
ಬೆಂಗಳೂರು, (ಸೆಪ್ಟೆಂಬರ್ 25): ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಸೆಕ್ಷನ್ 17ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಸೆಪ್ಟೆಂಬರ್ 23 ಮತ್ತು 24ರಂದು ಬೆಂಗಳೂರಿನ 16 ಸ್ಥಳಗಳು ಸೇರಿದಂತೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿರುವ M/s Attica Gold Private Limited, Bengaluru ಹಾಗೂ ಇತರರಿಗೆ ಸೇರಿದ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕಳ್ಳತನವಾದ ಚಿನ್ನಾಭರಣಗಳನ್ನು ಖರೀದಿ/ಸ್ವಾಧೀನಪಡಿಸಿಕೊಳ್ಳುವಲ್ಲಿ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಅದರ ಷೇರುದಾರರು ಮತ್ತು ನಿರ್ದೇಶಕರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗಿದೆ. ಈ ಮೂಲಕ ಕಂಪನಿಗೆ ನಿಕಟವಾಗಿ ಸಂಬಂಧ ಹೊಂದಿರುವ ಪಿ.ಎಸ್. ಆಯುಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಒಬೇದುಲ್ಲಾ ಎ., ಮೊಹಮ್ಮದ್ ಸಲ್ಮಾನ್ ಎ. ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಸಹಚರರು ಭಾರಿ ಪ್ರಮಾಣದ ಅಪರಾಧದ ಆದಾಯವನ್ನು (Proceeds of Crime) ಗಳಿಸಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಎಫ್‌ಐಆರ್‌ಗಳು ಹಾಗೂ ಸಲ್ಲಿಸಲಾದ ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು. ಕಳ್ಳತನದ ಚಿನ್ನಾಭರಣಗಳನ್ನು ಖರೀದಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಹಾಗೂ ವಹಿವಾಟು ನಡೆಸಿದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎಫ್‌ಐಆರ್‌ಗಳಿಂದ ಸಂಗ್ರಹಿಸಲಾಗಿದ್ದು, ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಂಗ್ರಹಿಸಿದ ಪರಿಶೀಲಿಸಬಹುದಾದ ಮಾಹಿತಿಯೂ ಇದಕ್ಕೆ ಪೂರಕವಾಗಿದೆ. ಶೋಧ ಕಾರ್ಯಾಚರಣೆಯಲ್ಲಿ ಕಂಪನಿಯ ನಿರ್ದೇಶಕರು, ಮಾಜಿ ನಿರ್ದೇಶಕರು, ಷೇರುದಾರರು, ಪ್ರಧಾನ ಕಚೇರಿ ಹಾಗೂ ವಿವಿಧ ಶಾಖೆಗಳಿಗೆ ಸೇರಿದ ನಿವಾಸಗಳು ಮತ್ತು ಕಚೇರಿಗಳನ್ನು ಪರಿಶೀಲಿಸಲಾಯಿತು.
ಪಿ.ಎಸ್. ಆಯುಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಒಬೇದುಲ್ಲಾ ಎ., ಮೊಹಮ್ಮದ್ ಸಲ್ಮಾನ್ ಎ. ಮತ್ತು ಅರ್ಬಿನ್ ತಾಜ್ ಎ. ಸೇರಿದಂತೆ ಪ್ರಮುಖ ವ್ಯಕ್ತಿಗಳು ಶೋಧ ಕಾರ್ಯಾಚರಣೆಯ ವೇಳೆ ಸಹಕರಿಸದೆ, ತಲೆಮರೆಸಿಕೊಂಡಿದ್ದರು. ಶೋಧ ನಡೆಸಲಾದ ಸಂಸ್ಥೆಯ ಕಚೇರಿಗಳಲ್ಲಿದ್ದ ಉದ್ಯೋಗಿಗಳಿಗೂ ಪ್ರಮುಖ ವ್ಯಕ್ತಿಗಳು ಲಭ್ಯವಾಗದಂತೆ ಸೂಚಿಸಿದ್ದರು ಎಂದು ಇಡಿ ತಿಳಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಅಪರಾಧದ ಆದಾಯಕ್ಕೆ ಸಂಬಂಧಿಸಿದಂತೆ 7,52,000 ನಗದು, ವಿದೇಶಿ ಕರೆನ್ಸಿ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.