ಬೆಂಗಳೂರು, ಡಿಸೆಂಬರ್ 18: ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ (Parappana Agrahara)
ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಜೈಲ್ನಲ್ಲಿ ಸಾಕಷ್ಟು ಮೊಬೈಲ್ ಪತ್ತೆ ಆಗಿದ್ದವು. ಸಿಸಿಬಿ ಅಧಿಕಾರಿಗಳು ರೇಡ್ ಮಾಡಿ, ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಮೊಬೈಲ್ ಬಳಕೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದೀಗ ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೊಬೈಲ್ ಬಳಕೆ ಮಾಡಲಾಗುತ್ತಿದ್ದು, ಆ ಮೂಲಕ ಆರೋಪಿಗಳು ಜೈಲಿನಿಂದಲೇ ಹಣಕ್ಕಾಗಿ ಧಮ್ಕಿ ಮತ್ತು ಡ್ರಗ್ ಡೀಲಿಂಗ್ ಮಾಡುತ್ತಿದ್ದಾರೆ.
ಸೆಂಟ್ರಲ್ ಜೈಲ್ನಲ್ಲಿ ಇದೀಗ ಮತ್ತೆ ಮೊಬೈಲ್ ಬಳಕೆಯಿಂದಾಗಿ ರೌಡಿಗಳು ಮತ್ತು ಡ್ರಗ್ಸ್ ಡೀಲರ್ಗಳ ಆಟಾಟೋಪ ಮುಂದುವರಿದಿದೆ. ಆರೋಪಿಗಳು, ಶಿಕ್ಷೆಗೆ ಒಳಪಟ್ಟ ಖೈದಿಗಳಿಂದ ಮೊಬೈಲ್ ಬಳಕೆ ನಿತ್ಯ ನಿರಂತರವಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್ ಪಿನ್ ಲಾಕ್
ಹೊರಗಡೆಗಿಂತ ಪರಪ್ಪನ ಅಗ್ರಹಾರ ಜೈಲೇ ಕ್ರಿಮಿನಲ್ಗಳಿಗೆ ಸೇಫ್ ಆಯ್ತಾ ಎಂಬ ಅನುಮಾನಗಳು ಶುರುವಾಗಿವೆ. ಜೈಲಿನ ಖೈದಿಗಳು ರಾಜರೋಷವಾಗಿ ಮೊಬೈಲ್ ಬಳಸುತ್ತಿದ್ದಾರೆ. ಇದಕ್ಕೆ ಸಾಲು ಸಾಲು ಸಾಕ್ಷಿಗಳು ಸಿಕ್ಕಿವೆ. ಜೈಲಿನಲ್ಲಿ ಇನ್ನೂ 250-300 ಮೊಬೈಲ್ಗಳು ಇರುವ ಮಾಹಿತಿಯಿದೆ.
ಜೈಲಿನಲ್ಲೇ ಕೂತು ಸೈಕೋ ವಿಶ್ವನಾಥ್ ಎಂಬ ರೌಡಿಯಿಂದ ವ್ಯಾಪಾರಿಯೊಬ್ಬರಿಗೆ ಫೋನ್ ಮಾಡಿ ಹಣಕ್ಕಾಗಿ ಧಮ್ಕಿ ಹಾಕಲಾಗಿದೆ. ಪ್ರತಿ ವಾರ 40 ಸಾವಿರ ರೂ. ಹಣ ಹಫ್ತಾ ಕೊಡಬೇಕು ಇಲ್ಲ ಕೊಲೆ ಮಾಡುವುದಾಗಿ ಬೆದರಿಕೆ ನೀಡಲಾಗಿದೆ. ಈ ಸಂಬಂಧ ಸೈಕೋ ವಿಶ್ವನಾಥ್ ವಿರುದ್ಧ ಸಿಸಿಬಿಗೆ ವ್ಯಾಪಾರಿ ದೂರು ನೀಡಿದ್ದಾರೆ. ಸದ್ಯ ಬಾಡಿ ವಾರೆಂಟ್ ಮೇಲೆ ಸೈಕೋ ವಿಶ್ವನಾಥ್ ವಶಕ್ಕೆ ಪಡೆದು ಸಿಸಿಬಿ ಪೊಲೀಸರಿಂದ ವಿಚಾರಣೆ ಮಾಡಲಾಗಿದೆ.
ಇನ್ನು ಪರಪ್ಪನ ಜೈಲಿನಲ್ಲೇ ಕೂತು ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡಲಾಗುತ್ತಿದೆ. ಡ್ರಗ್ಸ್ ಕೇಸ್‌ನಲ್ಲಿ ಜೈಲಿಗೆ ಹೋಗಿರುವ ಆರೋಪಿಯಿಂದಲೇ ಡ್ರಗ್ಸ್ ಡೀಲಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಸಿಸಿಬಿ ಪೊಲೀಸರು ಡ್ರಗ್ಸ್ ಅಡ್ಡೆ ಮೇಲೆ ದಾಳಿ ಮಾಡಿದ್ದರು. ಇಬ್ಬರನ್ನ ಬಂಧಿಸಿ ವಿಚಾರಣೆ ಮಾಡಿದಾಗ ಮತ್ತೊಬ್ಬನ ಬಗ್ಗೆ ಮಾಹಿತಿ ನೀಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತ ಆ ಆರೋಪಿ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದ. ಆತನ ಸೂಚನೆಯಂತೆ ಡ್ರಗ್ಸ್ ಕಲೆಕ್ಟ್ ಮಾಡಿ ಪೋರ್ಟರ್ ಮೂಲಕ ಮಾರಾಟ ಮಾಡುತ್ತಿದ್ದರು. ಸದ್ಯ ಈತನನ್ನೂ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿಸಿಬಿ ಸಿದ್ದತೆ ನಡೆಸಿದೆ.
ಜೈಲಿನಲ್ಲೇ ಕೂತು ಬಾಲಕೃಷ್ಣ ಎಂಬಾತನಿಂದ ನಗರದಲ್ಲಿ ಗಾಂಜಾ ಡೀಲಿಂಗ್ ಮಾಡಲಾಗಿದೆ. ಅಶೋಕ ನಗರ ಪೊಲೀಸರಿಂದ ನಾಲ್ವರು ಆರೋಪಿಗಳನ್ನ ಬಂಧಿಲಾಗಿತ್ತು. ಶ್ರೀಕಾಂತ್, ಮುನಿರಾಜು, ಚಂದ್ರಕಾಂತ್, ಬಾಲಕೃಷ್ಣ@ಜಿಗಣಿ ಬಾಲು ಬಂಧಿತರು. ಆರೋಪಿಗಳು ವಿಶಾಖಪಟ್ಟಣದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದರು.
ಇದನ್ನೂ ಓದಿ: ದರ್ಶನ್ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ; ವಿಲ್ಸನ್ ಗಾರ್ಡನ್ ನಾಗನ ಫೋನ್ ಸೇರಿ 18 ಮೊಬೈಲ್ ಸೀಜ್
ಆರೋಪಿಗಳ ಪೈಕಿ ಜಿಗಣಿ ಬಾಲು ಕ್ರೈಂ ಕೇಸ್ವೊಂದರಲ್ಲಿ ಜೈಲು ಸೇರಿದ್ದ. ಆದರೆ ಜೈಲಿನಲ್ಲಿ ಕೂತು ಗಾಂಜಾ ವ್ಯವಹಾರ ನಡೆಸುತ್ತಿದ್ದ. ಸದ್ಯ ಗಾಂಜಾ ಕೇಸ್‌ನಲ್ಲಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.