’RSS ಕೋಮು ಸಂಘಟನೆ, ಅಲ್ಲಿ ಪ್ರಣಬ್ ದಾ ಭಾಷಣ ಮಾಡಿದ್ದು ನನಗೆ ಯಕ್ಷ ಪ್ರಶ್ನೆಯಾಗಿದೆ’

’RSS ಕೋಮು ಸಂಘಟನೆ, ಅಲ್ಲಿ ಪ್ರಣಬ್ ದಾ ಭಾಷಣ ಮಾಡಿದ್ದು ನನಗೆ ಯಕ್ಷ ಪ್ರಶ್ನೆಯಾಗಿದೆ’

ಬೆಂಗಳೂರು: ಮಹಾತ್ಮ ಗಾಂಧೀಜಿಯವರನ್ನು ಕೊಂದ ಆರೆಸ್ಸೆಸ್ ಶಿಬಿರಕ್ಕೆ ಹೋಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಷಣ ಮಾಡಿದ್ದು ನನಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. RSS ಇದೆಯಲ್ಲ ಅದು ಕೋಮುವಾದಿ ಸಂಘಟನೆ. ಮಹಾತ್ಮ ಗಾಂಧಿಯವರನ್ನು ಕೊಂದ ಸಂಘಟನೆ ಆರೆಸ್ಸೆಸ್. ಅಂತಹದ್ದರಲ್ಲಿ 50 ವರ್ಷ ರಾಜಕಾರಣ ಮಾಡಿದ ಪ್ರಣಬ್ ಮುಖರ್ಜಿ ಅಲ್ಲಿಗೆ ಹೋಗಿ ಭಾಷಣ ಮಾಡುತ್ತಾರೆ ಅಂದ್ರೆ ಹೇಗೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಶ್ಚರ್ಯಪಟ್ಟರು.

ನಿನ್ನೆ ವಿಧಿವಶರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮೇಲಿನಂತೆ ಹೇಳಿದ್ದಾರೆ.

ಪ್ರಣಬ್ ಸುದೀರ್ಘ ರಾಜಕೀಯ ಜೀವನ ನಡೆಸಿದವರು. ದೇಶ ಕಂಡ ಕೆಲವೇ ಬುದ್ಧಿಜೀವಿಗಳಲ್ಲಿ ಇವರೂ ಒಬ್ಬರು. ಪ್ರಣಬ್ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಆಗಿದ್ದರು.ಸಮಸ್ಯೆ ಎದುರಾದಾಗ ಅವರು ಜವಾಬ್ದಾರಿ ಹೊರುತ್ತಿದ್ದರು. ತಮ್ಮ ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸುತ್ತಿದ್ದರು. ನಾನು ಕಾಂಗ್ರೆಸ್ ಸೇರಿದ ಮೇಲೆ ಭೇಟಿ ಮಾಡಿದ್ದೆ. ಆಗ ಅವರು ನನಗೆ ಕೆಲವು ಸೂಚನೆಗಳನ್ನ ಕೊಟ್ಟಿದ್ದರು.

ನಂತರ ಸಿಎಂ ಆದ ಮೇಲೆ ಅವರನ್ನ ಭೇಟಿ ಮಾಡುತ್ತಿದ್ದೆ. ಇದೇ ಕೆಪಿಸಿಸಿ ಕಚೇರಿಗೆ ಮತ ಕೇಳೋಕೆ ಬಂದಿದ್ದರು. ಶಾಸಕರ ಮತ ಕೇಳಲು ಪ್ರಣಬ್ ಮುಖರ್ಜಿ ಬಂದಿದ್ದರು. ನಮ್ಮ ಶಕ್ತಿಗಿಂತ ಹೆಚ್ಚಿನ ಮತಗಳು ರಾಜ್ಯದಿಂದ ಸಿಕ್ಕಿದ್ದವು. ಪ್ರಣಬ್ ರಾಜಕೀಯದಲ್ಲಿ ಅಜಾತ ಶತ್ರುವಾಗಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ರಾಜೀವ್ ‌ಗಾಂಧಿ ಪ್ರಧಾನಿಯಾಗಿದ್ದಾಗ ಪಕ್ಷ ತೊರೆದಿದ್ದರು ರಾಜ್ಯಕ್ಕೆ ಅವರು ನಾಲ್ಕೈದು ಬಾರಿ ಭೇಟಿ ನೀಡಿದ್ದರು. ಅವರು SCP, TSP ಯೋಜನೆಗೆ ಸಹಿ ಹಾಕಿಕೊಟ್ಟಿದ್ದರು. ಪ್ರಗತಿಪರ ವಿಚಾರ ಹೇಳಿದಾಗ ಪರವಾಗಿ ನಿಲ್ಲುತ್ತಿದ್ದರು. ವಿಶ್ವದ ಐವರು ಉತ್ತಮ ವಿತ್ತ ಸಚಿವರಲ್ಲಿ ಇವರೂ ಒಬ್ಬರು. ರಾಜೀವ್ ‌ಗಾಂಧಿ ಪ್ರಧಾನಿಯಾಗಿದ್ದಾಗ ಪಕ್ಷ ತೊರೆದಿದ್ದರು. ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಾರ್ಟಿ ಕಟ್ಟಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದರು. ಆಗ ಡಾ.ಮನಮೋಹನ್ ಸಿಂಗ್ RBI ಗವರ್ನರ್ ಆಗಿದ್ರು. ಬಳಿಕ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದರು. ಇದೇ ನೋಡಿ ವಿಪರ್ಯಾಸ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹಿರಿಯ ನಾಯಕರಿಬ್ಬರ ಬಗ್ಗೆ ಹೇಳಿದರು.

Click on your DTH Provider to Add TV9 Kannada