ಅನಾಥವಾಗುತ್ತಿವೆ ಕೊರೊನಾಗೆ ಬಲಿಯಾದ ಶವಗಳು, ಬಿಬಿಎಂಪಿಯಿಂದ 857 ಶವಗಳಿಗೆ ಮುಕ್ತಿ
ಆಸ್ಪತ್ರೆಗೆ ದಾಖಲು ಮಾಡುವಾಗ ಇರುವ ಕುಟುಂಬಸ್ಥರು ಸೋಂಕಿತರು ಮೃತಪಟ್ಟ ಬಳಿಕ ನಾಪತ್ತೆಯಾಗ್ತಿದ್ದಾರೆ. ಆಸ್ಪತ್ರೆಯಿಂದ ಕರೆ ಮಾಡಿದ್ರೂ ಕರೆ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ಕಂಡುಬರುತ್ತಿದೆ. 2ನೇ ಅಲೆಯಲ್ಲಿ ಒಟ್ಟು 857 ಮೃತದೇಹಗಳಿಗೆ ವಾರಸುದಾರರಿಲ್ಲವೆಂದು BBMPಯಿಂದ ಅಂತ್ಯಸಂಸ್ಕಾರ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಎಷ್ಟೋ ಜೀವಗಳು ಬಲಿಯಾಗ್ತಿವೆ. ಬೆಂಗಳೂರಿನಲ್ಲಿ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೂ ಭಾರಿ ತೊಂದರೆ ಎದುರಾಗಿದೆ. ಮೃತದೇಹಗಳ ಸಂಸ್ಕಾರದ ಬಳಿಕ ಅಸ್ಥಿಗಳನ್ನ ತೆಗೆದುಕೊಂಡು ಹೋಗಲು ಕುಟುಂಬಸ್ಥರೇ ಬರ್ತಿಲ್ಲ. ಎಷ್ಟೋ ಜನರ ಅಸ್ಥಿಗಳು ಶವಾಗಾರಗಳಲ್ಲೇ ಇವೆ. ಕೆಲವೊಮ್ಮೆ ಅಸ್ಥಿ ಬಿಡಲು ಹೊರಟವರಿಗೆ ಪೊಲೀಸರು ತಡೆಯೊಡ್ಡುತ್ತಿದ್ರು. ಜೊತೆಗೆ ಕೊವಿಡ್‌ಗೆ ಬಲಿಯಾದವರ ಶವ ಪಡೆಯಲು ಸಂಬಂಧಿಕರೇ ಬರುತ್ತಿಲ್ಲ. ಮೃತದೇಹಗಳು ಅನಾಥವಾಗ್ತಿವೆ. ಇದನ್ನು ಗಮನಿಸಿದ ಬಿಬಿಎಂಪಿ ಬೆಂಗಳೂರಿನಲ್ಲಿ ಅನಾಥವಾದ ಶವಗಳಿಗೆ ಮುಕ್ತಿ ನೀಡುವ ಕಾರ್ಯ ಮಾಡುತ್ತಿದೆ.
ಆಸ್ಪತ್ರೆಗೆ ದಾಖಲು ಮಾಡುವಾಗ ಇರುವ ಕುಟುಂಬಸ್ಥರು ಸೋಂಕಿತರು ಮೃತಪಟ್ಟ ಬಳಿಕ ನಾಪತ್ತೆಯಾಗ್ತಿದ್ದಾರೆ. ಆಸ್ಪತ್ರೆಯಿಂದ ಕರೆ ಮಾಡಿದ್ರೂ ಕರೆ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ಕಂಡುಬರುತ್ತಿದೆ. 2ನೇ ಅಲೆಯಲ್ಲಿ ಒಟ್ಟು 857 ಮೃತದೇಹಗಳಿಗೆ ವಾರಸುದಾರರಿಲ್ಲವೆಂದು BBMPಯಿಂದ ಅಂತ್ಯಸಂಸ್ಕಾರ ಮಾಡಲಾಗಿದೆ. ಲಕ್ಷ ಲಕ್ಷ ಬಿಲ್ ಕಟ್ಟಲಾಗದೆ ಕುಟುಂಬಸ್ಥರು ಆಸ್ಪತ್ರೆಗಳಲ್ಲಿ ಶವಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇಂತಹ ಶವಗಳನ್ನು ನಾಲ್ಕೈದು ದಿನಗಳವರೆಗೆ ಆಸ್ಪತ್ರೆಗಳಲ್ಲೇ ಇಟ್ಟುಕೊಂಡು ಕುಟುಂಬಸ್ಥರಿಗಾಗಿ ಕಾದು ಬಳಿಕ ಬಿಬಿಎಂಪಿಗೆ ಮಾಹಿತಿ ನೀಡುತ್ತಿವೆ ಖಾಸಗಿ ಆಸ್ಪತ್ರೆಗಳು. ಹೀಗಾಗಿ ಅನಾಥ ಶವಗಳನ್ನು ಬಿಬಿಎಂಪಿ ಅಂತ್ಯ ಸಂಸ್ಕಾರ ಮಾಡುತ್ತಿದೆ.
ಆರ್.ಅಶೋಕ್ರಿಂದ ಅಸ್ಥಿ ವಿಸರ್ಜನೆ ಕಾರ್ಯ ಇನ್ನು ಮತ್ತೊಂದು ಕಡೆ ನಿನ್ನೆ ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಅಸ್ಥಿ ಬಿಡುವ ಮಹಾ ಕಾರ್ಯ ಮಾಡಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಅಸ್ಥಿ ಬಿಡೋದು ಅತಿ ಮುಖ್ಯ ಆಚರಣೆ. ಆದ್ರೆ, ಅಸ್ಥಿ ಬಿಡೋಕೆ ಎದುರಾಗ್ತಿದ್ದ ಸಮಸ್ಯೆಗಳನ್ನ ಮನಗಂಡ ಕಂದಾಯ ಸಚಿವ ಆರ್.ಅಶೋಕ್, ಮೃತರ ಆತ್ಮಗಳಿಗೆ ಶಾಂತಿ ಸಿಗುವಂತಾ ಕಾರ್ಯವನ್ನ ಮಾಡಿದ್ದಾರೆ. ಸ್ವತಃ ತಾವೇ ನಿನ್ನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಬಳಿ ಕಾವೇರಿ ನದಿ ತೀರದಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಸ್ಥಿಗಳನ್ನ ವಿಸರ್ಜನೆ ಮಾಡಿದ್ದಾರೆ. ಈ ಮೂಲಕ ಸಾರ್ಥಕ ಕಾರ್ಯವನ್ನ ಮಾಡಿದ್ದಾರೆ. ಗಂಗಾ ನದಿಯಲ್ಲಿ ಶವಗಳು ತೇಲಿ ಹೋಗ್ತಿದ್ದ ಸುದ್ದಿಯನ್ನ ಕಂಡು ಆರ್.ಅಶೋಕ್ ಒಂದು ಕ್ಷಣ ಕನಲಿ ಹೋಗಿದ್ರಂತೆ. ಈ ರೀತಿಯ ಸ್ಥಿತಿ ರಾಜ್ಯದ ಜನರಿಗೆ ಬರಬಾರದು. ಸಾವಿನ ಬಳಿಕ ಗೌರವಯುತವಾಗಿ ಅಂತ್ಯ ಸಂಸ್ಕಾರ ಮತ್ತು ಅಸ್ಥಿ ವಿಸರ್ಜನೆ ಆಗಬೇಕು. ಈ ಮೂಲಕ ನಮ್ಮ ಸಂಸ್ಕೃತಿಯನ್ನ ಕಾಪಾಡಬೇಕು ಅಂತಾ ಆರ್.ಅಶೋಕ್ ಅಸ್ಥಿ ವಿಸರ್ಜನೆಗೆ ಮುಂದಾಗಿದ್ದಾರೆ.
ಬೆಳಕವಾಡಿ ಬಳಿ ಕಾವೇರಿ ನದಿ ತಟದ ಕಾಶಿವಿಶ್ವನಾಥ ಸ್ವಾಮಿ ದೇವಾಲಯದ ಸ್ನಾನಘಟ್ಟದ ಬಳಿ, ಬೆಂಗಳೂರಿನಿಂದ ತರಲಾದ 1 ಸಾವಿರಕ್ಕೂ ಹೆಚ್ಚು ಜನರ ಅಸ್ಥಿಗಳಿಗೆ ಸ್ವತಃ ಸಚಿವ ಆರ್.ಅಶೋಕ್ ವಿಧಿವಿಧಾನ ನೆರವೇರಿಸಿದ್ರು. ಆಗಮಶಾಸ್ತ್ರ ಪಂಡಿತ ಡಾ.ವಿ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಪುರೋಹಿತರ ತಂಡ ಅಸ್ಥಿ ವಿಸರ್ಜನಾ ಕಾರ್ಯಕ್ರಮ ನೆರವೇರಿಸಿತು. ಅಷ್ಟೇ ಅಲ್ಲ, ಇನ್ಮುಂದೆ ಅನಾಥ ಶವ ಅನ್ನೋ ಶಬ್ದ ಕೇಳಬಾರದು. ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಸ್ಥಿ ವಿಸರ್ಜನೆ ಮತ್ತು ಅಂತ್ಯ ಸಂಸ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಸೂಚಿಸಿದ್ರು.
ಕಂದಾಯ ಸಚಿವ ಆರ್.ಅಶೋಕ್ ಮಾಡಿರೋ ಈ ಕಾರ್ಯಕ್ಕೆ ಸ್ವಾಮೀಜಿಗಳು, ಗಣ್ಯರು ಶ್ಲಾಘಿಸಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮೂಲಕ ಸಚಿವ ಅಶೋಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೊವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿ, ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ರು. ಈಗ ಅಸ್ಥಿ ವಿಸರ್ಜನೆಯನ್ನೂ ತಾವೇ ಮಾಡುವ ಮೂಲಕ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ; ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತ ಆರ್ ಅಶೋಕ್