ಬರ ಪರಿಹಾರ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಮತ್ತೆ ಮುನ್ನಡೆ, ತಜ್ಞರ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚನೆ
ಕೇಂದ್ರ ಸರ್ಕಾರವು ಕರ್ನಟಕಕ್ಕೆ 3,454 ಕೋಟಿ ರೂ. ಬರ ಪರಿಹಾರವನ್ನು ಕಳೆದ ವಾರ ಬಿಡುಗಡೆ ಮಾಡಿದೆ. ಆದರೆ, ಇದು ಸಾಲದು ಎಂದು ಮತ್ತೆ ವಾದ ಮುಂದುವರಿಸಿರುವ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಲ್ಪ ಮಟ್ಟಿನ ಮುನ್ನಡೆಯಾಗಿದೆ. ಕೇಂದ್ರ ಸರ್ಕಾರದ ಬರ ಅಧ್ಯಯನ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನವದೆಹಲಿ, ಏಪ್ರಿಲ್ 30: ಲೋಕಸಭೆ ಚುನಾವಣೆ ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರ (Karnataka) ಮತ್ತು ಕೇಂದ್ರ ನಡುವಣ ಬರ ಪರಿಹಾರದ (Drought relief) ಸಮರ ತಾರಕಕ್ಕೇರಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯುತ್ತಿರುವ ರಾಜ್ಯದ ಅರ್ಜಿ ವಿಚಾರಣೆ ವೇಳೆ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ 3454 ಕೋಟಿ ರೂಪಾಯಿ ಪರಿಹಾರದ ಮೊತ್ತವನ್ನು ಕಳೆದ ವಾರ ಬಿಡುಗಡೆ ಮಾಡಿತ್ತು. ಆದ್ರೆ, ಇದು ಬಹಳ ಕಡಿಮೆ ಎಂದು ರಾಜ್ಯ ಸರ್ಕಾರ ಸುಪ್ರೀಂನಲ್ಲಿ ಮತ್ತೆ ವಾದ ಮುಂದಿಟ್ಟಿದೆ.
ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿರುವಂತೆಯೇ, ಬರ ಪರಿಹಾರ ಸಾಕಾಗಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಸೋಮವಾರ ವಾದ ಮಂಡಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದಲ್ಲಿ ಕರ್ನಾಟಕ ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
‘ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ, ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಕಡಿಮೆಯಾಗಿದೆ. ಇದು ಅಸಮಂಜಸವಾಗಿದೆ ಎಂದು ಕರ್ನಾಟಕ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದ್ದಾರೆ. ಪ್ರತಿ ವಾದ ಮಾಡಿದ ಕೇಂದ್ರ ಸರ್ಕಾರದ ಎಜಿ ಆರ್.ವೆಂಕಟರಮಣಿ, ತಜ್ಞರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ ಎಂದಿದ್ದಾರೆ.
ಮತ್ತೆ ವಾದ ಮುಂದುವರಿಸಿದ ಕಪಿಲ್ ಸಿಬಲ್, ತಜ್ಞರ ತಂಡದ ವರದಿ ಏನು ಎಂಬುದು ರಾಜ್ಯಕ್ಕೆ ತಿಳಿದಿಲ್ಲ. ಅದರ ಪ್ರತಿಯನ್ನ ಸಹ ರಾಜ್ಯಕ್ಕೆ ನೀಡಿಲ್ಲ. ಹೀಗಾಗಿ, ಆ ವರದಿ ಪ್ರತಿಯನ್ನ ಕೋರ್ಟ್ ಮುಂದೆ ಇಡಬೇಕು. ಅದರ ಅನ್ವಯ ಪರಿಹಾರ ನೀಡುವುದಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ ಎಂದರು.
ಇದನ್ನೂ ಓದಿ: ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ
ಹೀಗೆ, ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರೆ, ಪ್ರತಿಕ್ರಿಯೆಗೆ ಸ್ವಲ್ಪ ಸಮಯ ಬೇಕು ಎಂದು ಕೋರ್ಟ್‌ಗೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಮನವಿ ಮಾಡಿದರು. ಆದ್ರೆ, ಮನವಿ ನಿರಾಕರಿಸಿದ ಸುಪ್ರೀಂಕೋರ್ಟ್, ಮುಂದಿನ ಸೋಮವಾರದ ಒಳಗೆ ತಜ್ಞರ ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿದೆ. ಬಳಿಕ ವಿಚಾರಣೆಯನ್ನ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ಈ ಮೂಲಕ ಬರ ಪರಿಹಾರ ಸಮರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:58 am, Tue, 30 April 24