ಖಾಸಗಿ ಆಸ್ಪತ್ರೆಗಳ ಹೊರಗೆ ದರ ಪಟ್ಟಿ ಕಡ್ಡಾಯ, ತಪ್ಪಿದರೆ ಪರವಾನಗಿ ರದ್ದತಿಗೆ ಚಿಂತನೆ: ದಿನೇಶ್ ಗುಂಡೂರಾವ್

| Updated By: ಗಣಪತಿ ಶರ್ಮ

Updated on: Feb 22, 2024 | 2:34 PM

ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸಾವಿರಾರು ರೂಪಾಯಿ ಬಿಲ್ ಮಾಡಿ ಸುಲಿಗೆ ಮಾಡುತ್ತಿವೆ ಎಂಬ ಕುರಿತು ನೂರಾರು ದೂರುಗಳು ಬಂದ ಕಾರಣ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಆಸ್ಪತ್ರೆಗಳ ಹೊರಗೆ ದರಪಟ್ಟಿ ಪ್ರಕಟಿಸುವುದು ಕಡ್ಡಾಯ ಎಂದಿರುವ ಅವರು, ತಪ್ಪಿದರೆ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸುವ, ಸೀಜ್ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳ ಹೊರಗೆ ದರ ಪಟ್ಟಿ ಕಡ್ಡಾಯ, ತಪ್ಪಿದರೆ ಪರವಾನಗಿ ರದ್ದತಿಗೆ ಚಿಂತನೆ: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Follow us on

ಬೆಂಗಳೂರು, ಫೆಬ್ರವರಿ 22: ಖಾಸಗಿ ಆಸ್ಪತ್ರೆಗಳ (Private Hospitals) ಹೊರಭಾಗದಲ್ಲಿ ಇನ್ನು ದರಪಟ್ಟಿ (Price List) ಪ್ರಕಟಿಸುವುದು ಕಡ್ಡಾಯ ಮಾಡಲಾಗುವುದು. ದರ ಪಟ್ಟಿ ಪ್ರಕಟಿಸದ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸುವ ಬಗ್ಗೆ ಆಲೋಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಗುರುವಾರ ಹೇಳಿದರು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಸುಲಿಗೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಅನೇಕ ದೂರುಗಳು ಸಲ್ಲಿಕೆಯಾದ ಬೆನ್ನಲ್ಲೇ ಆರೋಗ್ಯ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಜ್ವರ, ಕೆಮ್ಮು, ನೆಗಡಿ ಎಂದು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಿದರೂ ಸಾವಿರಾರು ರೂಪಾಯಿ ಬಿಲ್ ವಸೂಲಿ ಮಾಡಲಾಗುತ್ತಿದೆ ಎಂದು ದೂರಿರುವ ಸಾರ್ವಜನಿಕರು ಆರೋಗ್ಯ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ದೂರು ನೀಡಿದ್ದರು. ನೂರಾರು ದೂರುಗಳು ಸಚಿವರಿಗೆ ಬಂದಿದ್ದವು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ

ಖಾಸಗಿ ಆಸ್ಪತ್ರೆಗಳ ಸುಲಿಗೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ, ಕೆಪಿಎಂಇ ಮುಖಾಂತರ ಅಂಗೀಕೃತವಾದ ಆಸ್ಪತ್ರೆಗಳು ಆವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಚಿಕಿತ್ಸಾ ದರ ಪಟ್ಟಿಯನ್ನು ಅಳವಡಿಸಬೇಕು. ಯಾವ್ಯಾವ ಚಿಕಿತ್ಸೆಗಳಿಗೆ ಎಷ್ಟು ದರ ಎಂಬ ಪಟ್ಟಿಯನ್ನು ಅಳವಡಿಸಬೇಕು ಎಂದು ಸೂಚಿಸಿದೆ.

ಆದೇಶ ಪಾಲನೆ ಮಾಡದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಸೀಜ್ ಮಾಡುವ ಬಗ್ಗೆಯೂ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಯಾವ ಚಿಕಿತ್ಸೆಗೆ ಎಷ್ಟು ದರ ಎಂಬುದು ನಿಗದಿಯಾಗಿದೆ. ಅದರ ಬಗ್ಗೆ ಆಸ್ಪತ್ರೆಯ ಅವರಣದಲ್ಲಿ ಸಾರ್ವಜನಿಕರಿಗೆ ತೊರುವ ರೀತಿಯಲ್ಲಿ ಬೋರ್ಡ್ ಹಾಕಬೇಕು ಎಂದು ನಿರ್ದೇಶನ ನೀಡಲಾಗಿದೆ.

ಇದೀಗ ಆಸ್ಪತ್ರೆಗಳ ಹೊರಗೆ ಬೋರ್ಡ್​ ಹಾಕುವ ಆದೇಶ ಅನುಷ್ಠಾನ ವಿಚಾರವಾಗಿ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಖಡಕ್ ಸೂಚನೆ ನೀಡಿದೆ. ಪರಿಶೀಲನೆ ನಡೆಸಿ ವರದಿ ನೀಡುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿಯೂ ‘ಬಾಂಬೆ ಮಿಠಾಯಿ’ ನಿಷೇಧಕ್ಕೆ ಮುಂದಾದ ಸರ್ಕಾರ

ಈ ಹಿಂದೆಯೂ ಎಚ್ಚರಿಕೆ ನೀಡಿದ್ದ ಆರೋಗ್ಯ ಸಚಿವರು

ಕೊರೊನಾ ಸಾಂಕ್ರಾಮಿಕದ ಬಳಿಕ ಎಚ್ಚೆತ್ತುಕೊಂಡಿರುವ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚ ಸೇರಿದಂತೆ ಇತರೆ ಚಿಕಿತ್ಸಾ ವೆಚ್ಚಗಳನ್ನು ಏರಿಕೆ ಮಾಡಿ ಸುಲಿಗೆ ಮಾಡುತ್ತಿವೆ ಎಂಬ ದೂರುಗಳು ಈ ಹಿಂದೆಯೂ ಕೇಳಿಬಂದಿದ್ದವು. ಈ ವಿಚಾರವಾಗಿ 2023ರ ನವೆಂಬರ್​​ನಲ್ಲಿ ಎಚ್ಚರಿಕೆ ನೀಡಿದ್ದ ಆರೋಗ್ಯ ಸಚಿವರು, ಕೆಪಿಎಂಇ ಮುಖಾಂತರ ಅಂಗೀಕೃತಗೊಂಡ ಆಸ್ಪತ್ರೆಗಳು ಅವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಚಿಕಿತ್ಸಾ ದರ ಪಟ್ಟಿಯನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ