
ಧಾರವಾಡ, ಮಾರ್ಚ್ 03: ಹೋಳಿ ಹಬ್ಬದ ಆಚರಣೆ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗೋದು ಎಲ್ಲರಿಗೂ ಗೊತ್ತಿರುವ ವಿಚಾರ. ಧಾರವಾಡದ ಮುಳಮುತ್ತಲ ಗ್ರಾಮ ಗ್ರಾಮದಲ್ಲಿಯೂ ವಿಭಿನ್ನ ರೀತಿಯಲ್ಲಿ ಬಣ್ಣದ ಹಬ್ಬದ ಆಚರಣೆ ನಡೆಯುತ್ತೆ. ಬಣ್ಣದೋಕುಳಿಯ ಬದಲಾಗಿ ತಮ್ಮೂರಿನ ಕಾಮದೇವನ ಮೂರ್ತಿಯನ್ನು ಯಾರಾದರೂ ಕದ್ದೊಯ್ಯಬಾರದು ಎಂದು ಗ್ರಾಮಸ್ಥರೆಲ್ಲ ತಮ್ಮ ತಮ್ಮ ಮನೆಯಲ್ಲಿರೋ ಆಯುಧಗಳೊಂದಿಗೆ ಕಾಮಣ್ಣನ ರಕ್ಷಣೆಗೆ ನಿಲ್ಲೋದು ಇಲ್ಲಿಯ ವಿಶೇಷ.
ಗ್ರಾಮದ ಗರಡಿ ಮನೆಯ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರ ಮಂಟಪವನ್ನ ನಿರ್ಮಿಸಿ, ಸುತ್ತಲೂ ಕಟ್ಟಿಗೆಯ ಭದ್ರತೆಯೊಂದಿಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯನ್ನು ಯಾರಾದರೂ ಕದಿಯಬಾಹುದೆಂಬ ಕಾರಣಕ್ಕೆ ಗ್ರಾಮಸ್ಥರು ಬಹಳ ಹಿಂದಿನಿಂದಲೂ ಇಂತಹ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಊರ ಜನರೆಲ್ಲ ಆಯುಧಗಳನ್ನು ಹಿಡಿದು ಈ ರೀತಿ ಕಾವಲು ನಿಲ್ಲುವುದರ ಹಿಂದೆ ಐತಿಹಾಸಿಕ ಕತೆಯೊಂದಿದೆ.
ಇದನ್ನೂ ಓದಿ: ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ; ಇದು ಯೋಗದಿಂದ ಬದುಕೇ ಬದಲಾದ ಕಥೆ
ಹಲವಾರು ವರ್ಷಗಳ ಹಿಂದೆ ಗ್ರಾಮದ ಬುಡ್ಡಪ್ಪ ಕಣವಿ ಅನ್ನೋ ವ್ಯಕ್ತಿ ಅತ್ತಿಗೆಗೆ ಕುಡಿಯಲು ನೀರು ಕೇಳುತ್ತಾನಂತೆ. ಆಕೆ ನೀನು ಅದೇನು ದೊಡ್ಡ ಕಾರ್ಯ ಮಾಡಿ ಬಂದಿದ್ದೀಯಾ ಅಂತಾ ಹೀಯಾಳಿಸುತ್ತಾಳಂತೆ. ಇದರಿಂದ ನೊಂದ ಬುಡ್ಡಪ್ಪ ಪಕ್ಕದ ಅಣ್ಣಿಗೇರಿ ಗ್ರಾಮಕ್ಕೆ ಹೋಗಿ, ಅಲ್ಲಿನ ರಾಜರು ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಯ ತಲೆಯನ್ನು ಕತ್ತರಿಸಿಕೊಂಡು ತರುತ್ತಾನೆ. ಬಳಿಕ ತಾನು ಮಾಡಿದ ಸಾಧನೆಯನ್ನ ತೋರಿಸಲು ಗ್ರಾಮದ ಅಗಸಿಯಲ್ಲಿ ಮೂರ್ತಿಯನ್ನಿಟ್ಟು, ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಅಂದು ಕಾಮಣ್ಣನ ಮೂರ್ತಿಯ ತಲೆಯನ್ನು ಮರಳಿ ಪಡೆಯಲು ಆಯುಧ ಸಮೇತ ಬಂದ ಅಣ್ಣಿಗೇರಿ ಗ್ರಾಮಸ್ಥರನ್ನ ಹಿಮ್ಮೆಟ್ಟಿಸಲು ಸ್ಥಳೀಯರು ಆಯುಧಗಳೊಂದಿಗೆ ಹೋರಾಟಕ್ಕೆ ನಿಲ್ಲುತ್ತಾರೆ. ಈ ಗ್ರಾಮಸ್ಥರನ್ನ ನೋಡಿ ಇವರ ಸಹವಾಸವೇ ಬೇಡ ಅಂತಾ ಅಣ್ಣಿಗೇರಿ ಗ್ರಾಮಸ್ಥರು ಮರಳಿ ಹೋಗುತ್ತಾರಂತೆ. ಬಳಿಕ ಗ್ರಾಮದಾದ್ಯಂತ ಬುಡ್ಡಪ್ಪ ಸತ್ತ ಹಿನ್ನೆಲೆಯಲ್ಲಿ ಶೋಕಾಚರಣೆ ನಡೆಯುತ್ತೆ. ಇದೇ ಕಾರಣಕ್ಕೆ ಬಣ್ಣದೋಕುಳಿಯನ್ನೂ ನಿಷೇಧಿಸಲಾಗುತ್ತೆ. ಅಂದು ಅನಿವಾರ್ಯತೆಯಿಂದಾಗಿ ನಡೆದ ಹೋರಾಟ ಇಂದು ಆಚರಣೆಯಾಗಿ ಬದಲಾಗಿದೆ. ಈ ವಿಚಿತ್ರವನ್ನು ನೋಡಲು ಇಂದಿಗೂ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಾರೆ. ಹೀಗೆ ಬಂದವರು ಏನಾದರೂ ಬೇಡಿಕೊಂಡರೆ, ಅದು ಸಿಗುತ್ತೆ ಅನ್ನೋ ನಂಬಿಕೆಯೂ ಜನರಲ್ಲಿದೆ.
ಅಷ್ಟೇ ಅಲ್ಲ, ಆರಂಭದ ವರ್ಷಗಳಲ್ಲಿ ಹೋಳಿ ಹಬ್ಬದ ವೇಳೆಯಲ್ಲಿ ಬೇರೆ ಗ್ರಾಮದ ಯಾರಿಗೂ ಕೂಡ ಇಲ್ಲಿಗೆ ಪ್ರವೇಶವೂ ಇರಲಿಲ್ಲ. ಬೇರೆ ಯಾವುದೋ ನೆಪ ಮಾಡಿಕೊಂಡು ಬಂದು, ಮೂರ್ತಿಯನ್ನು ಕದ್ದೊಯ್ದರೆ ಹೇಗೆ ಅನ್ನೋ ಅನುಮಾನವೇ ಇದಕ್ಕೆ ಕಾರಣವಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಆ ನಿಯಮವನ್ನ ಸಡಿಲಿಸಲಾಗಿದೆ. ಆದರೆ ಅಂದು ಆರಂಭವಾದ ಕಾಮಣ್ಣನನ್ನು ಕಾಯೋ ಕೆಲಸ ಸಾಂಪ್ರದಾಯಿಕ ಆಚರಣೆಯ ರೂಪ ತಳೆದು, ಇವತ್ತಿಗೂ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.