
ಬೆಂಗಳೂರು, ಸೆಪ್ಟೆಂಬರ್ 9: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್‌ನಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸಿರುವ ದಾಳಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಚಿವರ ಬಾಮೈದ ಹಾಗೂ ಅಬಕಾರಿ ಇಲಾಖೆಯ ಮಾಜಿ ಅಧಿಕಾರಿ ವೈ. ಮಂಜುನಾಥ್ ಅವರಿಗೆ ಸಂಬಂಧಿಸಿದ ಪ್ರಕರಣದ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿತ್ತು. ಆದರೆ, ಇದೀಗ ಈ ದಾಳಿಗೂ ಮಂಜುನಾಥ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇಡಿ ಸ್ಪಷ್ಟಪಡಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)–1999ರ ಅಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ನಿವಾಸಗಳು ಮತ್ತು ಅವರ ಆಪ್ತರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ. ವಿದೇಶಗಳಲ್ಲಿ ನಡೆದಿರುವ ಎನ್ನಲಾದ ಅಕ್ರಮ ಹೂಡಿಕೆಗಳು ಹಾಗೂ ಹಣಕಾಸು ವಹಿವಾಟುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗೆ ಮುನ್ನ ಜೂನ್‌ನಲ್ಲಿ ಮಂಜುನಾಥ್ ಅವರ ನಿವಾಸ ಸೇರಿದಂತೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಭಾಗಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಅಬಕಾರಿ ಪರವಾನಗಿ ಅಕ್ರಮ, ಬೇನಾಮಿ ಬಾರ್ ಲೈಸೆನ್ಸ್ ಹಾಗೂ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆದಿತ್ತು ಎಂದು ವರದಿಯಾಗಿತ್ತು. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ದಾಳಿಯೂ ಮಂಜುನಾಥ್ ಪ್ರಕರಣದ ಮುಂದುವರಿದ ಭಾಗ ಎಂಬಂತೆ ಬಿಂಬಿತವಾಗಿತ್ತು. ಆದರೆ ಇದೀಗ ಇಡಿ ನೀಡಿರುವ ಅಧಿಕೃತ ಸ್ಪಷ್ಟನೆಯಿಂದಾಗಿ ಈ ಎರಡು ಪ್ರಕರಣಗಳು ಪ್ರತ್ಯೇಕ ಎಂಬುದು ಬೆಳಕಿಗೆ ಬಂದಿದೆ.
ಸತೀಶ್ ಜಾರಕಿಹೊಳಿ ಅವರ ಮೇಲಿನ ದಾಳಿ FEMA–1999ರ ಅಡಿಯಲ್ಲಿ ನಡೆಯುತ್ತಿರುವ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಇಡಿ ತಿಳಿಸಿದೆ. ದಕ್ಷಿಣ ಆಫ್ರಿಕಾ, ಉಗಾಂಡ ಸೇರಿದಂತೆ ವಿವಿಧ ದೇಶಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಈ ಹೂಡಿಕೆಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಕಡೆಯಿಂದ ಹಣ ಅಥವಾ ಹೂಡಿಕೆ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹೀಗಾಗಿ ಸಚಿವರ ನಿವಾಸಗಳಲ್ಲಿ ವಿದೇಶಿ ಹೂಡಿಕೆ, ಹಣ ವರ್ಗಾವಣೆ, ಆಸ್ತಿ ಹಾಗೂ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲಷ್ಟೇ ಅಲ್ಲದೆ, ಅವರ ಮೂವರು ಆಪ್ತರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದ ಲಕ್ಷ್ಮೀ ಟೆಕ್ ಪ್ರದೇಶದಲ್ಲಿರುವ ಸಚಿವರ ಆಪ್ತ ಹಾಗೂ ವೈದ್ಯ ಡಾ. ಗಿರೀಶ್ ಸೋನ್ವಾಲ್ಕರ್ ಅವರ ನಿವಾಸದ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗಿರೀಶ್ ಅವರು ಸತೀಶ್ ಜಾರಕಿಹೊಳಿ ಅವರಿಗೆ ಆಪ್ತರಾಗಿದ್ದಾರೆ ಎನ್ನಲಾಗಿದೆ.
ಇನ್ನು ಗೋಕಾಕ್ ನಗರದಲ್ಲಿರುವ ಸಚಿವರ ಮತ್ತಿಬ್ಬರು ಆಪ್ತರಾದ ರಾಜು ಧರಗಶೆಟ್ಟಿ ಮತ್ತು ವಿಠ್ಠಲ್ ಪರಸನ್ನವರ ಅವರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದಂತೆ ಒಟ್ಟು ಐದು ಕಡೆಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸಚಿವರ ನಿವಾಸಗಳು ಮತ್ತು ಆಪ್ತರ ಮನೆಗಳಲ್ಲಿ ಇಡಿ ಅಧಿಕಾರಿಗಳು ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ವಿದೇಶಿ ಹೂಡಿಕೆಗಳು, ಹಣಕಾಸು ವಹಿವಾಟು ಹಾಗೂ FEMA ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ದಾಳಿಯ ವೇಳೆ ಯಾವ ದಾಖಲೆಗಳು ಅಥವಾ ಇತರ ವಸ್ತುಗಳು ಪತ್ತೆಯಾಗಿವೆ ಎಂಬ ಬಗ್ಗೆ ಇಡಿ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ