
ಬೆಂಗಳೂರು, (ಜನವರಿ 27): ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು (employees) ಸಮರ ಸಾರಿದ್ದಾರೆ. ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಾಡಿದ್ದು ಅಂದರೆ ಜನವರಿ 29ರಂದು ಬೆಂಗಳೂರು ಚಲೋಗೆ (Bengaluru Chalo) ಕರೆ ನೀಡಿದ್ದಾರೆ. ಆದ್ರೆ, ಇದಕ್ಕೆ ಕೆಎಸ್ಆರ್ಟಿಸಿ ಶಾಕ್ ಕೊಟ್ಟಿದ್ದು, ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಗುರುವಾರ ಡ್ಯೂಟಿಗೆ ಬಂದಿಲ್ಲ ಅಂದರೆ ‘ನೋ ವರ್ಕ್ ನೋ ಪೇ’ ಎಂದು ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.
ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಜನವರಿ 29ರಂದು ಬೆಂಗಳೂರು ಚಲೋ ಕೈಗೊಂಡಿದ್ದಾರೆ. ಆದ್ರೆ, ಇದಕ್ಕೆ ಒಂದು ದಿನ ಮೊದಲೇ ಕೆಎಸ್ಆರ್ಟಿಸಿ ಮಹತ್ವದ ಆದೇಶ ಹೊರಡಿಸಿದ್ದು, ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ. ಒಂದು ವೇಳೆ ಗುರುವಾರ ಡ್ಯೂಟಿಗೆ ಬಂದಿಲ್ಲ ಅಂದರೆ ‘ನೋ ವರ್ಕ್ ನೋ ಪೇ’ ಎನ್ನುವ ಆದೇಶವನ್ನು ಜಾರಿ ಮಾಡಿದೆ.
01-01-2020ರಿಂದ 28-02-2023ರ ವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಾಗೂ
01.01.2024 ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯು ಜನವರಿ 29ರ ಗುರುವಾರ ಬೆಂಗಳೂರು ಚಲೋಗೆ ಕರೆ ನೀಡಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕೈಗೊಳ್ಳುವಂತೆ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಿನಾಂಕ.29.01.2026 ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು. ಕೆಲಸಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ ‘ನೋ ವರ್ಕ್ ನೋ ಪೇ’ ಜಾರಿ ಮಾಡಬೇಕು.
ಅನಿವಾರ್ಯ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರೊಂದಿಗೆ ಕೆಎಸ್ಆರ್ಟಿಸಿ ತನ್ನ ನೌಕರರ ಪ್ರತಿಭಟನೆಗೆ ಬ್ರೇಕ್ ಹಾಕಲು ಮುಂದಾಗಿದೆ. ಹೀಗಾಗಿ ಬೆಂಗಳೂರು ಚಲೋ, ಸಾರಿಗೆ ನೌಕರರ ಮುಂದಿನ ನಡೆ ಮೇಲೆ ನಿಂತಿದೆ. ಒಂದು ವೇಳೆ ಈ ಆದೇಶಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದರೆ ಎಂದಿನಂತೆ ಬಸ್ ಸಂಚಾರ ಇರಲಿದೆ. ಇನ್ನು ಆದೇಶಕ್ಕೆ ಡೋಟ್ ಕೇರ್ ಎಂದು ಬೆಂಗಳೂರು ಚಲೋಗೆ ತೆರಳಿದರೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದು ಗ್ಯಾರಂಟಿ. ಹೀಗಾಗಿ ಪ್ರಯಾಣಿಕರು ಜನವರಿ 29ರಂದು ಬಸ್ ಪ್ರಯಾಣ ಕೈಬಿಡುವುದು ಒಳಿತು.
Published On - 4:42 pm, Tue, 27 January 26