Corona Virus: ಕರ್ನಾಟಕದಲ್ಲಿ ಲಾಕ್​ಡೌನ್​ ಮಾಡುವ ಚಿಂತನೆ ಇಲ್ಲ; ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ

Dr K Sudhakar: ಮಹಾರಾಷ್ಟ್ರದಲ್ಲಿ ನಿನ್ನೆ (ಫೆಬ್ರವರಿ 19) 6 ಸಾವಿರ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ 44 ಜನ ಮೃತಪಟ್ಟಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ನಾವು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಕೆ.ಸುಧಾಕರ್ ಹೇಳಿದರು.

Corona Virus: ಕರ್ನಾಟಕದಲ್ಲಿ ಲಾಕ್​ಡೌನ್​ ಮಾಡುವ ಚಿಂತನೆ ಇಲ್ಲ; ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್
Follow us
sandhya thejappa
|

Updated on:Feb 20, 2021 | 1:08 PM

ಬೆಂಗಳೂರು: ಕರ್ನಾಟಕದ ಗಡಿ ಭಾಗಗಳಲ್ಲಿ ಕೊವಿಡ್ ಟೆಸ್ಟ್ ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಗೃಹ ಇಲಾಖೆಯ ಜೊತೆ ಸಭೆ ನಡೆಸುತ್ತೇನೆ ಎಂದು ಹೇಳಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಲಾಕ್​ಡೌನ್ ಮಾಡುವ ಚಿಂತನೆ ಇಲ್ಲ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇವೆ. ಹೀಗಾಗಿ ಸರ್ಕಾರದ ಮುಂದೆ ಲಾಕ್​ಡೌನ್ ಪ್ರಸ್ತಾಪವಿಲ್ಲ. ಅಂತಹ ಪ್ರಸ್ತಾವನೆ ಬರಬಾರದು. ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳು ಕೈಜೋಡಿಸಿ ಕೆಲಸ ಮಾಡಬೇಕು. ಮಾರ್ಚ್ ಅಂತ್ಯದವರೆಗೆ ತುಂಬಾ ಅಪಾಯವಿದೆ. ಅಪಾಯವಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮಾರ್ಚ್ ಅಂತ್ಯದವರೆಗೆ ಜಾಗೃತರಾಗಿರಬೇಕು ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ನಿನ್ನೆ (ಫೆಬ್ರವರಿ 19) 6 ಸಾವಿರ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ 44 ಜನ ಮೃತಪಟ್ಟಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ನಾವು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಕೆ.ಸುಧಾಕರ್ ಹೇಳಿದರು. ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಎಚ್ಚರಿಕೆ ವಹಿಸಬೇಕು. ದಕ್ಷಿಣ ಕನ್ನಡ, ಬೆಳಗಾವಿ, ಕೊಡಗು, ಹುಬ್ಬಳ್ಳಿ, ಮೈಸೂರು, ಚಾಮರಾಜನಗರ, ಉಡುಪಿ ಜಿಲ್ಲೆಗೆ ರಸ್ತೆ ಮಾರ್ಗವಾಗಿ ಈ ಎರಡೂ ರಾಜ್ಯಗಳಿಂದ ಜನರು ಬರುತ್ತಾರೆ. ವಿಮಾನಗಳ ಮೂಲಕವು ಜನರು ರಾಜ್ಯಕ್ಕೆ ಬರುತ್ತಿದ್ದಾರೆ. ಎರಡು ರಾಜ್ಯದಿಂದ ಬರುವವರಿಗೆ ತಾಂತ್ರಿಕ ಸಲಹಾ ಸಮಿತಿ ನಮಗೆ ಸಲಹೆಯನ್ನು ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್ ಆರೋಗ್ಯ ಇಲಾಖೆ, ಪೊಲೀಸರ ಸಹಯೋಗದಲ್ಲಿ ಕೆಲಸ ನಿರ್ವಹಿಸಲಿದ್ದು, ಈ ಕುರಿತು ಅಧಿಕಾರಗಳ ಜೊತೆ ಸಭೆ ಮಾಡಲಾಗುತ್ತದೆ. ಇಂದು ಅಥವಾ ನಾಳೆಯೊಳಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ದೇಶದಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಉಚಿತವಾಗಿ ಕೊರೊನಾ ಲಸಿಕೆ ಸಿಗುತ್ತಿರುವುದು ನಮ್ಮ ಪುಣ್ಯ. ಆದರೆ ಆರೋಗ್ಯ ಕಾರ್ಯಕರ್ತರೇ ಲಸಿಕೆಯನ್ನು ಪಡೆಯುತ್ತಿಲ್ಲ. ಇದು ಅತ್ಯಂತ ಖೇದಕರ ವಿಷಯವಾಗಿದೆ ಎಂದರು.

ಜನರ ಆರೋಗ್ಯವೇ ನಮ್ಮ ಗುರಿ ಬೆಂಗಳೂರಿನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದಾರೆ. ಹೀಗೆ ಬೇಜವಾಬ್ದಾರಿ ವಹಿಸುವುದು ಯಾರಿಗೂ ಒಳ್ಳೆಯದಲ್ಲ. ರಾಜ್ಯದ ಜನರ ಆರೋಗ್ಯವೇ ನಮ್ಮ ಗುರಿಯಾಗಿದೆ ಎಂದು ಯಾರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೋ ಅವರೆಲ್ಲರೂ ಕೊರೊನಾ ಲಸಿಕೆ ಪಡೆಯುವಂತೆ ಮನವಿ ಮಾಡಿದರು. ವೈದ್ಯರಾಗಿ ನಾವೇ ಕೊರೊನಾ ಲಸಿಕೆ ಪಡೆಯದಿದ್ದರೆ ಸಾಮಾನ್ಯ ಜನರು ಹೇಗೆ ಮುಂದೆ ಬಂದು ಲಸಿಕೆ ಪಡೆಯುತ್ತಾರೆ. ಡಿಸಿಗಳು, ಎಸ್​ಪಿಗಳು ಕೂಡ ಲಸಿಕೆಯನ್ನು ಪಡೆಯುತ್ತಿದ್ದಾರೆ. ಸಿಎಸ್ ಸೇರಿದಂತೆ ಉನ್ನತ ವೈದ್ಯರು ಲಸಿಕೆ ಪಡೆದಿದ್ದಾರೆ. ಇವರಿಗ್ಯಾರಿಗೂ ಆರೋಗ್ಯದ ಬಗ್ಗೆ ಕಾಳಜಿ ಇಲ್ಲವಾ. ಇದನ್ನು ಅರ್ಥ ಮಾಡಿಕೊಂಡು ಲಸಿಕೆಯನ್ನು ಸ್ವೀಕರಿಸಿ. ಲಸಿಕೆ ಪಡೆಯದೆ ನೀವು ಬಲಿಪಶುಗಳಾಗಬೇಡಿ ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 6,32,711 ಲಸಿಕೆ ನೀಡಲಾಗಿದ್ದು, ಶೇ.57ರಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಆರಂಭದಲ್ಲಿ ಇಡೀ ದೇಶದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೆವು. ಇದಾದ ಬಳಿಕ ಪೋಲಿಯೋ ಲಸಿಕೆ ನೀಡಬೇಕಾದ ಹಿನ್ನೆಲೆ ತಾತ್ಕಾಲಿಕವಾಗಿ 5 ದಿನಗಳ ಕಾಲ ಇದನ್ನು ನಿಲ್ಲಿಸಲಾಯಿತು ಎಂದು ತಿಳಿಸಿದ ಡಾ.ಕೆ.ಸುಧಾಕರ್ ಫೆಬ್ರವರಿ 16ರಂದು ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ನಿನ್ನೆವರೆಗೆ 1 ಕೋಟಿ ಲಸಿಕೆಯನ್ನು ನೀಡಲಾಗಿದೆ. ಇದು ನಮ್ಮ ದೇಶದ ಸಾಧನೆ. ರಾಜ್ಯದಲ್ಲಿ ಎರಡನೇ ಕೊರೊನಾ ಅಲೆ ತಡೆಯುವುದಕ್ಕೆ ಕೆಲಸ ಮಾಡಬೇಕು. ರಾಜ್ಯದಲ್ಲಿ ರೂಪಾಂತರಿ ಕೊರೊನಾ ಹರಡದಂತೆ ಕ್ರಮಕೈಗೊಳ್ಳಲಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಮದುವೆಗಳಿಗೆ ಕೆಲವು ನಿಯಮಗಳು ಇವೆ. ಆದರೆ ಎಗ್ಗಿಲ್ಲದೆ ಮದುವೆಗಳಿಗೆ ಜನರು ಸೇರುತ್ತಿದ್ದಾರೆ. ಕೊರೊನಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಮಾರ್ಚ್ ಅಂತ್ಯದವರೆಗೆ ಬಹಳ ಪ್ರಮುಖ ಘಟ್ಟವಾಗಿದೆ. ನಾವು ಕೊರೊನಾವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು.

ಇದನ್ನೂ ಓದಿ: Weather Updates: ಇನ್ನೆರಡು ದಿನ ಕರ್ನಾಟಕದ ವಿವಿಧೆಡೆ ಮಳೆಯ ಸಾಧ್ಯತೆ: ಉತ್ತರಾಖಂಡದಲ್ಲಿ ಹಿಮಪಾತದ ಎಚ್ಚರಿಕೆ

ಇದನ್ನೂ ಓದಿ:Facebook Fraud | ಸಚಿವ ಸುರೇಶ್​ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ; ನಕಲಿ ಖಾತೆದಾರರಿಂದ ಹಣಕ್ಕೆ ಬೇಡಿಕೆ

Published On - 12:43 pm, Sat, 20 February 21