ಬೆಂಗಳೂರು, ಮಾರ್ಚ್.14: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ (Dr CN Manjunath) ಅವರಿಗೆ ಬಿಜೆಪಿ ಲೋಕ ಸಭಾ ಚುನಾವಣೆ ಟಿಕೆಟ್ ನೀಡಿದೆ. ಈ ಸಂಬಂಧ ಮಾತನಾಡಿದ ಸಂಸದ ಡಿಕೆ ಸುರೇಶ್ (DK Suresh), ಬೆಂಗಳೂರು ಗ್ರಾ. ಬಿಜೆಪಿ ಅಭ್ಯರ್ಥಿ ನನಗೇನು ಅಚ್ಚರಿಯಲ್ಲ. ಡಾ.ಮಂಜುನಾಥ್ H.D.ದೇವೇಗೌಡರ ಕುಟುಂಬದ ಮತ್ತೊಂದು ಭಾಗ. JDS ಪಕ್ಷ ಸರಿಯಿಲ್ಲ ಎಂದು ಅಳಿಯ ಬಿಜೆಪಿ ಸೇರಿದ್ದಾರೆ ಎಂದರು.
ಮಂಜುನಾಥ ಅವರ ರಾಜಕೀಯ ಪ್ರವೇಶದ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರ ರಾಜಕೀಯ ಪ್ರವೇಶದ ಬಗ್ಗೆ ನಾನು ಉತ್ತರ ಹೇಳೋದು ಸಮಂಜಸ ಅಲ್ಲ. ಅವರ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡುತ್ತೇವೆ. ರಾಜಕಾರಣಿಯನ್ನು ರಾಜಕಾರಣದ ದೃಷ್ಟಿಯಿಂದ ನೋಡಬೇಕು. ಇದು ದೇವೇಗೌಡರ ಕುಟುಂಬದ ಮತ್ತೊಂದು ಭಾಗ. ದೇವೇಗೌಡರ ಕುಟುಂಬದ ಮತ್ತೊಂದು ಭಾಗ ಆಗಿರೋದ್ರಿಂದ ಅಚ್ಚರಿ ಅಭ್ಯರ್ಥಿ ಅಂತ ಅನ್ನಲ್ಲ. ದೇವೇಗೌಡರ ಕುಟುಂಬದ ಭಾಗ ಬಿಜೆಪಿಯಲ್ಲಿ ಯಾಕೆ ಸ್ಪರ್ಧೆ ಎಂಬ ಪ್ರಶ್ನೆ ಎದ್ದಿದೆ. ದೇವೇಗೌಡರ ಪಾರ್ಟಿ, ಕುಮಾರಸ್ವಾಮಿ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ತೀರ್ಮಾನ ಮಾಡಿದ್ದಾರೆ. ಅವರಿಗೆಲ್ಲಾ ದೇವರು ಒಳ್ಳೆಯದು ಮಾಡಲಿ ಎಂದು ಡಿಕೆ ಸುರೇಶ್ ತಿಳಿಸಿದರು.
ಇದನ್ನೂ ಓದಿ: ನಮ್ಮ ನೋವು ಅರ್ಥವಾದರೆ ಜೀವಂತವಾಗಿದ್ದೇವೆ, ಬೇರೆಯವರ ನೋವು ಅರ್ಥವಾದರೆ ಮನುಷ್ಯರಾಗಿದ್ದೇವೆ ಅಂತರ್ಥ: ಡಾ ಸಿಎನ್ ಮಂಜುನಾಥ್
ಮಂಜುನಾಥ್ ಅವರ ಸ್ಪರ್ಧೆ ವಿಚಾರವಾಗಿ ಹಾಸನದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾವ್ಯಾರೂ ಅವರನ್ನ ರಾಜಕೀಯಕ್ಕೆ ತರೋ ಚಿಂತೆಯೇ ಇರಲಿಲ್ಲ. ಆದ್ರೆ ಬಿಜೆಪಿ ಹೈಕಮಾಂಡ್ ನಮ್ಮ ಮೇಲೆ ಒತ್ತಡ ಹೇರಿ, ಸ್ಪರ್ಧೆ ಮಾಡುವಂತೆ ಮನವೊಲಿಸಲು ಹೇಳಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೆ ಹೈವೋಲ್ಟೇಜ್ ಅಖಾಡವಾಗಿ ಬದಲಾಗಿದೆ. ಡಿ.ಕೆ.ಸುರೇಶ್ ಅವರ ಕ್ಷೇತ್ರವಾಗಿರೋದ್ರಿಂದ ಒನ್ಸೈಡ್ ಮ್ಯಾಚ್, ಅವರೇ ಗೆಲುವಿನ ಫೆವರಿಟ್ ಅನ್ನೋ ಮಾತು ಈ ಬಾರಿ ಕೊಂಚ ಬದಲಾಗ್ತಿದೆ. ಅದಕ್ಕೆ ಕಾರಣ, ಈ ಬಾರಿ ಡಿ.ಕೆ.ಸುರೇಶ್ ವಿರುದ್ಧ ಡಾಕ್ಟರ್ ಮಂಜುನಾಥ್ ಸ್ಪರ್ಧೆ ಮಾಡ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್ ಅವರ ಹೆಸರು ಅಧಿಕೃತ ಘೋಷಣೆಗೂ ಮುನ್ನವೇ, ಬಿಜೆಪಿ ಪ್ರಚಾರ ಸಭೆಗಳ ಪೋಸ್ಟರ್ಗಳಲ್ಲಿ ಮುನಿರತ್ನ ಫೋಟೋ ಜೊತೆ ಮಂಜುನಾಥ್ ಭಾವಚಿತ್ರವೂ ಸೇರ್ಪಡೆಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:12 pm, Thu, 14 March 24