ಸೆ.26ಕ್ಕೆ ಬೆಂಗಳೂರು ಬಂದ್, ಹೋರಾಟಗಾರರಿಗೆ ಡಿಕೆ ಶಿವಕುಮಾರ್ ವಿಶೇಷ ಮನವಿ..ಏನದು?
Bengaluru Bandh: ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವು ಸಂಘ-ಸಂಸ್ಥೆಗಳು ಸೇರಿಕೊಂಡು ನಾಳೆ ಅಂದರೆ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ಗೆ ಕರೆ ಕೊಟ್ಟಿವೆ. ಸುಮಾರು 100ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ರಾಜಧಾನಿ ಸಂಪೂರ್ಣ ಸ್ತಬ್ಧವಾಗಲಿದೆ. ಇನ್ನು ಈ ಬಂದ್ ಕರೆ ಕೊಟ್ಟವರಿಗೆ ಡಿಕೆ ಶಿವಕುಮಾರ್ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 25): ಕಾವೇರಿ ನದಿ ನೀರು (Cauvery Water Dispute) ವಿಚಾರವಾಗಿ ಕರ್ನಾಟಕದಲ್ಲಿ ಪ್ರತಿಭಟನೆ ಜೋರಾಗಿದೆ. ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಇನ್ನೊಂದೆಜ್ಜೆ ಮುಂದೆ ಹೋಗಿ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ಗೆ (Bengaluru Bandh) ಕರೆ ಕೊಟ್ಟಿವೆ. ಈ ಬಂದ್ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 150 ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ನಾಳೆ(ಮಂಗಳವಾರ) ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ. ಇನ್ನು ಈ ಬಂದ್ಗೆ ಕರೆ ನೀಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK SHivakumar) ಪ್ರತಿಕ್ರಿಯಿಸಿದ್ದು, ಪ್ರತಿಭಟನೆ ಮಾಡುವುದಕ್ಕೆ, ರಾಜ್ಯದ ಹಿತ ಕಾಪಾಡುವುದಕ್ಕೆ ನಾವು ಎಲ್ಲ ರೀತಿಯ ಸಹಕಾರ ಕೊಡುತ್ತೇವೆ ಎಂದಿದ್ದಾರೆ. ಆದ್ರೆ, ಯಾವುದೇ ಶಾಂತಿಯುತವಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಸೆಪ್ಟೆಂಬರ್ 25) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಪ್ರತಿಭಟನೆ ಮಾಡುವುದಕ್ಕೆ, ರಾಜ್ಯದ ಹಿತ ಕಾಪಾಡುವುದಕ್ಕೆ ನಾವು ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ನಮ್ಮ ನೆಲ, ಜಲ, ಭಾಷೆ ಎಲ್ಲರು ಉಳಿಸಿಕೊಳ್ಳಬೇಕು. ಯಾವುದೇ ಪಾರ್ಟಿ ಆದರೂ ಉಳಿಸಿಕೊಳ್ಳಬೇಕು. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ. ಆದರೆ ಎಲ್ಲರೂ ಶಾಂತಿ ಕಾಪಾಡಬೇಕು, ಜನರಿಗೆ ತೊಂದರೆ ಆಗಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ
ಹೋರಾಟ ಮಾಡಲಿ ಅದು ಅವರ ಹಕ್ಕು, ಆದರೆ ಶಾಂತಿ ಕಾಪಾಡಬೇಕು. ಯಾವ ಪಕ್ಷದವರಿಗೂ , ಸಂಘಟನೆಗಳಿಗೆ ಸೇರಿದಂತೆ ಯಾರಿಗೂ ನಾವು ತೊಂದರೆ ಕೊಡುವುದಿಲ್ಲ. ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಕೆಲಸ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪು ಅನ್ನು ಅರಿತುಕೊಳ್ಳಬೇಕು. ಟಿವಿಯವರು ಕರೆಯುತ್ತಾರೆ ಹೆಸರು ಕೊಡುತ್ತಾರೆ ಎಂದು ಮಾತಾಡಿ ನಾಳೆ ಕೋರ್ಟ್ ನಲ್ಲಿ ಸಮಸ್ಯೆ ಆಗುವುದು ಬೇಡ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಂದ್ ಮಾಡುವವರು ತೀರ್ಮಾನ ಮಾಡಲಿ ಎಂದು ಹೇಳಿದರು.
ನಾನು ಒಬ್ಬ ಮಂತ್ರಿಯಾಗಿ ಏನು ಮಾತಾಡಲು ಆಗುತ್ತಿಲ್ಲ. ನಾನು ಕೋರ್ಟ್ ಗೂ ಗೌರವ ಕೊಡಬೇಕು, ಜನರನ್ನು ಉಳಿಸಿಕೊಳ್ಳಬೇಕು. ಡೆವಿಲ್ ಅಂಡ್ ದಿ ಡೀಪ್ ಸೀ ಎನ್ನುವ ರೀತಿ ನನ್ನ ಮತ್ತು ನಮ್ಮ ಸರ್ಕಾರದ ಪರಿಸ್ಥಿತಿ ಆಗಿದೆ. ಏನೇ ಆದರೂ ನಮ್ಮ ರಾಜ್ಯದ ಹಿತ ನಾವು ಕಾಪಾಡಬೇಕು, ಇದು ನಮ್ಮ ಡ್ಯೂಟಿ ಎಂದು ಸ್ಪಷ್ಟಪಡಿಸಿದರು.
ಇನ್ನು ಸೆ.26ಕ್ಕೆ ಬೆಂಗಳೂರು ಬಂದ್ ಬಳಿಕ ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ನಿಮ್ಮ ಜೊತೆ ಇದ್ದೇವೆ. ಜನಕ್ಕೆ ತೊಂದರೆ ಆಗಬಾರದು. ಜನರು ಸಹಕಾರ ಕೊಡಲಿಲ್ಲ ಅಂದ್ರೆ ಆ ಬಂದ್ ಗೆ ಮರ್ಯಾದೆ ಹೋಗುತ್ತದೆ. ಅವರಲ್ಲೇ ಚರ್ಚೆಗಳು ಆಗುತ್ತಿವೆ. ಅದರಲ್ಲಿ ನಾವು ಮಧ್ಯೆ ಪ್ರವೇಶ ಮಾಡುವುದಿಲ್ಲ. ಕೋರ್ಟ್ ವಿಚಾರವೂ ಅವರಿಗೆ ಗೊತ್ತಿದೆ, ಅದನ್ನು ಅವರು ನೋಡಲಿ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 am, Mon, 25 September 23