ಮೈಸೂರು, ಜು.29: ಪ್ರತಿ ವರ್ಷ ಜುಲೈ 29 ರಂದು ವಿಶ್ವ ಹುಲಿ ದಿನಾಚರಣೆ(International Tiger Day)ಯಾಗಿ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯ ರಕ್ಷಣೆಗೆ ದೇಶದಾದ್ಯಂತ ಸರ್ಕಾರಗಳು ಹಲವು ವರ್ಷಗಳಿಂದ ದೊಡ್ಡ ಅಭಿಯಾನಗಳನ್ನು ಮಾಡಿಕೊಂಡು ಬಂದಿದೆ. ಹುಲಿಗಳ ಸಂರಕ್ಷಣೆಗೆ ಕೋಟಿ ಕೋಟಿ ಹಣವನ್ನ ಸರ್ಕಾರಗಳು ಖರ್ಚು ಮಾಡುತ್ತಲೆ ಇದೆ. ಇಂತಹ ಹಲವು ಪ್ರಯತ್ನಗಳಿಂದ ಇದೀಗ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ.
ಸದ್ಯ ದೇಶದಲ್ಲಿ 3167 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದ ಹುಲಿ ರಕ್ಷಿತಾರಣ್ಯಗಳು ಹಾಗೂ ವನ್ಯಜೀವಿ ಧಾಮಗಳಲ್ಲಿ ಹುಲಿಗಳ ಗಣತಿ ನಡೆಸಲಾಗುತ್ತದೆ. ಅದೇ ರೀತಿ 2022 ರಲ್ಲಿಯೂ ಗಣತಿ ನಡೆಸಲಾಗಿತ್ತು. ಅದರಲ್ಲಿ ದೇಶದಲ್ಲಿ 3167 ಹುಲಿಗಳಿದೆಯೆಂದು ಹೇಳಲಾಗಿದೆ. 2018 ರ ಗಣತಿಯಲ್ಲಿ 2967 ಹುಲಿಗಳಿತ್ತು ಎಂದು ಹೇಳಲಾಗಿತ್ತು. ಆ ಗಣತಿ ವರದಿ ಪ್ರಕಾರ ರಾಜ್ಯದಲ್ಲಿ 524 ಹುಲಿಗಳು ಕರ್ನಾಟಕದಲ್ಲಿದ್ರೆ, 526 ಹುಲಿಗಳು ಮಧ್ಯ ಪ್ರದೇಶದಲ್ಲಿದೆ ಎಂದು ಅಂದಾಜು ಮಾಡಲಾಗಿತ್ತು.
ಇದನ್ನೂ ಓದಿ:Tiger Day: ವಿವಿಧ ಭಾಷೆಗಳಲ್ಲಿ ಹುಲಿಯನ್ನು ಏನೆಂದು ಕರೆಯುತ್ತಾರೆ ಗೊತ್ತಾ?
ಇದೀಗ ಈ ಬಾರಿಯ ಹುಲಿಗಳ ಗಣತಿ ವರದಿ ಇಂದು ಬಿಡುಗಡೆಯಾಗುವ ಸಾಧ್ಯತೆಯಿದ್ದು, ಈ ಬಾರಿ 570 ರಿಂದ 620 ಹುಲಿಗಳು ಕರ್ನಾಟಕದಲ್ಲಿದೆ ಎಂದು ಅಂದಾಜಿಸಲಾಗಿದೆ ಎಂಬ ಮಾಹಿತಿಗಳನ್ನ ವನ್ಯಜೀವಿ ತಜ್ಞರು ಹೇಳುತ್ತಿದ್ದಾರೆ. ಈ ಮೂಲಕ ಈ ಬಾರಿ ರಾಜ್ಯ ದೇಶದಲ್ಲೆ ಅತಿ ಹೆಚ್ಚು ಹುಲಿಗಳನ್ನು ಪೋಷಣೆ ಮಾಡುತ್ತಿರುವ ರಾಜ್ಯ ಎಂಬ ಪಟ್ಟ ಮತ್ತೆ ಕರ್ನಾಟಕಕ್ಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರ ಬಿಡುಗಡೆ ಮಾಡುವ ವರದಿಗೂ ಮುನ್ನವೆ ಕರ್ನಾಟಕ ಅರಣ್ಯ ಇಲಾಖೆ ಕ್ಯಾಮರಾ ಟ್ರಾಪ್ ಗಣತಿ ವರದಿ ಬಿಡುಗಡೆ ಮಾಡಿದೆ. ವರದಿಯ ಪ್ರಕಾರ 435 ಹುಲಿಗಳು ರಾಜ್ಯದಲ್ಲಿ ಇದೆ ಅಂತ ಹೇಳಲಾಗುತ್ತಿದೆ. ಅಂದರೆ 2018 ಹುಲಿ ಗಣತಿಗಿಂತ ಈ ಬಾರಿ 31 ಹುಲಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹುಲಿಯ ಹಿಕ್ಕೆ, ಕ್ಯಾಮರಾ ಟ್ರಾಪ್ ಎಲ್ಲಾ ರೀತಿಯ ವೈಜ್ಞಾನಿಕ ಗಣತಿಯ ನಂತರ ಎನ್.ಟಿ.ಸಿ.ಎ ಬಿಡುಗಡೆ ಮಾಡುವ ಗಣತಿಯ ವರದಿಯಲ್ಲಿ ಹುಲಿಯ ಸಂಖ್ಯೆ 570 ಕ್ಕಿಂತ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, 2018 ರಲ್ಲಿ ನಂಬರ್ ಒನ್ ಪಟ್ಟ ಕಳೆದುಕೊಂಡಿದ್ದ ಕರ್ನಾಟಕ. ಈ ಬಾರಿ ಮತ್ತೆ ನಂಬರ್ ಒನ್ ಪಟ್ಟ ಗಳಿಸುವ ಸಾಧ್ಯತೆ ಹೆಚ್ಚಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ