ಕರ್ನಾಟಕದಲ್ಲಿ ಇಡಿ ದಾಳಿ, ಸಿಕ್ಕಿಂನಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ?

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಮತ್ತು ಅವರ ಸಹೋದರರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಚಿತ್ರದುರ್ಗ, ಬೆಂಗಳೂರು, ಗೋವಾ ಮುಂತಾದ 30 ಕಡೆಗಳಲ್ಲಿ ದಾಳಿ ನಡೆದಿದೆ.ಕಿಂಗ್567, ರಾಜಾ567 ಮುಂತಾದ ಆನ್‌ಲೈನ್ ಬೆಟ್ಟಿಂಗ್ ತಾಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಇಡಿ ದಾಳಿ, ಸಿಕ್ಕಿಂನಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ?
ಶಾಸಕ ಕೆ.ಸಿ.ವೀರೇಂದ್ರ
Updated By: ವಿವೇಕ ಬಿರಾದಾರ

Updated on: Aug 22, 2025 | 6:32 PM

ಚಿತ್ರದುರ್ಗ, ಆಗಸ್ಟ್​ 22: ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶುಕ್ರವಾರ (ಆ.22) ಚಿತ್ರದುರ್ಗದ ಕಾಂಗ್ರೆಸ್​ (Chitradurga) ಶಾಸಕ ಕೆ.ಸಿ.ವೀರೇಂದ್ರ (Congress MLA KC Veerendra) ಹಾಗೂ ಅವರ ಸಹೋದರರ ಮನೆಗಳ ಮೇಲೆ ದಾಳಿ ನಡೆಸಿದರು. ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿದಂತೆ 30 ಕಡೆಗಳಲ್ಲಿ ದಾಳಿ ಮಾಡಿದರು. ಶಾಸಕ ಕೆ.ಸಿ.ವೀರೇಂದ್ರ ಮನೆಗಳು, ಕಂಪನಿಗಳು ಮತ್ತು ಇತರರ ಮನೆ, ಕಚೇರಿಗಳು ಸೇರಿ 30 ಕಡೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳ ತಂಡ ಚಿತ್ರದುರ್ಗ ಜಿಲ್ಲೆಯ 6 ಕಡೆ, ಬೆಂಗಳೂರು ನಗರದ 10, ಹುಬ್ಬಳ್ಳಿಯ 1 ಕಡೆ, ರಾಜಸ್ಥಾನದ ಜೋಧ್​ಪುರದ 3 ಕಡೆ, ಮುಂಬೈನ 2 ಕಡೆ, ಗೋವಾದ 5 ಕ್ಯಾಸಿನೋ ಸೇರಿ ಹಲವೆಡೆ ದಾಳಿ ಮಾಡಿದ್ದಾರೆ. ಅಕ್ರಮ ಆನ್​ಲೈನ್​, ಆಫ್​ಲೈನ್ ಬೆಟ್ಟಿಂಗ್ ಪ್ರಕರಣ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿಸಿದೆ.

ಆನ್​ಲೈನ್​ ಬೆಟ್ಟಿಂಗ್ ತಾಣಗಳಾದ ಕಿಂಗ್567, ರಾಜಾ567, ಪಪ್ಪಿಸ್003, ರತ್ನ ಗೇಮಿಂಗ್, ಶಾಸಕ ಕೆ.ಸಿ.ವೀರೇಂದ್ರ ಸಹೋದರ ಕೆ.ಸಿ.ತಿಪ್ಪೇಸ್ವಾಮಿಗೆ ಸೇರಿದ ದುಬೈನಲ್ಲಿರುವ ವ್ಯವಹಾರಗಳ ಕಚೇರಿಗಳಾದ ಡೈಮಂಡ್ ಸಾಫ್ಟೆಕ್​​​​, ಟಿಆರ್​ಎಸ್​ ಟೆಕ್ನಾಲಜಿಸ್​​​, ಪ್ರೈಮ್​​9 ಟೆಕ್ನಾಲಜಿಸ್​​, ಕಾಲ್​ ಸೆಂಟರ್​​​​​ ಸರ್ವೀಸ್​​ ಮೇಲೆ ದಾಳಿ ನಡೆಸಿ, ಗೇಮಿಂಗ್​ ಬ್ಯುಸಿನೆಸ್​​ಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದರು.

20ಕ್ಕೂ ಹೆಚ್ಚು ವಾಹನದಲ್ಲಿ ಬಂದಿರುವ 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ 2016ರ ಡಿಸೆಂಬರ್ 11 ರಂದು ಕೆಸಿ ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ವಿರೇಂದ್ರ ಮನೆಯ ಬಾತ್ ರೂಂನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ಹಣ, 30 ಕೆಜಿಗೂ ಹೆಚ್ಚು ಚಿನ್ನ ಪತ್ತೆ ಆಗಿತ್ತು. ಕೆಸಿ ವಿರೇಂದ್ರ ಒಡೆತನದ ಕಂಪನಿಗಳಿಂದ ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ: ಇಡಿ ತನಿಖೆಗೆ ಆಗ್ರಹಿಸಿ ಅಮಿತ್ ಶಾಗೆ ಕೋಟ ಶ್ರೀನಿವಾಸ ಪೂಜಾರಿ ಪತ್ರ

ಶಾಸಕ ಕೆ.ಸಿ.ವೀರೇಂದ್ರ ಇಡಿ ವಶಕ್ಕೆ?

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಿಕ್ಕಿಂನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈವರೆಗೆ ಇಡಿ ಅಧಿಕಾರಿಗಳು ಈ ಬಗ್ಗೆ ಖಚಿತಪಡಿಸಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Fri, 22 August 25