ಹುಬ್ಬಳ್ಳಿ: 200 ಕೋಟಿ ರೂ. ಮೌಲ್ಯದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಎನ್ನುವುದು ಕಾಂಗ್ರೆಸ್ ಪಕ್ಷದ ರಕ್ತದಲ್ಲೇ ಇದೆ. ಬೇಲೇಕೇರಿ ಕಬ್ಬಿಣದ ಅದಿರು ನಾಪತ್ತೆ ಪ್ರಕರಣದಿಂದ ಮತ್ತೆ ಇದು ಸಾಬೀತಾಗಿದೆ ಎಂದಿದ್ದಾರೆ.
200 ಕೋಟಿ ರೂಪಾಯಿ ಮೌಲ್ಯದ 39,700 ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ಚೀನಾಕ್ಕೆ ರಫ್ತು ಮಾಡಿದ್ದ ಪ್ರಕರಣವನ್ನು ಸಿಬಿಐ ಭೇದಿಸಿದೆ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮತ್ತು ಇಬ್ಬರು ಸಹಚರರನ್ನು ಬಂಧಿಸಲು ಆದೇಶಿಸಿದ ಜನಪ್ರತಿನಿಧಿ ನ್ಯಾಯಾಲಯ ನ್ಯಾಯವನ್ನು ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹೀಗಿರುವಾಗ ಆ ಪಕ್ಷದ ಉಳಿದ ನಾಯಕರಲ್ಲಿ ಪ್ರಾಮಾಣಿಕತೆಯನ್ನು ಅಪೇಕ್ಷಿಸಲು ಸಾಧ್ಯವೇ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಇನ್ ಜೈಲ್: ಶಾಸಕ ಸ್ಥಾನ ಅನರ್ಹ ಭೀತಿ!
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡುವ ಮೂಲಕ ಭ್ರಷ್ಟ ಸರ್ಕಾರದಿಂದ ಜನರನ್ನು ಮುಕ್ತಿಗೊಳಿಸಲಿ ಎಂದು ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.
ಏನಿದು ಪ್ರಕರಣ?:
2010ರಲ್ಲಿ ನಡೆದ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಅಪರಾಧಿ ಎಂದು ಕೋರ್ಟ್ ಘೋಷಿಸಿದೆ. ಈ ಪ್ರಕರಣದಲ್ಲಿ ನಾಳೆಗೆ ಶಿಕ್ಷೆಯ ಪ್ರಮಾಣವನ್ನೂ ಕಾಯ್ದಿರಿಸಲಾಗಿದೆ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಕೋರ್ಟ್‌ನಿಂದ ಸೂಚನೆ ನೀಡಲಾಗಿದೆ. 6 ಪ್ರಕರಣಗಳ ಬಳಿಕ ಇಂದು ಅಂತಿಮ ಆದೇಶ ಹೊರಡಿಸಲಾಗಿದೆ. ಸಿಬಿಐನಿಂದ ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಕುರಿತು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ನ್ಯಾಯಾಧೀಶರು ಇಂದು ತೀರ್ಪು ಪ್ರಕಟಿಸಿದ್ದಾರೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ