AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ದಿಢೀರ್ ಡಿನ್ನರ್ ಮೀಟಿಂಗ್: ರಹಸ್ಯ ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು, ಐವರು ಸಚಿವರು ಭಾಗಿ

ಬೆಳಗಾವಿಯ ಚಳಿಗಾಲ ಅಧಿವೇಶನದ ನಡುವೆ ಕಾಂಗ್ರೆಸ್‌ನಲ್ಲಿ ಡಿನ್ನರ್ ರಾಜಕೀಯ ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯ ಬಣದ ಭೋಜನಕೂಟದ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತ ಶಾಸಕರು ಮತ್ತು ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಡಿನ್ನರ್ ಮೀಟಿಂಗ್​ನಲ್ಲಿ ಏನೇನು ಚರ್ಚೆಯಾಯ್ತು? ಶಾಸಕರು, ಸಚಿವರು ಡಿಕೆಶಿಗೆ ಏನಂದ್ರು ಎಂಬ ಮಾಹಿತಿ ಇಲ್ಲಿದೆ.

ಡಿಕೆ ಶಿವಕುಮಾರ್ ದಿಢೀರ್ ಡಿನ್ನರ್ ಮೀಟಿಂಗ್: ರಹಸ್ಯ ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು, ಐವರು ಸಚಿವರು ಭಾಗಿ
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Pramod Shastri G
| Updated By: Ganapathi Sharma|

Updated on:Dec 12, 2025 | 8:04 AM

Share

ಬೆಳಗಾವಿ, ಡಿಸೆಂಬರ್ 12: ಬೆಳಗಾವಿಯ (Belagavi) ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದ ಮಧ್ಯೆಯೂ ಆಡಳಿತಾರೂಢ ಕಾಂಗ್ರೆಸ್​​​ನಲ್ಲಿ ಡಿನ್ನರ್ ರಾಜಕೀಯ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಆಪ್ತರು ನಡೆಸಿದ ಡಿನ್ನರ್ ಸಭೆಯ ಬೆನ್ನಲ್ಲೇ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗುರುವಾರ ರಾತ್ರಿ ಆಪ್ತರಿಗಾಗಿ ವಿಶೇಷ ಡಿನ್ನರ್ ಮೀಟಿಂಗ್ ಆಯೋಜಿಸಿದ್ದಾರೆ. ಬೆಳಗಾವಿ ಹೊರವಲಯದಲ್ಲಿರುವ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಡಿನ್ನರ್ ಸಭೆಯಲ್ಲಿ ಐವರು ಸಚಿವರು ಸೇರಿ 30ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದಾರೆ. ಸಚಿವರಾದ ಎಂ.ಸಿ. ಸುಧಾಕರ್, ಮಂಕಾಳು ವೈದ್ಯ, ಕೆ.ಹೆಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಅನೇಕ ಶಾಸಕರು ಸಭೆಗೆ ಹಾಜರಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಡಿನ್ನರ್ ಮೀಟಿಂಗ್​ಗೆ ಡಿಸಿಎಂ ಆಪ್ತ ಹಾಗೂ ಖ್ಯಾತ ಮೈನಿಂಗ್ ಉದ್ಯಮಿ ದೊಡ್ಡಣ್ಣವರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರ ಆತಿಥ್ಯದಲ್ಲಿ ಸಭೆ ಜರುಗಿದೆ. ಜೊತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸಭೆಯ ಸಂಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ನಿನ್ನೆ ಬೆಳಗ್ಗೆಯೇ ಬೆಳಗಾವಿಗೆ ಆಗಮಿಸಿ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಿದ್ದರೆಂದು ತಿಳಿದು ಬಂದಿದೆ.

ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದ ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅವರ ಬಣದ ಯಾವೊಬ್ಬ ಶಾಕರೂ ಭಾಗವಹಿಸಿರಲಿಲ್ಲ. ಇದೀಗ ಡಿಸಿಎಂ ಬಣ ಪ್ರತ್ಯೇಕ ಡಿನ್ನರ್ ಮೀಟಿಂಗ್ ನಡೆಸಿರುವುದು ಕುತೂಹಲಕ್ಕೆ ಕಾರಣವಾಗದೆ.

ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್​ನಲ್ಲಿ ಯಾರೆಲ್ಲ ಭಾಗಿ?

ಡಿಕೆ ಶಿವಕುಮಾರ್ ಅವರ ಡಿನ್ನರ್ ಮೀಟಿಂಗ್‌ನಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ಶರಣ ಪ್ರಕಾಶ್ ಪಾಟೀಲ್, ಸಚಿವ ಎಂ.ಸಿ.ಸುಧಾಕರ್, ಸಚಿವ ಮಂಕಾಳು ವೈದ್ಯ, ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್, ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್, ಶೃಂಗೇರಿ ಶಾಸಕ ಟಿ,ಡಿ.ರಾಜೇಗೌಡ, ಪುಲಕೇಶಿನಗರ ಶಾಸಕ ಎ.ಸಿ.ಶ್ರೀನಿವಾಸ್, ಮಾಲೂರು ಶಾಸಕ ಕೆ.ಎನ್.ನಂಜೇಗೌಡ, ಆನೇಕಲ್ ಶಾಸಕ ಆನೇಕಲ್ ಶಿವಣ್ಣ, ಕೋಲಾರ ಶಾಸಕ ಕೊತ್ತನೂರು ಮಂಜುನಾಥ್, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಇದಲ್ಲದೇ ಬಿಜೆಪಿ ಉಚ್ಚಾಟಿತ ಶಾಸಕ ಎಸ್‌.ಟಿ ಸೋಮಶೇಖರ್ ಕೂಡ ಭಾಗಿಯಾಗಿದ್ದಾರೆ. ಇನ್ನು ಬಿಜೆಪಿಯ ಉಚ್ಚಾಟಿತ ಮತ್ತೊಬ್ಬ ಶಾಸಕರಾದ ಶಿವರಾಮ್ ಹೆಬ್ಬಾರ್ ಮೊದಲೇ ಬಂದು ವಾಪಸ್ ಆದರು ಎಂದು ತಿಳಿದುಂಬದಿದೆ.

ಡಿಕೆಶಿ ಡಿನ್ನರ್ ಮೀಟಿಂಗ್​ನಲ್ಲಿ ಚರ್ಚೆಯಾಗಿದ್ದೇನು?

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆಯೇ ಡಿಕೆಶಿ ಕರೆದಿದ್ದ ಡಿನ್ನರ್ ಮೀಟಿಂಗ್‌ನಲ್ಲಿ ಹೆಚ್ಚು ಚರ್ಚೆಯಾಗಿದೆ. ಯತೀಂದ್ರಗೆ ನೋಟೀಸ್ ಕೊಡಿ ಎಂದು ಕೆಲ ಶಾಸಕರು ಡಿಕೆಶಿಗೆ ಒತ್ತಡ ಹಾಕಿದ್ದಾರೆ. ಈ ವೇಳೆ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಡುತ್ತೇನೆ, ಕಾಯಿರಿ ಎಂದು ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮುಂದಿನ ವಾರ ಡಿಕೆಶಿ ಅವರನ್ನು ದೆಹಲಿಗೆ ಕರೆದಿರುವ ಬಗ್ಗೆ ಕೂಡ ಚರ್ಚೆಯಾಗಿದೆ. ಸಿಎಂ ಬದಲಾವಣೆ ವಿಚಾರ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿಗೆ ಹೋಗುತ್ತೇವೆ ಎಂದು ಕೆಲವು ಶಾಸಕರು ಡಿಕೆ ಶಿವಕುಮಾರ್‌ಗೆ ತಿಳಿಸಿದ್ದಾರೆ. ‘ನಿಮಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಲೇಬೇಕು’. ‘ಈ ಬಗ್ಗೆ ಹೈಕಮಾಂಡ್‌ಗೆ ಮನವಿ ಮಾಡ್ಕೊಳ್ಳುತ್ತೇವೆ’ ಹೀಗಂತ ಕೆಲ ಶಾಸಕರು ಡಿಕೆಶಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಾವಿಬ್ರೂ ಬ್ರದರ್ಸ್’ ಬಾಯ್ಮಾತಿಗಷ್ಟೇ ಸೀಮಿತವಾಯ್ತೇ?

ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಾವಿಬ್ಬರೂ ಬ್ರದರ್ಸ್ ಇದ್ದಹಾಗೆ. ಹೈಕಮಾಂಡ್ ಹೇಳಿದಕ್ಕೆ ನಾವಿಬ್ಬರೂ ಬದ್ಧ. ಅಧಿಕಾರ ಹಂಚಿಕೆ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಹೀಗಂತ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚಿಗೆ ‘ಬ್ರೇಕ್‌ಫಾಸ್ಟ್ ಮೀಟಿಂಗ್‌’ ನಂತರ ಹೇಳಿದ್ದರು. ಆದರೆ ಇದು ಬಾಯಿಮಾತಿಗಷ್ಟೇ ಸೀಮಿತವಾಯಿಯೇ ಎಂಬ ಪ್ರಶ್ನೆ ಈಗ ಮೂಡಿದೆ. ಯಾಕೆಂದರೆ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರರೇ ಸಿಎಂ ಬದಲಾವಣೆ ಇಲ್ಲ ಎಂದು ಎರಡೆರಡು ಬಾರಿ ಹೇಳಿಕೆ ನೀಡಿದ್ದಾರೆ. ಜತೆಗೆ, ಉಭಯ ಬಣಗಳಿಂದ ಪ್ರತ್ಯೇಕ ಡಿನ್ನರ್​ ಮೀಟಿಂಗ್​ಗಳು ಮತ್ತೆ ನಡೆಯುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 am, Fri, 12 December 25