ಧಾರವಾಡ: ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ಎಸ್ಡಿಎಂ ಕಾಲೇಜು ವಿದ್ಯಾರ್ಥಿಗಳ ಕೊರೊನಾ ಪಾಸಿಟಿವ್ ಪ್ರಕರಣದ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಮಾಹಿತಿ ನೀಡಿದ್ದಾರೆ. ಹೊಸ ತಳಿಯ ವೈರಾಣು ಕಂಡುಬಂದಿದೆಯೇ ಎಂದು ಪರೀಕ್ಷಿಸಲು ಇತ್ತೀಚೆಗೆ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಲು ವಿದ್ಯಾರ್ಥಿಗಳ ಸ್ಯಾಂಪಲ್ ಕಳುಹಿಸಿಕೊಡಲಾಗಿತ್ತು. ಇದೀಗ ಅವುಗಳ ವರದಿ ಬಂದಿದ್ದು, ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ‘‘ಧಾರವಾಡದ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಕಳುಹಿಸಿ ಕೊಡಲಾಗಿತ್ತು. ಟೆಸ್ಟ್ ವರದಿ ಕಳೆದ ರಾತ್ರಿ ಬಂದಿದ್ದು, 113 ಜನ ವಿದ್ಯಾರ್ಥಿಗಳ ವರದಿಯಲ್ಲಿ ಹೊಸ ತಳಿ ಕಂಡು ಬಂದಿಲ್ಲ. ಇಂದು 140 ಜನರ ವರದಿ ಬರಲಿದೆ’’ ಎಂದು ಡಿಸಿ ನಿತೇಶ್ ಪಾಟೀಲ್ ಹೇಳಿದ್ದಾರೆ. ಈ ಮಾಹಿತಿ ಮೂಲಕ ಆತಂಕಗೊಂಡಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಹುಬ್ಬಳ್ಳಿಯಲ್ಲಿ ಲಸಿಕೆ ವಿತರಣೆ ಕುರಿತು ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ‘‘ಮನೆ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುತ್ತಿದ್ದೇವೆ. ಎರಡೂವರೆ ಲಕ್ಷ ಲಸಿಕೆ ನಮ್ಮ ಬಳಿ ಲಭ್ಯವಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ೪ ಜನರಿಗೆ ಪಾಸಿಟಿವ್ ಬಂದಿದೆ. ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ ಪಾಸಿಟಿವ್ ಬಂದಿದೆ’’ ಎಂದು ಹೇಳಿದ್ದಾರೆ.
ಎಸ್ಡಿಎಂ ಕಾಲೇಜಿನ ಸುತ್ತಮುತ್ತ ನಿರ್ಬಂಧ ಹೇರಿದ್ದನ್ನು ನಾಳೆಯಿಂದ (ಡಿಸೆಂಬರ್ 2) ತೆರವು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಇದೇ ವೇಳೆ ಮಾಹಿತಿ ನೀಡಿದ್ದಾರೆ. ‘‘ಧಾರವಾಡದ ಎಸ್ಡಿಎಂ ಆಸ್ಪತ್ರೆಯ ಸುತ್ತಲಿನ ಶಾಲಾ ಕಾಲೇಜುಗಳು ಮತ್ತೆ ನಾಳೆಯಿಂದ ಆರಂಭ ಮಾಡುತ್ತೇವೆ. ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ನಿರ್ಬಂದ ಹೇರುವುದಿಲ್ಲ. ಮತ್ತು ನಿರ್ಬಂಧ ಹೇರಲು ಅವಕಾಶವೂ ಇಲ್ಲ’’ ಎಂದು ಅವರು ಹೇಳಿದ್ದಾರೆ. ಧಾರವಾಡದಲ್ಲಿ ಕೊರೊನಾ ಟೆಸ್ಟ್ ಮಾಡುತ್ತಿರುವುದರ ಕುರಿತು ಮಾತನಾಡಿರುವ ಅವರು, ‘‘ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ ೫ ಸಾವಿರ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.
ವಿಜಯನಗರ: ಆಫ್ರಿಕಾದಿಂದ ಬಂದಿದ್ದ ಇಬ್ಬರ ಆರ್ಟಿಪಿಸಿಆರ್ ವರದಿ ನೆಗೆಟಿವ್:
ಆಫ್ರಿಕಾದಿಂದ ಬಂದಿದ್ದ ಇಬ್ಬರ RTPCR ವರದಿ ನೆಗೆಟಿವ್ ಬಂದಿರುವುದರ ಬಗ್ಗೆ ಟಿವಿ9ಗೆ ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ದನರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನು ಏಳು ದಿನ ಕಳೆದ ಬಳಿಕ ಮತ್ತೆ ಟೆಸ್ಟ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ‘‘ನಿನ್ನೆ ಸಂಜೆ RTPCR ವರದಿ ನೆಗೆಟಿವ್ ಬಂದಿದೆ, ಸದ್ಯ ಇಬ್ಬರು ವ್ಯಕ್ತಿಗಳು ಕ್ವಾರಂಟೈನ್ ಅಲ್ಲಿ ಇದ್ದಾರೆ. ಇಬ್ಬರೂ ಕೂಡ ಖಾಸಗಿ ಬಸ್ನಲ್ಲಿ ಬಂದಿದ್ದು ಬಸ್ ಕೂಡಾ ಪತ್ತೆ ಹಚ್ಚಲಾಗಿದೆ’’ ಎಂದು ಅವರು ಹೇಳಿದ್ದಾರೆ. ನವೆಂಬರ್ 25ರಂದು ಆಫ್ರಿಕಾದಿಂದ ಇಬ್ಬರು ಹೊಸಪೇಟೆಗೆ ಬಂದಿದ್ದರು. ಇದೀಗ ಅವರ ವರದಿ ನೆಗೆಟಿವ್ ಆಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:
ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರೇ ವಿಲನ್, ನವಜೋಡಿಗೆ ಜೀವ ಬೆದರಿಕೆ
ಮಧ್ಯಪ್ರದೇಶದಲ್ಲಿ ಮತ್ತೊಂದು ಸೋಂಕಿನ ಆತಂಕ; ನಾಲ್ಕು ದಿನಗಳಲ್ಲಿ 48ಕಾಗೆಗಳು ಸಾವು, ವಲಸೆ ಹಕ್ಕಿಗಳ ಮೇಲೆ ನಿಗಾ
Published On - 8:49 am, Wed, 1 December 21