ಕೊರೊನಾ ರಿಪೋರ್ಟ್ ಇಲ್ಲವೆಂದು ಆಸ್ಪತ್ರೆಗೆ ಸೇರಿಸಿಕೊಳ್ಳದ ಸಿಬ್ಬಂದಿ, ಆಸ್ಪತ್ರೆ ಆವರಣದಲ್ಲೇ ಗಂಡು ಮಗು ಜನನ
ಕಳೆದ ರಾತ್ರಿ ಸುಮಾರು 11.30ಕ್ಕೆ ಹೆರಿಗೆಗೆಂದು ಹಾಸನ ತಾಲೂಕಿನ ಹಲಸಿನಹಳ್ಳಿಯ ಗರ್ಭಿಣಿ ಹೇಮಾ ಆಸ್ಪತ್ರೆಗೆ ಬಂದಿದ್ದರು. ಆದರೆ ಅವರ ಬಳಿ ಕೊವಿಡ್ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಗರ್ಭಿಣಿಯನ್ನು ಸೇರಿಸಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ.

ಹಾಸನ: ಕೊರೊನಾದಿಂದಾಗಿ ಸಾಮಾನ್ಯ ರೋಗಿಗಳು, ಗರ್ಭಿಣಿಯರು ಕೂಡ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರ ಅಮಾನವೀಯ ವರ್ತನೆ, ನಿರ್ಲಕ್ಷ್ಯಕ್ಕೆ ಜನ ಸಾವು ಬದುಕಿನ ನಡುವೆ ನರಳುವಂತಾಗಿದೆ. ಜಿಲ್ಲೆಯ ಸರ್ಕಾರಿ ಹೆರಿಗೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ. ಹಾಸನ ತಾಲೂಕಿನ ಶಾಂತಿ ಗ್ರಾಮದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕೊವಿಡ್ ರಿಪೋರ್ಟ್ ಇಲ್ಲದಿದಕ್ಕೆ ಗರ್ಭಿಣಿಗೆ ಅಡ್ಮಿಷನ್ ಸಿಗದೆ ಪರದಾಡಿದ್ದಾರೆ.
ಕಳೆದ ರಾತ್ರಿ ಸುಮಾರು 11.30ಕ್ಕೆ ಹೆರಿಗೆಗೆಂದು ಹಾಸನ ತಾಲೂಕಿನ ಹಲಸಿನಹಳ್ಳಿಯ ಗರ್ಭಿಣಿ ಹೇಮಾ ಆಸ್ಪತ್ರೆಗೆ ಬಂದಿದ್ದರು. ಆದರೆ ಅವರ ಬಳಿ ಕೊವಿಡ್ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಗರ್ಭಿಣಿಯನ್ನು ಸೇರಿಸಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಕೂಗಾಡಿ ನರಳಾಡಿದರು ಆಸ್ಪತ್ರೆ ಸಿಬ್ಬಂದಿ ನೆರವಿಗೆ ಬಂದಿಲ್ಲ. 24/7 ಹೆರಿಗೆ ಆಸ್ಪತ್ರೆಯಾದರೂ ಆರೋಗ್ಯ ಸಿಬ್ಬಂದಿ ಮಾನವೀಯತೆ ಮರೆತಂತೆ ವರ್ತಿಸಿದ್ದಾರೆ.
ಕೊನೆಗೆ ಆಸ್ಪತ್ರೆ ಆವರಣದಲ್ಲೇ ಹೆರಿಗೆ ನೋವಿಂದ ಗರ್ಭಿಣಿ ಒದ್ದಾಡಿ ಬಳಿಕ ಆಸ್ಪತ್ರೆ ಆವರಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು, ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಹೆರಿಗೆಯಾದ ಬಳಿಕ ಕುಟುಂಬ ಸದಸ್ಯರು ಆಂಬ್ಯುಲೆನ್ಸ್ನಲ್ಲಿ ಮಗು ಹಾಗೂ ಗರ್ಭಿಣಿಯನ್ನ ಹಾಸನಕ್ಕೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ವೈದ್ಯರ ಹಿಂದೇಟು; ವಿಜಯಪುರ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ