Ramesh Jarkiholi CD Controversy: ದೂರು ಹಿಂಪಡೆಯಲು ಕುಮಾರಸ್ವಾಮಿ ಕಾರಣ: ದಿನೇಶ್​ ಕಲ್ಲಹಳ್ಳಿ ನೇರ ಆರೋಪ

Dinesh Kallahalli Reaction after Decided to case withdraw: ಮಾಹಿತಿ ನೀಡಿದ ನನ್ನ ವಿರುದ್ಧವೇ ಎಚ್​ಡಿಕೆ ಆರೋಪ ಮಾಡಿದ್ದರು. ಹೀಗಾಗಿ ಬೇಸರವಾಗಿ ನಾನು ದೂರು ವಾಪಸ್ ಪಡೆಯುತ್ತಿದ್ದೇನೆ’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

  • TV9 Web Team
  • Published On - 15:16 PM, 7 Mar 2021
Ramesh Jarkiholi CD Controversy: ದೂರು ಹಿಂಪಡೆಯಲು ಕುಮಾರಸ್ವಾಮಿ ಕಾರಣ: ದಿನೇಶ್​ ಕಲ್ಲಹಳ್ಳಿ ನೇರ ಆರೋಪ
ದೂರು ಹಿಂಪಡೆಯಲಿ ನಿರ್ಧರಿಸಿದ ದಿನೇಶ್ ಕಲ್ಲಹಳ್ಳಿ ಹೇಳಿದ್ದೇನು?

ಬೆಂಗಳೂರು: ‘ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೂರು ನೀಡಿದವರು ₹5 ಕೋಟಿಗೆ ಡೀಲ್ ಆಗಿದ್ದಾರೆ ಎಂದಿದ್ದರು. ಹೆಚ್‌ಡಿಕೆ ಹೇಳಿಕೆಯಿಂದ ರಾಜ್ಯದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಮಾಹಿತಿ ನೀಡಿದ ನನ್ನ ವಿರುದ್ಧವೇ ಎಚ್​ಡಿಕೆ ಆರೋಪ ಮಾಡಿದ್ದರು. ನನಗೆ ಸಿಕ್ಕ ಮಾಹಿತಿ ಆಧರಿಸಿ ನಾನು ದೂರು ಕೊಟ್ಟಿದ್ದೇನೆ. ತನಿಖೆ ಮಾಡಿ ಅಂತ ನಾನು ಹೇಳಿದ್ದೆ. ಅದನ್ನು ಬಿಟ್ಟು ಇನ್ನೇನು ಮಾಡಿ ಅಂತ ಹೇಳಿದ್ದೆ. ಇಂಥ ಸಂದರ್ಭದಲ್ಲಿ ನನ್ನ ಹೋರಾಟ ಹತ್ತಿಕ್ಕುವ ಉದ್ದೇಶ. ಕುಮಾರಣ್ಣನ ಹೇಳಿಕೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ. ಹೀಗಾಗಿ ಬೇಸರವಾಗಿ ನಾನು ದೂರು ವಾಪಸ್ ಪಡೆಯುತ್ತಿದ್ದೇನೆ’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ದೂರು ವಾಪಸ್ಸಿಗೆ ನಿರ್ಧರಿಸಿದ ದಿನೇಶ್ ಕಲ್ಲಹಳ್ಳಿ ಪತ್ರದಲ್ಲಿ ಏನಿದೆ?
ದೂರು ಕೊಟ್ಟವರನ್ನೇ ತಪ್ಪಿತಸ್ಥರಂತೆ ನೋಡ್ತಿದ್ದಾರೆ. ಎಚ್​ಡಿಕೆ ಆರೋಪ ಆಧಾರರಹಿತ. ಸಂತ್ರಸ್ತೆ ಮತ್ತು ಮಾಹಿತಿದಾರರನ್ನು ಟಾರ್ಗೆಟ್ ಮಾಡ್ತಿರೋದು ಸರಿಯಲ್ಲ. ಹೀಗಾಗಿ ದೂರು ಹಿಂಪಡೆಯುತ್ತಿದ್ದೇನೆ.

ದಿನೇಶ್ ಕಲ್ಲಹಳ್ಳಿ ಪರ ವಕೀಲರು ಹೇಳಿದ್ದೇನು?
ಮಾರ್ಚ್ 2 ರಂದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ಪರ ವಕೀಲ ಕುಮಾರ್ ಪಾಟೀಲ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಕೀಲ ಕುಮಾರ್ ಪಾಟೀಲ್, ‘ದಿನೇಶ ಕಲ್ಲಹಳ್ಳಿ ಮೇಲೆ ಒತ್ತಡ ಇಲ್ಲ. ಕಾಣದ ಕೈ ಒತ್ತಡ ಇಲ್ಲ. ಕ್ರಿಮಿನಲ್ ಪ್ರಕರಣ ಇದೆ. ಹೆಚ್ಚಿನ ಮಾಹಿತಿಗಾಗಿ ದೂರುದಾರರು ಬರಬೇಕು ಅಂದಿದ್ದಾರೆ. ಕಲ್ಲಹಳ್ಳಿ ಬಂದ ಮೇಲೆ ಪ್ರೊಸೀಜರ್ ಪ್ರಕಾರ ವಿತ್​ಡ್ರಾ ಆಗಲಿದೆ’ ಎಂದಿದ್ದಾರೆ.

ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯೆ
ದೂರು ಹಿಂಪಡೆಯುವ ನಿರ್ಧಾರದ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ‘ಪ್ರಕರಣದಲ್ಲಿ 5 ಕೋಟಿ ಡೀಲ್ ಆಗಿದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅವರು ನನ್ನ ಹೆಸರು ಹೇಳಿಲ್ಲ ನಿಜ. ಆದರೆ ನಾನೇ ಅಂತ ತಿಳಿಯವಂತೆ ನನ್ನ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಜನರು ನನ್ನನ್ನು ಸಂಶಯದಿಂದ ನೋಡುವಂತೆ ಆಗಿದೆ. ನನ್ನನ್ನು ಮನೆಯವರು, ಹಿತೈಷಿಗಳು ಸಂಶಯದಿಂದ ನೋಡ್ತಿದ್ದಾರೆ. ₹ 5 ಕೋಟಿ ತಗೊಂಡಿದ್ದಾನೆ ಅನ್ನೋ ಆರೋಪದಿಂದ ನಾನು ಮೊದಲು ಹೊರಬರಬೇಕಿದೆ’ ಎಂದು ಹೇಳಿದರು.

‘ನಾನು ಆರಂಭಿಸಿದ ಹಲವು ಹೋರಾಟಗಳ ತನಿಖೆಯನ್ನು ರಾಜ್ಯ, ರಾಷ್ಟ್ರ ಮಟ್ಟದ ತನಿಖಾ ಏಜೆನ್ಸಿಗಗಳು ನಡೆಸುತ್ತಿವೆ. ಅಂಥದ್ದರಲ್ಲಿ ಮಾಹಿತಿ ನೀಡಿದ ನನ್ನ ಬಾಯಿ ಮುಚ್ಚಿಸುವ ಕೆಲಸವನ್ನು ಕುಮಾರಣ್ಣ ಮಾಡಿದ್ದಾರೆ. ನನ್ನ ಬಳಿಯಿದ್ದ ಮಾಹಿತಿ ಆಧರಿಸಿ ದೂರು ನೀಡಿದ್ದೆ. ತನಿಖೆ ಮಾಡಿ ಎಂದು ಪೊಲೀಸರನ್ನು ವಿನಂತಿಸಿದ್ದೆ. ಇಂಥ ಸಂದರ್ಭದಲ್ಲಿ ನನ್ನ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಹೊರಬಿದ್ದ ಹೇಳಕೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ’ ಎಂದು ದಿನೇಶ್ ಸ್ಪಷ್ಟಪಡಿಸಿದರು.

‘ದೂರು ಹಿಂಪಡೆಯುವ ಮೂಲಕ ನನಗೆ ನಾನು ಕ್ಲೀನ್ ಚಿಟ್ ಕೊಟ್ಟುಕೊಳ್ತಿಲ್ಲ. ನಾನು ಮೊದಲು ಕುಮಾರಣ್ಣನ ಆರೋಪದಿಂದ ಹೊರಗೆಬರಬೇಕು. ಅಮೇಲೆ ಹೋರಾಟ ಮಾಡ್ತೀನಿ. ಜನರು ನನ್ನನ್ನು ಅನುಮಾನದಿಂದ ನೋಡ್ತಿದ್ದಾರೆ. ಇದು ತಪ್ಪಬೇಕು. ರಮೇಶ್​ ಜಾರಕಿಹೊಳಿ ಸಚಿವ ಸ್ಥಾನ ಹೋಗಲಿ ಅನ್ನೋದು ದೂರು ನೀಡಿದಾಗ ನನ್ನ ಉದ್ದೇಶ ಆಗಿರಲಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಅನ್ನೋದೊಂದೇ ನನಗೆ ಉದ್ದೇಶವಾಗಿತ್ತು. ಸಚಿವ ಸ್ಥಾನದಿಂದ ಕೆಳಗಿಳಿಸೋದೇ ನನ್ನ ನನ್ನ ಉದ್ದೇಶವಾಗಿದ್ರೆ ರಮೇಶ್ ಜಾರಕಿಹೊಳಿ ಜೊತೆಗೆ ಡೀಲ್ ಮಾಡಿಕೊಳ್ತಿದ್ದೆ. ‘ನಾನು ದೊಡ್ಡವರ ಜೊತೆಗೆ ಇದ್ದೀನಿ’ ಅಂತ ಕುಮಾರಣ್ಣ ಹೇಳಿದ್ದಾರೆ. ಅದನ್ನು ಅವರು ಪ್ರೂವ್ ಮಾಡಲಿ ಎಂದು ದಿನೇಶ್ ಸವಾಲು ಹಾಕಿದರು.

ನನಗೂ ಆತ್ಮಸಾಕ್ಷಿ ಇದೆ: ದಿನೇಶ್ ಕಲ್ಲಹಳ್ಳಿ
ನನಗೂ ಆತ್ಮಸಾಕ್ಷಿಯಿದೆ. ನಾನು ಕೊಟ್ಟರುವುದು ಬರೀ ದೂರು, ತನಿಖೆ ಮಾಡಿ ಸತ್ಯ ಇದ್ದರೆ ಸತ್ಯ ಎನ್ನಿ. ಸುಳ್ಳಿದ್ದರೆ ಸುಳ್ಳು ಎನ್ನಿ. ನಾನು ಯಾರಿಗೂ ಮಾನಹಾನಿ ಆಗುವಂತೆ ಮಾಡಿಲ್ಲ. ಕಾನೂನು ಹೋರಾಟ ಮಾಡಲು ನಾನು ಸಹ ಸಜ್ಜಾಗಿದ್ದೇನೆ. ದಾಖಲೆಗಳನ್ನಿಟ್ಟುಕೊಂಡೇ ಹೋರಾಟಕ್ಕೆ ಮುಂದಾಗಿದ್ದೇನೆ. ಆರೋಪ ನಿಜವೋ-ಸುಳ್ಳೋ ಎಂಬುದನ್ನು ತನಿಖಾಧಿಕಾರಿಗಳು ತನಿಖೆಯ ನಂತರ ನಿರ್ಧರಿಸಬೇಕು’ ಎಂದು ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದರು.

‘ದೇಶದ ಕಾನೂನಿನ ಪ್ರಕಾರ ನನಗೆ ತಿಳಿದ ಮಾಹಿತಿ ನೀಡಿದ್ದೆ. ನಾನು ದೂರು ಕೊಟ್ಟರೆ ತನಿಖೆ ಮಾಡಬೇಕೆಂದಿಲ್ಲ. ಕುಮಾರಣ್ಣನ 5 ಕೋಟಿ ಆರೋಪದಿಂದ ನಾನು ಮುಕ್ತನಾಗಬೇಕು. ನನಗೂ ಈ ಆರೋಪದಿಂದ ಮಾನಹಾನಿಯಾಗಿದೆ. ನನ್ನ ಗೆಳೆಯರು ನನ್ನನ್ನು 5 ಕೋಟಿ ಆರೋಪದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನನಗೂ ಆತ್ಮಸಾಕ್ಷಿ ಇದೆ. ನನ್ನ ಗೆಳೆಯರೇ ನನಗೆ ಛೀ ಥೂ ಎಂದು ಉಗಿಯುತ್ತಿದ್ದಾರೆ. ಹೆಚ್‌ಡಿಕೆ ಹೇಳಿಕೆಯಿಂದ ಓಡಾಡುವುದಕ್ಕೂ ರಮೇಶ್‌ಗೆ ಸಚಿವ ಸ್ಥಾನ ಹೋಗಬೇಕೆಂದು ಹೋರಾಡಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡಿದ್ದೇನೆ. ನನ್ನ ವಿರುದ್ಧ ಆರೋಪ ಬಂದಿರುವುದರಿಂದ ದೂರು ವಾಪಸ್ ಪಡೆಯುತ್ತಿದ್ದೇನೆ. ಈ ಬಗ್ಗೆ ಸಂತ್ರಸ್ತೆಯ ಸಂಬಂಧಿಕರಿಗೂ ನಾನು ತಿಳಿಸುತ್ತೇನೆ’ ಎಂದು ದಿನೇಶ್ ನುಡಿದರು.

ಎಚ್​ಡಿಕೆ ವಿರುದ್ಧ ದೂರು: ವಕೀಲರ ಜೊತೆಗೆ ಸಮಾಲೋಚನೆ ನಂತರ ನಿರ್ಧಾರ ಎಂದ ದಿನೇಶ್
‘ಕುಮಾರಸ್ವಾಮಿ ವಿರುದ್ಧ ದೂರು ಕೊಡುತ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಕಲ್ಲಹಳ್ಳಿ, ‘ಕಾನೂನು ತಜ್ಞರ ಜತೆ ಚರ್ಚೆ ಮಾಡಿ ಮುಂದುವರೆಯುತ್ತೇನೆ’ ಎಂದು ಉತ್ತರಿಸಿದರು. ‘ಈ ಪ್ರಕರಣದಿಂದ ಹಿಂಜರಿದಿಲ್ಲ. ನನ್ನ ಮೇಲೆ ಬಂದ ಆರೋಪದಿಂದ ಮುಕ್ತನಾಗಬೇಕು ಎಂದು ದೂರು ಹಿಂಪಡೆದಿದ್ದೇನೆ. ನಾನು ದೂರು ಹಿಂಪಡೆದರೂ ರಮೇಶ್ ಜಾರಕಿಹೊಳಿ ವಿರುದ್ಧ ತನಿಖೆ ಮಾಡಬಹುದು. ಯುವತಿಯನ್ನು ಈ ದೂರಿನ ಮೂಲಕ ನಾನು ಬಲಿ ಮಾಡಿಲ್ಲ’ ಎಂದು ಹೇಳಿದರು.

‘ನಾನು ದೂರು ನೀಡಿದ ತಕ್ಷಣ ಮಾನಹಾನಿಯಾಗುತ್ತಾ? ನಾನು ಅಪರಾಧದ ಬಗ್ಗೆ ಮಾಹಿತಿ ನೀಡುವುದು ತಪ್ಪಾ? ನಾನು ಯಾವುದೇ CD ಕೂಡ ಬಿಡುಗಡೆ ಮಾಡಿಲ್ಲ. ನಾನು ಕೇವಲ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾನು ಯಾರ ಮಾನಹಾನಿಯಾಗುವ ಕೆಲಸ ಮಾಡಿಲ್ಲ. ಕಾನೂನು ಹೋರಾಟಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಾನು ಕೂಡ ಕಾನೂನು ಹೋರಾಟ ಮುಂದುವರಿಸುತ್ತೇನೆ. ಯಾರೂ ದೂರುದಾರನನ್ನು ಟಾರ್ಗೆಟ್ ಮಾಡಬಾರದು’ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದರು.

ಎಚ್​ಡಿಕೆ ಹೇಳಿದ್ದೇನು?
ಈ ಪ್ರಕರಣದಲ್ಲಿ 5 ಕೋಟಿ ಪರಭಾರೆ ಆಗಿದೆ ಅಂತ ನನಗೆ ಮಾಹಿತಿಯಿದೆ. ಈ ರೀತಿಯ ಬ್ಲಾಕ್​ಮೇಲ್ ಮಾಡುವ ವ್ಯಕ್ತಿಗಳನ್ನು ಸರ್ಕಾರ ಬಂಧಿಸಬೇಕು. ಆ ಮಾಹಿತಿಯನ್ನು ಸರ್ಕಾರವೇ ತಗೊಂಡು ಜನರ ಮುಂದೆ ಇಟ್ಟುಬಿಡಲಿ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದನ್ನೂ ಓದಿ: ದಿನೇಶ್ ಕಲ್ಲಹಳ್ಳಿ ಅರ್ಜಿ: ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಪೊಲೀಸರ ನಿರ್ಧಾರ

ಇದನ್ನೂ ಓದಿ: Ramesh Jarkiholi CD Controversy: ಸಂತ್ರಸ್ತೆಗೆ ಸಾಮಾಜಿಕ ಮಾಧ್ಯಮ, ಮಾಧ್ಯಮಗಳಿಂದ ಅನ್ಯಾಯ ಆಗ್ತಿದೆ; ದಿನೇಶ್ ಕಲ್ಲಹಳ್ಳಿ ಪರ ವಕೀಲ