ಗದಗ: ಜಿಲ್ಲೆಯ ಮೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ಸಿಕ್ಕು ಕೇವಲ ಐದು ವರ್ಷಗಳು ಮಾತ್ರವಾಗಿದೆ. 3 ಪಟ್ಟಣ ಹಾಗೂ 8 ಹಳ್ಳಿಗಳಿಗೆ ನದಿ ಮೂಲಗಳಿಂದ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು. ಆದರೆ, ಐದೇ ವರ್ಷದಲ್ಲಿ 47 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಸದ್ಯ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ 47 ಕೋಟಿ ವೆಚ್ಚದ ಯೋಜನೆ ಪಾಳು ಬಿದ್ದಿದ್ದು, ಇದು ಪಟ್ಟಣ ಹಾಗೂ ಗ್ರಾಮಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದು ನೀರು ಬೇಕು ನೀರು ಎಂದು ಸಾಕಷ್ಟು ಹೋರಾಟ ಮಾಡಿ ಯೋಜನೆ ಪಡೆದಿದ್ದಾರೆ. ಆದರೆ ಜನರಿಗೆ ಈ ಯೋಜನೆಯಿಂದ ನದಿ ನೀರು ಸಿಕ್ಕಿದ್ದು ಕೇವಲ ಎರಡು ವರ್ಷಕ್ಕಷ್ಟೇ. ಈ ಎರಡು ವರ್ಷದಲ್ಲಿ 47 ಕೋಟಿ ವೆಚ್ಚದಲ್ಲಿ ಜಾರಿಯಾದ ಯೋಜನೆ ಈಗ ಮೂಲೆ ಸೇರಿದ್ದು, ಇದು ಪೌರಾಡಳಿತ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ದೊಡ್ಡ ಉದಾಹರಣೆಯಾಗಿದೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಜಾರಿಯಾದ ಈ ಯೋಜನೆ 2015 ರಲ್ಲಿ 47 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆಗ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಹಾಗೂ ತಾಲೂಕಿನ ಎಂಟು ಹಳ್ಳಿಗಳು ಮತ್ತು ಗದಗ ತಾಲೂಕಿನ ಮುಳಗುಂದ ಪಟ್ಟಣಕ್ಕೆ ಹೊಳೆಇಟಗಿ ಗ್ರಾಮದ ತುಂಗಭದ್ರಾ ನದಿಯಿಂದ ಪೂರೈಕೆ ಮಾಡುವ ಯೋಜನೆ ಇದಾಗಿದೆ.
ಉದ್ಘಾಟನೆ ಬಳಿಕ ಎರಡು ವರ್ಷದ ಈ ಯೋಜನೆ ನಿಂತು ಹೋಗಿದೆ. ಎರಡು ಪಟ್ಟಣ ಹಾಗೂ ಎಂಟು ಹಳ್ಳಿಗಳಿಗೆ ನದಿ ನೀರು ಪೂರೈಕೆ ಆಗಿತ್ತು ಆದರೆ ಕಳೆದ 2 ವರ್ಷಗಳಿಂದ ಈ ಯೋಜನೆ ಏಕಾಏಕಿ ನಿಂತು ಹೋಗಿದೆ. ನಿಂತು ಹೋಗಿದೆ ಎನ್ನುವುದಕ್ಕೆ ಪ್ರಮುಖ ಕಾರಣ ಪಂಪ್ ಸೆಟ್ ಕೆಟ್ಟಿಲ್ಲ, ಟ್ರಾನ್ಸ್ಫಾರ್ಮರ್ ಸುಟ್ಟಿಲ್ಲ, ಹಾಗೂ ಕೋಟಿ ಕೋಟಿ ಮೌಲ್ಯದ ವಸ್ತುಗಳು ಇನ್ನೂ ಚಾಲ್ತಿಯಲ್ಲಿವೆ. ಅದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಯೋಜನೆ ಪಾಳುಬಿದ್ದಿದೆ.
ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಕುಡಿಯುವ ನೀರಿನ ಯೋಜನೆ ನಿಂತು ಹೋಗಿದೆ. ಹೀಗಾಗಿ ಈಗ ಎರಡು ಪಟ್ಟಣ ಹಾಗೂ ಎಂಟು ಹಳ್ಳಿಗಳ ಜನರು ಕುಡಿಯುವ ನೀರಿಲ್ಲದೇ ಪರದಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯತಿ ಅಧಿಕಾರಿಗಳು ಸೇರಿ ಎಲ್ಲರಿಗೂ ಜನರು ಮನವಿ ಮಾಡಿಕೊಂಡಿದ್ದರು, ಯಾರೊಬ್ಬರೂ ಕ್ಯಾರೇ ಎನ್ನುತ್ತಿಲ್ಲ ಎಂದು ಬೆಳ್ಳಟ್ಟಿ ಗ್ರಾಮದ ಮಂಜುನಾಥ್ ಹೇಳಿದ್ದಾರೆ.
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊರವಲಯದಲ್ಲಿ ಬೃಹತ್ ಜಲ ಶುದ್ಧೀಕರಣ ಘಟಕವಿದೆ. 350 ಎಚ್.ಪಿ ಎರಡು ಮೋಟಾರ್ ಇವೆ. ಪಂಪ್ ಹೌಸ್ನಲ್ಲಿ ಕೋಟ್ಯಾಂತರ ಮೌಲ್ಯದ ವಸ್ತುಗಳು ಇವೆ. ಜೊತೆಗೆ ವಿದ್ಯುತ್ ಟ್ರಾನ್ಸಫರ್ಮರ್ಗಳು ಇವೆ. ಆದರೆ ಇವೆಲ್ಲವೂ ತುಕ್ಕು ಹಿಡಿಯುತ್ತಿವೆ. ಪಂಪ್ ಹೌಸ್ ಧೂಳು ತಿನ್ನುತ್ತಿದೆ. ನೀರು ಹರಿಯಬೇಕಾದ ಪೈಪ್ಗಳು ತುಕ್ಕು ಹಿಡಿದಿದ್ದು, ಅಪಾರ ಬೆಲೆ ಬಾಳುವ ಟ್ರಾನ್ಸ್ಫಾರ್ಮರ್ಗಳು ಗಿಡಗಂಟಿಗಳಲ್ಲಿ ಮುಚ್ಚಿ ಹೋಗಿವೆ.
2017 , ಏಪ್ರಿಲ್ 17 ರಲ್ಲಿ ಅಂದಿನ ಡಿಸಿ ಮನೋಜ್ ಜೈನ್ ನೇತೃತ್ವದಲ್ಲಿ ಯೋಜನೆ ನಿರ್ವಹಣೆ ಬಗ್ಗೆ ಸಭೆ ಮಾಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ ಯೋಜನೆ ಆರಂಭವಾಗಿಲ್ಲ. ಬಳಿಕ ಪಟ್ಟಣ ಪಂಚಾಯತಿ ಅಧಿಕಾರಿಗಳು ನಿರ್ವಹಣೆ ಮಾಡುವುದಕ್ಕೆ ಆಗಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಸ್ತಾಂತರ ಮಾಡಿಕೊಳ್ಳುವಂತೆ ಪತ್ರ ಬರೆದಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಆಗಸ್ಟ್ 22, 2019 ರಂದು ಪತ್ರ ಬರೆದು ಈ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ಅನುಮೋದನೆ ಆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಮದು ಪತ್ರ ಬರೆದಿದ್ದಾರೆ. ಈ ಸಮಸ್ಯೆ ಶೀಘ್ರ ಬಗೆ ಹರಿಸಿ ಯೋಜನೆ ಆರಂಭ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಗದಗ ಡಿಸಿ ಸುಂದರೇಶ್ ಬಾಬು ಹೇಳದ್ದಾರೆ.
ಅಧಿಕಾರಿಗಳು ವರ್ಷಕ್ಕೊಂದು ಪತ್ರ ವ್ಯವಹಾರ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಹೀಗಾದರೆ ಯೋಜನೆ ಆರಂಭವಾಗುತ್ತಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದು, ನೀರು ಸರಬರಾಜು ಮಾಡುವ ಸಿಬ್ಬಂದಿಗಳೇ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಲಕ್ಷಾಂತರ ಕರ ವಸೂಲಿ ಮಾಡಿ ಕೊಟ್ಟಿದ್ದಾರೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಯೋಜನೆ ನಂಬಿ ಬದುಕುವ 10ಕ್ಕೂ ಹೆಚ್ಚು ಸಿಬ್ಬಂದಿ ಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಇನ್ನಾದರೂ ಜಿಲ್ಲಾಡಳಿತ ಗಂಭೀರವಾಗಿ ಸರ್ಕಾರದ ಕೋಟ್ಯಾಂತರ ಮೌಲ್ಯದ ವಸ್ತುಗಳು ಹಾಳಾಗುವ ಮುನ್ನ ಯೋಜನೆಗೆ ಚಾಲನೆ ನೀಡಿ ಜನರ ದಾಹ ನೀಗಿಸಬೇಕಿದೆ.
ಇದನ್ನೂ ಓದಿ: ಸ್ವಚ್ಛತೆಯಲ್ಲಿ ಖಾಸಗಿ ಆಸ್ಪತ್ರೆಗಿಂತ ಲಕಲಕ ಅನ್ನುತ್ತಿದೆ ಹಾಸನ ಜಿಲ್ಲೆಯ ಸರ್ಕಾರಿ ದವಾಖಾನೆ!
Published On - 1:16 pm, Mon, 22 February 21