ಧಾರವಾಡ: ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ!
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೆಲವರಿಗೆ ಅಜ್ಞಾನದ ಹುಚ್ಚು ಹಿಡಿದಂತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗ ತೋರಿಸುವ ಶಿಕ್ಷಕರೇ ತಮ್ಮ ವಿರೋಧಿಗಳ ವಿರುದ್ಧ ವಾಮಾಚಾರಕ್ಕೆ ಇಳಿದಿದ್ದಾರೆ. ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ ಮಾಡಲಾಗಿದ್ದು, ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ.
ಧಾರವಾಡ, ಡಿ.2: ಕರ್ನಾಟಕ ವಿಶ್ವವಿದ್ಯಾಲಯದ (Karnataka University Dharwad) ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ (Witchcraft) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಕುಲಪತಿಗೆ ದೂರು ನೀಡಲಾಗಿದೆ.
ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್ ಅವರು ರಜೆ ಮೇಲೆ ತೆರಳಿದ್ದರು. ಶುಕ್ರವಾರ ವಾಪಸ್ ಆಗಮಿಸಿದಾಗ ಚೇಂಬರ್‌ನ ಕೀಲಿ ತೆಗೆದಾಗ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೋಲಾರ: ವಾಮಾಚಾರಕ್ಕಾಗಿ ಸಮಾಧಿ ಅಗೆದು ಮಗುವಿನ ಶವ ಹೊರತೆಗೆದ ದುಷ್ಕರ್ಮಿಗಳು
ಟೇಬಲ್ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಅದರೊಂದಿಗೆ 3 ಲಿಂಬೆ ಹಣ್ಣು ಎಸೆಯಲಾಗಿದ್ದು, ಅರಿಷಿಣ-ಕುಂಕುಮ ಹಾಕಲಾಗಿದೆ. ಕಿಟಕಿ ಮೂಲಕ ಈ ಕೃತ್ಯ ಎಸಗಲಾಗಿದೆ. ಎರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಗಾಬರಿಯಿಂದ ಹೊರ ನಡೆದ ಡಾ. ರಮಾ, ಕುಲಪತಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ. ಅವರ ಅಳಿಯ ಇದೇ ವಿಭಾಗದಲ್ಲಿ ಉಪನ್ಯಾಸಕರಾಗಿದ್ದು, ರಮಾ ಚೇಂಬರ್ ಬಿಟ್ಟು ಕೊಡುವ ವಿಷಯವಾಗಿ ವಿದ್ಯಾರ್ಥಿಗಳ ಎದುರೇ ಮಾವ-ಅಳಿಯ ಬಂದು ತಿಕ್ಕಾಟ ನಡೆಸಿದ್ದರು. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಮತ್ತೆ ರಮಾ ವಿರುದ್ಧ ಷಡ್ಯಂತ್ರ ನಡೆಸಿರುವ ಅನುಮಾನ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ