿರು ಇದ್ದಿಲನ್ನು (Charcoal) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕದ ಯಶಸ್ವಿ ಕಾರ್ಯಾಚರಣೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರತಿದಿನ 150 ಟನ್ ಒಣ ಕಸವನ್ನು ಕಡ್ಡಾಯವಾಗಿ ಪೂರೈಸುವುದಾಗಿ ಕಂಪನಿಗೆ ವಾಗ್ದಾನ ನೀಡಿದೆ.

ತ್ಯಾಜ್ಯ ಮುಕ್ತ ಸ್ವಚ್ಛ ನಗರ ನಿರ್ಮಾಣದ ನಿಟ್ಟಿನಲ್ಲಿ ಈ ಯೋಜನೆ ಮೈಲಿಗಲ್ಲಾಗಲಿದ್ದು, ಇಲ್ಲಿ ಉತ್ಪತ್ತಿಯಾಗುವ ಹಸಿರು ಇದ್ದಿಲನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಇದು ಕಸದ ಸಮಸ್ಯೆಗೆ ಮುಕ್ತಿ ನೀಡುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಲಿದೆ. ಕಸದ ವಿಲೇವಾರಿ ಮಾಡಲಾಗದೆ ಕಂಗಾಲಾಗಿದ್ದ ಅವಳಿ ನಗರಕ್ಕೆ ಈ ಯೋಜನೆ ಹೊಸ ಆಶಾಕಿರಣ ಮೂಡಿಸಿದೆ. ತ್ಯಾಜ್ಯದಿಂದಲೇ ಇಂಧನ ತಯಾರಿಸುವ ಈ ಮಾದರಿ ಪ್ರಾಜೆಕ್ಟ್ ಇಡೀ ದಕ್ಷಿಣ ಭಾರತಕ್ಕೇ ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us