International Tiger Day 2023: ಕರ್ನಾಟಕದಲ್ಲಿವೆ 435ಹುಲಿಗಳು, ಯಾವ್ಯಾವ ಅರಣ್ಯದಲ್ಲಿ ಎಷ್ಟು? ಇಲ್ಲಿದೆ ಅಂಕಿ ಅಂಶಗಳು
ಕಾಡಿನ ಅನಭಿಷಿಕ್ತ ದೊರೆ ಹುಲಿರಾಯ ಭಾರತದ 53 ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾನೆ. ಇನ್ನು ಕರ್ನಾಟಕದಲ್ಲೂ ಹುಲಿ ಹೆಜ್ಜೆ ಪ್ರಬಲವಾಗಿಯೇ ಮೂಡಿದೆ. ಕರ್ನಾಟಕದಲ್ಲಿ ಸದ್ಯ ಹುಲಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇಂದು (ಜು.29) ಅಂತರಾಷ್ಟ್ರೀಯ ಹುಲಿ ದಿನ (International Tiger Day). ಭಾರತದಲ್ಲಿ ಐದು ದಶಕದ ಹಿಂದೆ ಶುರುವಾದ ಹುಲಿ ಯೋಜನೆ (Project Tiger) ಫಲವಾಗಿ ಭಾರತದಲ್ಲಿ ಹುಲಿ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಗಟ್ಟಿಯಾಗಿ ನೆಲೆಗೊಂಡಿದ್ದಾನೆ. ಕಳೆದ 13 ವರ್ಷಗಳಿಂದ ಜುಲೈ 29 ರಂದು ಹುಲಿ ದಿನ (Tiger Day) ಆಚರಿಸಲಾಗುತ್ತಿದೆ. ಕಾಡಿನ ಅನಭಿಷಿಕ್ತ ದೊರೆ ಹುಲಿರಾಯ ಭಾರತದ 53 ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾನೆ. ಇನ್ನು ಕರ್ನಾಟಕದಲ್ಲೂ ಹುಲಿ ಹೆಜ್ಜೆ ಪ್ರಬಲವಾಗಿಯೇ ಮೂಡಿದೆ. ಕರ್ನಾಟಕದಲ್ಲಿ ಸದ್ಯ ಹುಲಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 2022ರಲ್ಲಿ ನಡೆಸಲಾದ ಹುಲಿ ಗಣತಿ ವರದಿ ಬಿಡುಗಡೆಗೊಂಡಿದ್ದು, ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿವೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ರಾಜ್ಯದಲ್ಲಿ ಐದು ಹುಲಿ ಯೋಜನೆ ಪ್ರದೇಶಗಳಿದ್ದರೇ ಇದರಲ್ಲಿ ಎರಡು ಚಾಮರಾಜನಗ ಜಿಲ್ಲೆಯಲ್ಲೇ ಇರುವುದು ವಿಶೇಷ. ಬಂಡೀಪುರ, ನಾಗರಹೊಳೆ, ಭದ್ರಾ, ಉತ್ತರ ಕನ್ನಡದ ಅಣಶಿ-ದಾಂಡೇಲಿ, ಬಿಳಿರಂಗನಬೆಟ್ಟ ವನ್ಯಜೀವಿ ಪ್ರದೇಶವೂ ಈಗ ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಕುದುರೆಮುಖ ಹಾಗೂ ಚಾಮರಾಜನಗರ ಜಿಲ್ಲೆಯ ಮಲೈ ಮಹಾದೇಶ್ವರ ವಿಭಾಗವನ್ನೂ ಹುಲಿ ಯೋಜನೆಗೆ ಸೇರಿಸಿದರೇ ಜಿಲ್ಲೆ ಮೂರು ಹುಲಿ ಸುರಕ್ಷಿತ ಅರಣ್ಯವನ್ನು ಹೊಂದಿದಂತಾಗುತ್ತದೆ. ಕರ್ನಾಟಕದಲ್ಲಿ ಈಗ ಹುಲಿ ಯೋಜನೆ ಅರಣ್ಯ ಪ್ರದೇಶ 4 ಸಾವಿರ ಚದರ ಕಿ.ಮಿನಷ್ಟು ಇದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಹುಲಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಅಂತಾರಾಷ್ಟ್ರೀಯ ಹುಲಿ ದಿನಕ್ಕೆ ಎರಡು ದಿನಗಳ ಮುನ್ನ ರಾಷ್ಟ್ರೀಯ ಹುಲಿ ಗಣತಿ ವಿವರ ಬಿಡುಗಡೆಯಾಗಿತ್ತು. ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮಾರ್ಗಸೂಚಿಯಂತೆ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಅದರ ಭಾಗವಾಗಿ 2018ರ ನಂತರ 2022ರಲ್ಲಿ ಹುಲಿ ಗಣತಿ ಮಾಡಲಾಗಿದೆ. 2018ರಲ್ಲಿ 404 ಇದ್ದ ಹುಲಿಗಳ ಸಂಖ್ಯೆ 2022ರ ವೇಳೆಗೆ 435ಕ್ಕೆ ಹೆಚ್ಚಳವಾಗಿದೆ. ಆ ಮೂಲಕ ನಾಲ್ಕು ವರ್ಷಗಳಲ್ಲಿ 31 ಹುಲಿಗಳು ಹೆಚ್ಚಳವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶದಲ್ಲಿ ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
2006ರಲ್ಲಿ ಭಾರತದಲ್ಲಿ 1411 ಹುಲಿಗಳಿದ್ದವು. ಆಗ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 290 ಇತ್ತು. 2010 ರಲ್ಲಿ ದೇಶದಲ್ಲಿ 1706 ಹುಲಿಗಳಿದ್ದರೇ, ಕರ್ನಾಟಕದಲ್ಲಿ 300 ಹುಲಿಗಳಿದ್ದವು. 2014ರಲ್ಲಿ ದೇಶದಲ್ಲಿ 2226, ಕರ್ನಾಟಕದಲ್ಲಿ 406 ಹಾಗೂ 2018ರಲ್ಲಿ ದೇಶದಲ್ಲಿ 2967, ಕರ್ನಾಟಕದಲ್ಲಿ 524 ಹುಲಿಗಳಿದ್ದವು.
ರಾಜ್ಯದ ಯಾವ್ಯಾವ ವಿಭಾಗದಲ್ಲಿ ಎಷ್ಟು ಹುಲಿಗಳಿವೆ
ಬಂಡೀಪುರದಲ್ಲಿ143, ಭದ್ರಾದಲ್ಲಿ26, ದಾಂಡೇಲಿ ಅಣಶಿ 19, ನಾಗರಹೊಳೆ 149 ಬಿಆರ್‌ಟಿಯಲ್ಲಿ 39, ಮಡಿಕೇರಿ 14, ಭದ್ರಾವತಿ 5, ಬೆಳಗಾವಿಯಲ್ಲಿ 7, ಚಿಕ್ಕಮಗಳೂರು ವಿಭಾಗದಲ್ಲಿ 6 , ಮೈಸೂರು ವಿಭಾಗದಲ್ಲಿ 4, ಶಿವಮೊಗ್ಗ ವಿಭಾಗದಲ್ಲಿ 1 ವೀರಾಜಪೇಟೆ ವಿಭಾಗದಲ್ಲಿ 6 ಹುಲಿಗಳು ಕಂಡು ಬಂದಿವೆ.
ಹುಲಿಗಳ ಗಣತಿ ಹೇಗೆ ಮಾಡುತ್ತಾರೆ?
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಕ್ಯಾಮರಾ ಪಾಯಿಂಟ್ ಅಳವಡಿಸುವ ಮೂಲಕ ಗಣತಿ ಮಾಡಲಾಗುತ್ತದೆ. 2022ರಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 612, ಭದ್ರಾದಲ್ಲಿ 330, ಬಿಆರ್‌ಟಿಯಲ್ಲಿ 288, ಕಾಳಿಯಲ್ಲಿ 448, ನಾಗರಹೊಳೆಯಲ್ಲಿ 502, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 80, ಬೆಳಗಾವಿ ವಿಭಾಗದಲ್ಲಿ 119, ಭದ್ರಾವತಿ ವಿಭಾಗದಲ್ಲಿ 121, ಕಾವೇರಿ ವನ್ಯಜೀವಿ ಧಾಮದಲ್ಲಿ 473, ಚಿಕ್ಕಮಗಳೂರು ವನ್ಯಜೀವಿ ಅರಣ್ಯದಲ್ಲಿ 41, ಹಳಿಯಾಳದಲ್ಲಿ 106, ಕಾರವಾರ ವಿಭಾಗದಲ್ಲಿ 135 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು. ಕೊಪ್ಪ ವನ್ಯಜೀವಿಧಾಮದಲ್ಲಿ 50, ಕುದುರೆಮುಖ ವಿಭಾಗದಲ್ಲಿ 173, ಮಡಿಕೇರಿ (ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ) ವಿಭಾಗದಲ್ಲಿ 175, ಮಲೆ ಮಹದೇಶ್ವರ ಬೆಟ್ಟದಲ್ಲಿ 432, ಮೈಸೂರು ವಿಭಾಗದಲ್ಲಿ 36, ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ 182, ಶಿರಸಿ ವಿಭಾಗದಲ್ಲಿ 107, ವಿರಾಜಪೇಟೆ ವಿಭಾಗದಲ್ಲಿ 111, ಯಲ್ಲಾಪುರ ವಿಭಾಗದಲ್ಲಿ 94 ಸೇರಿ ರಾಜ್ಯದಲ್ಲಿ ಒಟ್ಟಾರೆ 4786 ಕ್ಯಾಮರಾ ಪಾಯಿಂಟ್ ಅಳವಡಿಸುವ ಮೂಲಕ ಎಷ್ಟು ಹುಲಿಗಳಿವೆ ಎಂದು ಪತ್ತೆ ಹಚ್ಚಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ