ದೊಡ್ಡಬಳ್ಳಾಪುರದಲ್ಲಿ ಅವೈಜ್ಞಾನಿಕ ಘನತ್ಯಾಜ್ಯ ಘಟಕ: ವಿಧಾನಸಭೆಯಲ್ಲಿ ಶಾಸಕ ವೆಂಕಟರಮಣಯ್ಯ ತೀವ್ರ ಆಕ್ಷೇಪ
ಬೆಂಗಳೂರು ವ್ಯಾಪ್ತಿಯ ಇತರ ಕಾಂಗ್ರೆಸ್ ಸದಸ್ಯರೂ ದನಿಗೂಡಿಸಿ, ಘಟಕ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿ: ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಇರುವ ಘನತ್ಯಾಜ್ಯ ಸಂಸ್ಕರಣಾ ಘಟಕದ ಅವೈಜ್ಞಾನಿಕ ಕಾರ್ಯನಿರ್ವಹಣೆ ಮತ್ತು ಅದರಿಂದ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಶಾಸಕ ಟಿ.ವೆಂಕಟರಮಣಯ್ಯ ಬುಧವಾರ ಸದನದ ಗಮನ ಸೆಳೆದರು. ಬೆಂಗಳೂರು ವ್ಯಾಪ್ತಿಯ ಇತರ ಕಾಂಗ್ರೆಸ್ ಸದಸ್ಯರೂ ದನಿಗೂಡಿಸಿ, ಘಟಕ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಈ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಹಳ್ಳಿ ಜನರ ಜೀವ ಹಿಂಡುತ್ತಿರುವ ಬೆಂಗಳೂರು ಕಸ ದೊಡ್ಡಬಳ್ಳಾಪುರ ತಾಲ್ಲೂಕಿನ ತಣ್ಣೀರನಹಳ್ಳಿ, ಮುಡ್ಲಕಾಳೇನಹಳ್ಳಿ ಹಾಗೂ ಕಾಡತಿಪ್ಪೂರು ಗ್ರಾಮಗಳ ಜನರು ಕಸ ವಿಲೇವಾರಿ ಘಟಕದಿಂದ ಅತಿಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನಿಂದ ಬಂದು ಬೀಳುವ ಲಾರಿಗಟ್ಟಲೆ ಕಸದಿಂದ ಹರಿದುಬರುವ ಕೊಳಕುರಸ ತಣ್ಣೀರನಹಳ್ಳಿ ಗ್ರಾಮದ ಜನವಸತಿ ಪ್ರದೇಶದ ಹಳ್ಳಗಳ ಮೂಲಕವೇ ಹರಿದು ಮುಂದೆ ಸಾಗುತ್ತಿದೆ. ಸತತ ದುರ್ವಾಸನೆಯಿಂದ ಹೈರಾಣಾಗಿರುವ ಇಲ್ಲಿನ ಜನರು ಕುಡಿಯುವ ನೀರೂ ಕಳೆದುಕೊಂಡಿದ್ದಾರೆ.
ವೃದ್ಧರೂ ಸೇರಿದಂತೆ ಬಹುತೇಕರ ಕಾಲುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಾಲುಗಳು ಕಪ್ಪಾಗುತ್ತಿದ್ದು, ರಕ್ತ ಸೋರುತ್ತಿವೆ. ನಾವು ಎಷ್ಟು ಬೇಡ ಎಂದರೂ ಕೇಳುತ್ತಿಲ್ಲ. ಹಣಬಲ ಇರುವ ಬೆಂಗಳೂರು ಗುತ್ತಿಗೆದಾರರು ಒಂದೇ ಸಮ ಕಸದ ಲಾರಿಗಳನ್ನು ಇಲ್ಲಿಗೆ ತರುತ್ತಲೇ ಇದ್ದಾರೆ. ಏನು ಮಾಡೋದು ಸ್ವಾಮಿ. ಬೆಂಗಳೂರು ವಿಧಾನಸಭೆಯ ಪ್ರತಿ ಅಧಿವೇಶನದಲ್ಲಿಯೂ ನಾವು ರೈತಪರ, ಗ್ರಾಮೀಣ ಬದುಕು ಸುಧಾರಿಸಬೇಕು ಎಂದೆಲ್ಲಾ ನಮ್ಮ ನಾಯಕರು ಉದ್ದುದ್ದ ಭಾಷಣ ಮಾಡುತ್ತಲೇ ಇರುತ್ತಾರೆ. ಅದೇ ವಿಧಾನಸೌಧದ ಕಸ ನಮ್ಮೂರನ್ನು ಹಾಳುತ್ತಿದೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಜನ.
ಇದನ್ನೂ ಓದಿ: ಕಸ-ಕಂಟಕ: ಹಳ್ಳಿ ಜನರ ಜೀವ ಹಿಂಡುತ್ತಿರುವ ಬೆಂಗಳೂರು ಕಸ, ಅವೈಜ್ಞಾನಿಕ ವಿಲೇವಾರಿಗೆ ಗ್ರಾಮೀಣ ಜನಜೀವನ ಅಸ್ತವ್ಯಸ್ತ ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೊಸ ಪ್ರಯೋಗ: ಕಸ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನ